Advertisement
ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬ. ಜೀವನ ನಿರ್ವಹಣೆಗೆ ಸರಕಾರಿ ಕೆಲಸ. ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವಾಗಲೇ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತರಾಗುತ್ತಿದ್ದ ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದ ಹೆತ್ತವರಿಗೆ ಮಗಳಿಗೆ 23 ಕಳೆದರೂ ಕಂಕಣ ಕೂಡಲಿಲ್ಲ ಎಂಬ ನೋವು ಹಗಲಿರುಳು ಕಾಡತೊಡಗಿತು. ಈ ವರ್ಷ ಮದುವೆ ನಡೆಯದಿದ್ದರೆ ಇನ್ನೈದು ವರ್ಷ ಲಗ್ನ ಇಲ್ಲವೆಂದ ಯಾರೋ ಜ್ಯೋತಿಷಿಗಳ ಮಾತೇ ನಿಜವೆಂದು ನಂಬಿ, ಎಷ್ಟೋ ಪೂಜೆ- ಪುನಸ್ಕಾರಗಳನ್ನು ನಡೆಸಿದರು. ಬಲಿ ಕುರಿಯಂತೆ ತಲೆ ಒಡ್ಡಿದಳು ಪೃಥ್ವೀ. ಎಡೆಬಿಡದ ಸತತ ಪ್ರಯತ್ನದ ಫಲವಾಗಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಸ್ಥನಾದ ಹುಡುಗನೊಂದಿಗೆ ವಿವಾಹ ನಿಶ್ಚಯಿಸುವಲ್ಲಿ ಯಶಸ್ವಿಯಾದರು ಜನ್ಮದಾತರು. ಜನನ ನಮ್ಮ ಆಯ್ಕೆ ಅಲ್ಲದ ಘಟನೆ. ಮರಣ ನಮ್ಮ ಅಧೀನದಲ್ಲಿಲ್ಲದ ಅಂತ್ಯ, ಆದರೆ ಜೀವನ ಮಾತ್ರ ನಾವೇ ರೂಪಿಸಿಕೊಳ್ಳಬಹುದಾದ ಒಂದು ಪಯಣ. ಮದುವೆ ಎನ್ನುವ ಅತೀ ಮುಖ್ಯ ಘಟ್ಟದಲ್ಲಿ ಹುಡುಗನ ಪೂರ್ವಾಪರ ವಿಚಾರಿಸದೆ, ಆತನ ಆಕರ್ಷಕ ಬಾಹ್ಯ ಸೌಂದರ್ಯಕ್ಕೆ ಮನಸೋತು ತೆಗೆದುಕೊಂಡ ಅವಸರದ ನಿರ್ಧಾರ, ಮೊದಲ ತಪ್ಪು ಹೆಜ್ಜೆ ಎಂಬಂತೆ ಆಕೆಯ ಜೀವನಕ್ಕೆ ಮುಳುವಾಯಿತು. ಅತಿ ಮಧುರ ಮಾತು, ವಿನಯದ ನಡವಳಿಕೆ ಆಕೆಯ ಚಿತ್ತವನ್ನು ಬಹುಬೇಗ ಆತನತ್ತ ಸೆಳೆದು ಪ್ರಪಂಚವನ್ನು ಅರಿಯುವ ಮೊದಲೇ ಪ್ರೀತಿಯ ಬಲೆಯಲ್ಲಿ ಬಂಧಿಸಿತು.
Related Articles
Advertisement
ನನ್ನ ಮೊಗದಲ್ಲೇಕೆ ಈಗ ನಗು ಕಾಣುತ್ತಿದೆ ಎಂದೆನ್ನ ಕೇಳಬೇಡ…ಹೃದಯವೆಷ್ಟು ದುಃಖ ಸಹಿಸಬಲ್ಲುದು?
ಅರಿಯಲಾಗದ ಮೌನ…
ನಿಜವಲ್ಲದ ಸುಳ್ಳುಗಳು… ಸುಳ್ಳಾಗಿರುವ ಸತ್ಯಗಳು…
ಸತ್ಯ ಗೆಲ್ಲುವುದೋ? ಸುಳ್ಳು ಜಯಿಸುವುದೋ?
ಕಾಲ ಉತ್ತರಿಸುವುದೋ? ಮೌನ ಮಾತಾಗುವುದೋ? ಎನ್ನುವಂತಿದ್ದ ಆಕೆಯ ಮುಖಕನ್ನಡಿಯ ತಿಳಿಯಲು ಕಷ್ಟವಾಗಲಿಲ್ಲ. ನಾನೇ ಮುಂದುವರಿದು ಜೀವನದ ಕಡಲಿನಲ್ಲಿ ಇಳಿದರೆ ಮುತ್ತು-ರತ್ನ- ಹವಳಗಳು ಸಿಕ್ಕಾವು. ದಂಡೆಯಲ್ಲಿ ಕುಳಿತು ಅರಸಿದರೆ ಮಳಲು ಮಾತ್ರ ಸಿಕ್ಕೀತು. ಕಸ್ತೂರಿ ಮೃಗದಂತೆ ಪರಿಮಳಕ್ಕಾಗಿ ಕಾಡೆಲ್ಲ ಹುಡುಕದೇ, ಕಾಣದ ಕಡಲಿಗೆ ಹಂಬಲಿಸದೇ ನಿನ್ನಂತರಂಗದಲ್ಲಿರುವ ಸಂತಸದ ಕದ ತೆರೆದು ನೋಡು. ದೃಷ್ಟಿಯಂತೆ ಸೃಷ್ಟಿ. ಕಾಲದ ಚಲನೆ ನಿತ್ಯ ನಿರಂತರ. ಎಲ್ಲವನ್ನೂ ಮರೆಯಿಸುವ ಶಕ್ತಿ ಕಾಲಕ್ಕಿದೆ. ಕಾಲಾಯ ತಸ್ಮೈ ನಮಃ- ಮಗುವಿಗೆ ಉತ್ತಮ ಭವಿಷ್ಯ ರೂಪಿಸು, ಈ ಕಣ್ಮಣಿಯೇ ನಿನ್ನ ಸಂತಸವೆಂದು ಹೇಳಿ ಹೊರಡಲನುವಾದೆ. ವರ್ಷ ಮೂರು ಕಳೆದಿದೆ. ಬರಿಯ ಕಷ್ಟಗಳೇ ತುಂಬಿದ್ದ ನನ್ನ ಬದುಕಿನಲ್ಲೂ ಎಲ್ಲರ ಹಾರೈಕೆ ಆಶೀರ್ವಾದದಿಂದಲೂ ಕಲ್ಪನೆಗೂ ಮೀರಿ ಆನಂದದ ಚಿಲುಮೆ ಮೂಡಿದೆ.
ಭಾವಬಿಂಬ ಅದಾಗಲೇ ಪ್ರತಿಫಲಿಸಿದೆ ಗೆಳತಿ…
ತಪ್ಪು ಅರಸುತ್ತ ಕುಳಿತರೆ, ಚಿಕ್ಕದಾದೀತೇ ಪ್ರೀತಿ?
ಸಾವಿರ ನೋವ ಮರೆಯಿಸುವ ಶಕ್ತಿ ನಿನ್ನಲ್ಲಡಗಿದೆ ನನ್ನರಸಿ…
ಎಸೆಯದಿರು ನಿನ್ನ ಹೂಬಾಣಗಳನ್ನು, ಸಹಿಸಿಕೊಳ್ಳುವ ಸಾಮರ್ಥ್ಯ ಈ ಎದೆಗಿಲ್ಲ, ನನ್ನ ಹೃದಯದ ಮಿಡಿತವೇ ನೀನೆಂದು ಉಸಿರಿನಷ್ಟು ಪ್ರೀತಿಸುವ ಗಂಡ, ಸದಾ ಖುಷಿ ಕೊಡುವ ಮಗುವಿನ ಜೊತೆಯಲ್ಲಿ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸುವಲ್ಲಿ ತಲ್ಲೀನಳಾಗಿ ಗೆಳತಿಯತ್ತ ಗಮನಹರಿಸುವುದು ಬಹುಶಃ ಸಾಧ್ಯವಾಗಲಿಲ್ಲ. ತಿಂಗಳ ಹಿಂದೊಮ್ಮೆ ದೇವಸ್ಥಾನದಲ್ಲಿ ಯಾರೋ “ಪೃಥ್ವೀ… ಪೃಥ್ವೀ…’ ಎಂದು ಕರೆಯುತ್ತ ಮರೆಯಲ್ಲಿ ನಿಂತಿದ್ದ ಮಗುವಿನೊಂದಿಗೆ ಆಟವಾಡುವ ದೃಶ್ಯ ಗೋಚರಿಸಿತು. ಥಟ್ಟನೆ ಗೆಳತಿಯ ಮುಖ ಮಗುವಿನಲ್ಲಿ ಪ್ರತಿಫಲಿಸಿದಂತೆ ಭಾಸವಾಗಿ ಕೂಡಲೇ ಕರೆ ಮಾಡಿದೆ. ಆಕೆಯ ಸ್ವರದಲ್ಲಿದ್ದ ಏರಿಳಿತ, ನಗು, ಹಾಸ್ಯ, ಸಂತಸ ನನ್ನ ಮನಸ್ಸನ್ನು ತುಸು ಸ್ತಬ್ಧಗೊಳಿಸಿ ಮರುಪ್ರಶ್ನಿಸಿ ಪೃಥ್ವೀಯೇ ಹೌದೆಂಬುದನ್ನು ಖಾತ್ರಿಪಡಿಸಿಕೊಂಡೆ. ಕಟುಕ ಗಂಡನ ಜೊತೆ ಅನುದಿನವೂ ಯಾತನೆ ಪಡುತ್ತಿದ್ದ ನಿರಾಶಾವಾದಿ ಪೃಥ್ವೀ ಈಗ ಅವನಿಂದ ದೂರಾಗಿ ಸ್ವತಂತ್ರ ಬದುಕು ನಡೆಸುವಷ್ಟು ಸಬಲಳಾಗಿದ್ದಾಳೆ. ಮುಗ್ಧ ಮನಸ್ಸಿನ ವಸುಂಧರೆಯ ಮಡಿಲಲ್ಲಿ ನಾನೂ ಮಗುವಾಗಿದ್ದೇನೆ. ಹಸಿವು ತೃಪ್ತಿಯ ಸಂದಿಗ್ಧವಿಲ್ಲದಿದ್ದರೆ ಪ್ರೀತಿಯ ಸೊಲ್ಲು ಹುಟ್ಟುವುದಿಲ್ಲ, ಸಂತಸ ನಮ್ಮ ಮನಮಂದಿರದಲ್ಲಿ ಬೀಸುವ ಸುಗಂಧಭರಿತ ತಂಗಾಳಿಯಂತೆ. ಬಾಹ್ಯವಸ್ತುಗಳಿಂದ ಸಂತಸದ ಉತ್ಪತ್ತಿಯಲ್ಲ, ಅದು ಮಾರಾಟಕ್ಕೆ ಸಿಗುವ ವಸ್ತುವೂ ಅಲ್ಲ. ನಮ್ಮೊಳಗೆ ಉಂಟಾಗುವ ಮಾನಸಿಕ ಸ್ಪಂದನದ ಫಲ. ಸೂರ್ಯಾಸ್ತವಾದೊಡನೆ ಗಾಢಾಂಧಕಾರ, ಎಲ್ಲೆಲ್ಲೂ ದಟ್ಟ ಕಗ್ಗತ್ತಲು ಎಂದು ಗೋಳಿಡುವವನು ನಿರಾಶಾವಾದಿ. ಸೂರ್ಯ ಮುಳುಗಿದರೂ ಬಾನಲ್ಲಿ ಮಿನುಗುವ ನಕ್ಷತ್ರ, ಶಶಿಯನ್ನು ಕಂಡು ಸಮಾಧಾನ ಪಡುವವನು ಆಶಾವಾದಿ ಎಂದು ನೀನಂದಾಡಿದ ಮಾತಿನ ಕಟುಸತ್ಯವನ್ನು ತಿಳಿದು ಖುಷಿಯಿಂದ ಬದುಕುವ ಛಲ ನನ್ನಲ್ಲೂ ಮೂಡಿದೆ ಎಂದು ಪಟಪಟನೆ ಮುತ್ತುಗಳನ್ನುದುರುಸಿದಳು. ಗದ್ದುಗೆಯಲ್ಲಿ ಕುಳಿತವರೆಲ್ಲ ಸಿದ್ಧರಲ್ಲ
ನೆಲದ ಮೇಲೆ ಕುಳಿತವರೆಲ್ಲ ಪೆದ್ದರಲ್ಲ
ಮೌನವಾಗಿರುವವರೆಲ್ಲ ಮುಗ್ಧರಲ್ಲ
ಮಾತನಾಡುವವರೆಲ್ಲ ಒರಟರಲ್ಲ
ಸತ್ಯವನ್ನು ಸುಳ್ಳಾಗಿಸುವವರೆಲ್ಲ ಜ್ಞಾನಿಗಳಲ್ಲ
ಅಸತ್ಯವನ್ನು ನಂಬುವವರೆಲ್ಲ ಅಜ್ಞಾನಿಗಳಲ್ಲ
ಟೋಪಿ ಹಾಕುವವರೆಲ್ಲ ಬುದ್ಧಿವಂತರಲ್ಲ
ಟೋಪಿ ಹಾಕಿಸಿಕೊಳ್ಳುವವರೆಲ್ಲ ದಡ್ಡರಲ್ಲ
ಬದುಕು ದೊಂಬರಾಟದಂತೆ. ಹಗ್ಗದ ಮೇಲೆ ನಡೆಯುವಾಟದಲ್ಲಿ ಸ್ವಲ್ಪ$ಎಚ್ಚರ ತಪ್ಪಿದರೂ ಅಪಾಯ ಖಂಡಿತ. ತಾಳ್ಮೆಯಿಂದ ಬೀಳದೆ ನಡೆದರೆ ಯಶಸ್ಸು ನಿಶ್ಚಿತ. ಹಾಗೆಯೇ ಮದುವೆಯ ವಿಷಯದಲ್ಲಿ ಅವಸರಿಸದೆ, ತಾಳ್ಮೆಯಿಂದ ಅವಲೋಕಿಸಿ ಸರಿಯಾದ ನಿರ್ಣಯ ತೆಗೆದುಕೊಳ್ಳುವಲ್ಲಿ ಹೆತ್ತವರ ಪಾತ್ರ ಅತೀ ಪ್ರಮುಖವಾದುದು. ಕೈ ಬರಹವನ್ನು ಓದುವ ಜ್ಯೋತಿಷಿಗಳ ಮಾತಿಗೆ ಮರುಳಾಗುವ ಮೊದಲು, ಕೈ ಇಲ್ಲದವರಿಗೂ ಭವಿಷ್ಯವಿದೆಯೆಂಬ ಅಲ್ಪಜ್ಞಾನ ನಮ್ಮಲ್ಲಿರಬೇಕು. ಬಾಹ್ಯ ಸೌಂದರ್ಯದಿಂದ ಕ್ಷಣಿಕ ಸುಖ ಮಾತ್ರ ಸಾಧ್ಯ. ಅಂತರಂಗ ಶುದ್ಧಿಯಾದ ಪ್ರೀತಿ ಕೊನೆಯವರೆಗೂ ನಮ್ಮೊಂದಿಗಿರುತ್ತದೆ. ನಿಜವಾದ ಪ್ರೀತಿಗೆ ಹಣ, ಸೌಂದರ್ಯದ ಅಗತ್ಯವಿಲ್ಲ. ಪ್ರಾಮಾಣಿಕ ಭಾವನೆಗಳಷ್ಟೇ ಸಾಕು. ದೇವಸ್ಥಾನದ ಹೊರಗಿನಿಂದ ಬೀಸುತ್ತಿದ್ದ ತಣ್ಣನೆಯ ಗಾಳಿಯಿಂದ ದೇಹ ತಂಪಾಯಿತೇ ವಿನಾ ಮನಸ್ಸು ಮಾತ್ರ ಪ್ರಪಂಚದಲ್ಲಿನ ಮೂರ್ಖರನ್ನು ನೆನೆದು ಕುದಿಯುತ್ತಿತ್ತು. ಪೃಥ್ವೀಯಲ್ಲಿ ಮೂಡಿದ ಆತ್ಮವಿಶ್ವಾಸ, ದೃಢನಿರ್ಧಾರ ಬದುಕಿನ ಬಗೆಗಿನ ಆಶಾವಾದ ಇವೆಲ್ಲ ನನಗೆ ಖುಷಿ ಕೊಟ್ಟರೂ ಆಕೆ ತನಗೆ ಹಾಗೂ ತನ್ನ ಕಂದನಿಗಾದ ಅನ್ಯಾಯಕ್ಕಾಗಿ ಮನದ ಮೂಲೆಯಲ್ಲಿ ಕೊರಗದೆ ಇರಲಾರಳೇ ಎಂಬ ನೋವು ಪದೇ ಪದೇ ನನ್ನನ್ನು ಕಾಡುತ್ತಿದೆ. ಅಸಹಾಯಕ ಹೆಣ್ಣಿನ ಅಂತರಂಗವನ್ನು ಅರ್ಥೈಸಿಕೊಳ್ಳಲಾದೀತೆ? ಸುಮತಿ ಎಂ. ಹೆಮ್ಮಾಡಿ