ಬಲೆ ಹೆಣೆದ ಜೇಡ, ತೆರೆಯದ ಧೂಳು ಹಿಡಿದ ಬಾಗಿಲು, ಮಂಕಾದಕಪ್ಪು ಹಲಗೆ, ಡಬ್ಬದಲ್ಲಿ ಬೇಸರದಿಂದ ಸುಮ್ಮನೆ ಕೂತ ಬಳಪ, ಕಳಾಹೀನ ಮೈದಾನ, ಎಳೆ ದನಿಗಳ ಚಿಲಿಪಿಲಿ ಇಲ್ಲದೆ ಭಣಗುಟ್ಟುತ್ತಿರುವ ಕಾರಿಡಾರ್… ಇವೆಲ್ಲವೂ ಯಾವುದೋ ಹಾರರ್ ಸಿನಿಮಾದ ದೃಶ್ಯಗಳಲ್ಲ. ನಮ್ಮ ಶಾಲೆಗಳ ಸದ್ಯದ ಸ್ಥಿತಿ. ಕೋವಿಡ್ ಎಂಬ ಮಾರಿಯಿಂದ ದೇಗುಲದಂತಹ ಶಾಲೆಗಳು ಕಳೆ ಕಳೆದುಕೊಂಡುಕೂತಿವೆ. ಎಲ್ಲರದೂ ಒಂದೇ ಪ್ರಶ್ನೆ: ಮತ್ತೆ ಯಾವಾಗ ಆ ದಿನಗಳು ಬರುವುದು? ಶಾಲೆ ಯಾವಾಗ ಮತ್ತೆ ಆರಂಭವಾಗುವುದು?
ಯಾರ ಬಳಿಯೂ ಉತ್ತರವಿಲ್ಲ. ಇದರ ಮಧ್ಯೆ ಕೆಲವರು,ಕಾಯಿಲೆಬರ್ತದೆಅಂತಕಲಿಯೋದನ್ನು ನಿಲ್ಲಿಸಲು ಆಗುತ್ತಾ? ಇಷ್ಟು ದಿನ ಶಾಲೆಗಳನ್ನು ಆರಂಭಿಸದೇ ಉಳಿದಿದ್ದಾಯಿತು. ಈಗ ಶಾಲೆ ಗಳನ್ನು ತೆರೆದರೆ ತಪ್ಪೇನು? ಎನ್ನುವ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ. ಈ ಹೊತ್ತಲ್ಲಿ ಶಾಲೆಗಳನ್ನು ತೆರೆಯುವುದು ಅಷ್ಟು ಸುರಕ್ಷಿತವಾ? ರಾಜ್ಯದಲ್ಲಿ ಪ್ರತಿದಿನ ಹತ್ತು ಸಾವಿರದಷ್ಟು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಸಂದರ್ಭ ಇದು. ಇಂಥ ಪರಿಸ್ಥಿತಿಯಲ್ಲಿ ಮಕ್ಕಳು ಶಾಲೆಗೆ ಬರುವುದು ಸುರಕ್ಷಿತ ಅಂತ ಯಾವ ಧೈರ್ಯದ ಮೇಲೆ ಹೇಳಲು ಸಾಧ್ಯ?
ಪಾಠಕ್ಕಿಂತ ಪ್ರಾಣ ಮುಖ್ಯ : ಒಮ್ಮೆ ಹೀಗೊಂದು ಪ್ರಯೋಗ ನಡೆಯಿತು. ಕೋತಿ ಮತ್ತು ಅದರ ಮರಿಯನ್ನು ಒಂದು ಉದ್ದನೆಯ ಡಬ್ಬದಲ್ಲಿ ಬಿಡಲಾಯಿತು. ಅದಕ್ಕೆ ಒಂದಷ್ಟು ನೀರು ಹಾಕಲಾಯಿತು. ತಾಯಿ ಕೋತಿಯು ತನ್ನ ಮರಿಯನ್ನು ನೀರಿನಿಂದ ರಕ್ಷಿಸಲು ತನ್ನ ಹೊಟ್ಟೆ ಮೇಲೆ ಹಾಕಿಕೊಂಡು ನಿಂತಿತು. ಈಗ ಡಬ್ಬಕ್ಕೆ ಮತ್ತಷ್ಟು ನೀರು ಹಾಕಲಾಯಿತು. ಈಗ ತಾಯಿ ಕೋತಿ ತನ್ನ ಮರಿಯನ್ನು ಎದೆ ಮೇಲೆ ಇಟ್ಟು ಕೊಂಡಿತು. ಇಷ್ಟಾದನಂತರ ಇನ್ನಷ್ಟು ನೀರು ಹಾಕಲಾಯಿತು. ತಾಯಿ ಕೋತಿ ತನ್ನ ಮರಿಯನ್ನು ಹೆಗಲ ಮೇಲೆ ಕೂರಿಸಿಕೊಂಡಿತು. ಈಗ ಮತ್ತೂಮ್ಮೆ ಇನ್ನಷ್ಟು ನೀರು ಹಾಕಲಾಯಿತು.ಈ ಬಾರಿ ಹಾಕಿದ ನೀರಿನಿಂದ ತಾಯಿಕೋತಿ ಪೂರ್ತಿ ಮುಳುಗುವಂತಾಯ್ತು.
ಸಾವು ಇಲ್ಲ ಬದುಕು ಎಂಬಂಥ ಸಂದರ್ಭ ಎದುರಾದಾಗ, ತಾಯಿ ಕೋತಿ ತಾನು ಬದುಕಲು ಮರಿ ಕೋತಿಯನ್ನು ಕಾಲ ಕೆಳಗೆ ಹಾಕಿಕೊಂಡು ತಾನು ಎದ್ದು ನಿಂತು ತುಂಬಿದ ನೀರಿನಿಂದ ರಕ್ಷಣೆ ಪಡೆಯಿತು! ಯಾವುದೇ ಜೀವಿಯಾಗಲಿ, ಅದಕ್ಕೆ ಪ್ರಾಣ ಅನ್ನುವುದು ಎಷ್ಟು ಮುಖ್ಯ ಅನ್ನುವುದಕ್ಕೆ ಇದೊಂದು ಉದಾಹರಣೆ. ಬದುಕಲ್ಲಿ ಏನೇ ಇರಲಿ; ಅದೆಲ್ಲವೂ ಪ್ರಾಣ ಇದ್ದರೆ ಮಾತ್ರ ಸಾಧ್ಯ. ಪ್ರಾಣವೇ ಇಲ್ಲದಿದ್ದರೆ ಎಲ್ಲಿದೆ ಬದುಕು? ಜೀವಇದ್ದರೇನೆ ಜೀವನ, ಮತ್ತೂಂದು. ಕೋವಿಡ್ ಎಷ್ಟೊಂದು ಭಯಂಕರ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಕೆಲವರ ಜೀವವನ್ನು ಅದು ನೋಡು ನೋಡುತ್ತಿದ್ದಂತೆ ಸೆಳೆದುಕೊಂಡು ಓಡಿಬಿಟ್ಟಿದೆ. ಅದೆಷ್ಟೇ ಶಿಸ್ತಿನ ಪಾಠ ಹೇಳಿದರೂ ಮಕ್ಕಳನ್ನು ಗುಂಪುಗೂಡದೇ ಇರುವಂತೆ ಕಂಟ್ರೋಲ್ ಮಾಡಲು ಕಷ್ಟ. ಹೀಗಿರುವಾಗ, ಕೋವಿಡ್ ಉಲ್ಬಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಮಕ್ಕಳು ಶಾಲೆಗೆ ಬರುವುದು ಅದು ಅವರ ಜೀವದೊಂದಿಗೆ ಆಡುವ ಚೆಲ್ಲಾಟವೇ ಹೊರತು ಬೇರೆಯಲ್ಲ. ಹೆಚ್ಚಿನ ಸಂಖ್ಯೆಯ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿಲ್ಲ. ಪರಿಸ್ಥಿತಿಯ ಅರಿವಿದ್ದು ಕೂಡ ಕೆಲವರು ಶಾಲೆಗಳನ್ನೂ ತೆರೆಯಬಹುದಲ್ಲ… ಎಂಬ ಮಾತಾಡುತ್ತಾರೆ
ಎಷ್ಟೇ ಆಗಲಿ ಮಕ್ಕಳಲ್ಲವೇ? : ಕೋವಿಡ್ ಭೀತಿಯಿಂದ ಮೊಟಕುಗೊಂಡವು. ಅಧಿವೇಶನದ ಸಮಯದಲ್ಲಿ ಎಷ್ಟೆಲ್ಲಾ ಕಾಳಜಿ ವಹಿಸಿದರೂ ಮಂತ್ರಿ- ಶಾಸಕರುಗಳೇ ಕೋವಿಡ್ ಸೋಂಕಿಗೆ ತುತ್ತಾದರು. ಇದೆಲ್ಲಾ ಗೊತ್ತಿದ್ದರೂ ಶಾಲೆಗಳನ್ನು ಆರಂಭಿಸುವ ಬಗ್ಗೆ ಮಾತಾಡುವುದು ಎಷ್ಟು ಸರಿ? ಕೊರೊನಾ ಹರಡದಂತೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ನಂತರವೇ ಶಾಲೆ ಆರಂಭಿಸ ಬಹುದು ಎಂಬ ಮಾತನ್ನೂ ಕೆಲವರು ಹೇಳುತ್ತಿದ್ದಾರೆ. ಅದೂ ಕಷ್ಟದಕೆಲಸವೇ. ಏಕೆಂದರೆ, ಅಗತ್ಯವಿರುವ ಅಷ್ಟೂ ಮುಂಜಾಗ್ರತಾ ಕ್ರಮಗಳನ್ನು ಎಲ್ಲಾ ಶಾಲೆಗಳಲ್ಲಿ ತೆಗೆದುಕೊಳ್ಳಲು ಸಾಧ್ಯವಾ? ಗ್ರಾಮೀಣ ಭಾಗದ ಶಾಲೆಗಳಿಗೆ ದಿನವೂ ಸ್ಯಾನಿಟೈಸ್ ಮಾಡಿಸಲು ಸಾಧ್ಯವಾ? ಅದಿರಲಿ, ದೊಡ್ಡವರಾದ ನಾವುಗಳು ಎಷ್ಟರ ಮಟ್ಟಿಗೆ ಸಾಮಾಜಿಕ ಅಂತರದಲ್ಲಿ ಬದುಕುತ್ತಿದ್ದೇವೆ. ಎಷ್ಟು ಜನ ಸರಿಯಾಗಿ ಮಾಸ್ಕ್ ಧರಿಸುತ್ತಿದ್ದೇವೆ? ಶೇ. 41ರಷ್ಟು ಜನ ಮಾತ್ರ ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ ಅಂದರೆ ನೀವು ನಂಬಲೇಬೇಕು. ದೊಡ್ಡವರು ಅನ್ನಿಸಿಕೊಂಡವರೇ ಈ ಮಟ್ಟಿನ ಬೇಜವಬ್ದಾರಿಯಲ್ಲಿರುವಾಗ, ಏನೂ ಅರಿಯದ ಮಕ್ಕಳಿಂದ ಅದನ್ನು ನಿರೀಕ್ಷಿಸುವುದಾದರೂ ಹೇಗೆ? ನಾವು ಎಷ್ಟೇ ಹೇಳಿದರೂ ಮಕ್ಕಳು ಶಾಲೆಗೆ ಬರುವಾಗಮತ್ತು ಹೋಗುವಾಗ ಗುಂಪು ಗುಂಪಾಗಿಯೇ ಇರುತ್ತಾರೆ.
ಬಸ್‌ಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಅವರನ್ನು ಶಾಲೆಗೆ ಕರೆತರುವುದು ಹೇಗೆ? ದಿನಪೂರ್ತಿ ಮಾಸ್ಕ್ ಹಾಕಿಕೊಂಡೇ ಇರಲು ಅವರುಗಳಿಂದ ಸಾಧ್ಯವಾ? ಒಂದು ಮಗುವಿಗೆ ಕೋವಿಡ್ ಬಂದರೆ ಅದು ಇಡೀ ಶಾಲೆಯನ್ನು ಆವರಿಸಿಕೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಇಂಥ ಸಂದರ್ಭದಲ್ಲಿ, ಕೋವಿಡ್ ಸೋಂಕು ತಗುಲಿಸಿಕೊಂಡ ಮಗು, ಆ ಬಗ್ಗೆ ಏನೇನೂ ಅರಿವಿಲ್ಲದೆ, ಶಾಲೆಯಿಂದ ಮನೆಗೆ ಬಂದು ನೇರವಾಗಿ ಅಜ್ಜಿ- ತಾತನ ಮಡಿಲಲ್ಲಿ ಆಡಲು ಕುಳಿತರೆ? ಆ ನೆಪದಲ್ಲಿ ಅಜ್ಜಿ-ತಾತನಿಗೆ ಕೋವಿಡ್ ಅಮರಿಕೊಂಡರೆ… ಮುಂದಿನ ಪರಿಣಾಮವನ್ನು ಊಹಿಸುವುದೂ ಅಸಾಧ್ಯ. ಅಮೆರಿಕದಲ್ಲಿ ಶಾಲೆ ಆರಂಭಿಸಿದ ಮರುದಿನದಿಂದಲೇ ಕೋವಿಡ್ ಹೆಚ್ಚಾದ ಉದಾಹರಣೆ ನಮ್ಮ ಮುಂದಿದೆ. ಇಷ್ಟೆಲ್ಲಾ ಇರುವಾಗ ಶಾಲೆ ತೆರೆಯಲು ಆತುರ ಪಡುವುದು ಖಂಡಿತ ಸರಿಯಲ್ಲ.
ವಿದ್ಯಾಗಮ ಉತ್ತಮ ಪ್ರಯೋಗ : ಕೋವಿಡ್ ಇಂಥ ದಿನವೇ ಅಥವಾ ಇಂಥ ತಿಂಗಳೇಕಣ್ಮರೆಯಾಗ ಬಹುದು ಎಂದುಖಚಿತವಾಗಿ ಹೇಳಲು ಸಾಧ್ಯವಿಲ್ಲ. ಲಸಿಕೆಯ ಆಸೆ ಇನ್ನೂ ತುಂಬಾ ದೂರ ಇದೆ. ಅಲ್ಲಿಯವರೆಗೂ ಶಾಲೆ ನಡೆಸದೇ ಇರಲು ಸಾಧ್ಯವಾ? ಮಕ್ಕಳ ಶೈಕ್ಷಣಿಕ ಬದುಕಿನ ಗತಿಯೇನು? ಅದಕ್ಕೊಂದು ಪರಿಹಾರ ಹುಡುಕಿಕೊಳ್ಳಬೇಕಿದೆ.ಈನಿಟ್ಟಿನಲ್ಲಿ ಈಗ ನಡೆಯುತ್ತಿರುವ “ವಿದ್ಯಾಗಮ’ ಒಂದು ಉತ್ತಮ ಪ್ರಯೋಗ. ಶಾಲೆಯೇ ಮಗುವಿನ ಬಳಿ ಬರುತ್ತದೆ. ವಠಾರಗಳೇಕಲಿಕಾಕೇಂದ್ರಗಳಾಗಿವೆ. ಮುಂದುವರಿದು ಆನ್ ಲೈನ್ ತರಗತಿಗಳನ್ನು ಆರಂಭಿಸಬಹುದು. ಸಮುದಾಯದಸಹಕಾರದೊಂದಿಗೆ ಮಗುವುಕಲಿಕೆಯಲ್ಲಿ ತನ್ನ ನಿರಂತರತೆಯನ್ನು ಕಾಯ್ದುಕೊಳ್ಳಲು ಅನುಕೂಲವಾಗುವಕ್ರಮಗಳನ್ನುಕೈಗೊಳ್ಳಬೇಕಿದೆ.
-ಸದಾಶಿವ್ ಸೊರಟೂರು