Advertisement

ಖಾಲಿ ರಸ್ತೆ ಖಾಲಿ ರಸ್ತೆಗಳಂತೆ ಬದುಕೂ ಬರಡು

12:54 PM Apr 23, 2020 | mahesh |

ಬೆಂಗಳೂರು: ಲಾಕ್‌ಡೌನ್‌ ಪರಿಣಾಮ ನಗರದ ಜನರಿಗೆ ಟ್ರಾಫಿಕ್‌ನಿಂದ ಮುಕ್ತಿ ಸಿಕ್ಕಿದೆ. ವಾಯುಮಾಲಿನ್ಯ ಪ್ರಮಾಣ ತಗ್ಗಿದೆ. ಅಸ್ತಮದಂತಹ ಕಾಯಿಲೆಗಳೂ ಕಡಿಮೆಯಾಗಿರಬಹುದು. ಆದರೆ, ಇದೇ ಟ್ರಾಫಿಕ್‌ ಅನ್ನು ಅವಲಂಬಿಸಿದ್ದ ಮತ್ತೂಂದು ವರ್ಗವೂ ಇತ್ತು. ಅದರ ಬದುಕು ಈಗಿರುವ ರಸ್ತೆಗಳಂತೆಯೇ ಬರಿದಾಗಿವೆ!

Advertisement

ವಾಹನಗಳದಟ್ಟಣೆಗೆ ತಕ್ಕಂತೆ ಸಿಗ್ನಲ್‌ಗ‌ಳಲ್ಲಿ ಅವುಗಳು ಕಳೆಯುವ ಸಮಯ ಕೂಡ ಹೆಚ್ಚಳ ಆಗುತ್ತಿತ್ತು. ಈ ಅವಧಿಯಲ್ಲೇ ಚಿಕ್ಕಮಕ್ಕಳನ್ನು ಕಂಕುಳಲ್ಲಿ ಕೂರಿಸಿಕೊಂಡು ಚಾರ್ಜರ್‌, ಆಟಿಕೆ ಸಾಮಗ್ರಿ, ಕನ್ನಡಕ, ಜಾಕೆಟ್‌, ಹಣ್ಣು, ಮೊಬೈಲ್‌ ಸ್ಟಾಂಡ್‌ಗಳನ್ನು ಹಿಡಿದು ವಾಹನಗಳ ಹತ್ತಿರ ಓಡಿಬರುವ ನೂರಾರರು ಜನ ಇದ್ದರು. ಇಡೀ ದಿನದಲ್ಲಿ ಸಾವಿರ ಸಿಗ್ನಲ್‌ಗ‌ಳು ಬಿದ್ದರೂ, ಅವರಿಗೆ ಅಬ್ಬಬ್ಟಾ ಎಂದರೆ 300-500 ರೂ. ಸಿಗುತ್ತಿತ್ತು. ಇದು ಆ ಕುಟುಂಬಗಳಿಗೆ ಆಧಾರ ಆಗಿತ್ತು. ಆದರೆ, ಲಾಕ್‌ಡೌನ್‌ ಈ ಪುಡಿಗಾಸಿಗೂ ಪೆಟ್ಟುಕೊಟ್ಟಿದೆ.

ನಗರದ ಚಾಲುಕ್ಯ ವೃತ್ತ, ಮಿನರ್ವ ವೃತ್ತ, ಕೆ.ಆರ್‌. ವೃತ್ತ, ಟೌನ್‌ ಹಾಲ್‌, ವಿಧಾನಸೌಧ, ಲಾಲ್‌ಬಾಗ್‌, ಕೆ.ಆರ್‌. ಮಾರುಕಟ್ಟೆ, ಮೆಜೆಸ್ಟಿಕ್‌ ಸೇರಿದಂತೆ ಪ್ರಮುಖ ಸಿಗ್ನಲ್‌ಗ‌ಳಲ್ಲಿ ಸೀಜನ್‌ಗೆ ತಕ್ಕಂತೆ ವಿವಿಧ ಪ್ರಕಾರದ ಸಾಮಗ್ರಿಗಳ ಮಾರಾಟ ಮಾಡುತ್ತಿದ್ದರು. “ಪೀಕ್‌ ಅವರ್‌’ ಈ ವರ್ಗದ ಜನರ ಪಾಲಿಗೆ ಹೆಚ್ಚು ದುಡಿಮೆಯ ಸಮಯ. ಉಳಿದ ಸಮಯದಲ್ಲಿ ವಾಹನ ದಟ್ಟಣೆ ಕಡಿಮೆ ಆಗಿರುವುದರಿಂದ ತುಸು ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ಇರುತ್ತಿದ್ದರು. ನಂತರ ಮೇಲ್ಸೇತುವೆ ಅಥವಾ ಅಲ್ಲಲ್ಲಿ ನಿರ್ಮಿಸಿಕೊಂಡ ಶೆಡ್‌ಗಳು ಸೂರು ಆಗಿರುತ್ತಿದ್ದವು. ವಾಹನ ಸಂಚಾರ ಸ್ತಬ್ದವಾಗುತ್ತಿದ್ದಂತೆ ಅವರ ಬದುಕಿನ ಬಂಡಿ ಕೂಡ ನಿಂತುಬಿಟ್ಟಿದೆ.

ಅನ್ನಕ್ಕಾಗಿ ಕೈಚಾಚುವ ಅನಿವಾರ್ಯ; ಬೇಸರ: ರಸ್ತೆ ಸಿಗ್ನಲ್‌ಗ‌ಳಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರಲ್ಲಿ ಬಹುತೇಕರು ಹೊರರಾಜ್ಯದವರೇ ಆಗಿದ್ದರು. ವಸ್ತುಗಳನ್ನು ಹೊರರಾಜ್ಯಗಳಿಂದ ಸಗಟು ರೂಪದಲ್ಲಿ ಖರೀದಿಸಿ, ಇಲ್ಲಿ ಮಾರಾಟ ಮಾಡುತ್ತಿದ್ದರು. ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ರಾಜ್ಯದ ಅತ್ಯಂತ ಬಡವರ್ಗದ ಜನ ಈ ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು. “ನಿತ್ಯ ನಾನು ವಿಜಯನಗರ ಸಿಗ್ನಲ್‌ನಲ್ಲಿ ತಂಪು ಕನ್ನಡಕ ಮಾರಾಟ ಮಾಡುತ್ತಿದ್ದೆ. ದಿನಕ್ಕೆ 200-300 ರೂ. ಸಿಗುತ್ತಿತ್ತು. ಸಂಸಾರ ಹೇಗೋ ನಡೆಯುತ್ತಿತ್ತು. ಆದರೆ, ಲಾಕ್‌ಡೌನ್‌ ಅದಕ್ಕೂ ಕಲ್ಲು ಹಾಕಿದೆ. ಸರ್ಕಾರ ಅಥವಾ ಸಂಘ-ಸಂಸ್ಥೆಗಳು ನೀಡುವ ಆಹಾರ ಪೊಟ್ಟಣ ಅಥವಾ ಆಹಾರ ಸಾಮಗ್ರಿ ಗಳಿಗಾಗಿ ಕೈವೊಡ್ಡಬೇಕಾಗಿದೆ’ ಎಂದು ಮಹೇಶ್‌ ಬೇಸರ ವ್ಯಕ್ತಪಡಿಸಿದರು.

ಸಿಗ್ನಲ್‌ಗ‌ಳಲ್ಲಿ ಆಟಿಕೆ ಮೊದಲಾದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರು ನಿರ್ದಿಷ್ಟ ಸಿಗ್ನಲ್‌ಗ‌ಳನ್ನು ಗೊತ್ತುಪಡಿಸಿಕೊಳ್ಳುತ್ತಿದ್ದರು. ಗುಂಪು-ಗುಂಪಾಗಿ ಕುಟುಂಬ
ಸಮೇತ ಈ ಕಾಯಕದಲ್ಲಿ ತೊಡಗಿ ಕೊಂಡಿ ರು ತ್ತಿದ್ದರು. ಮತ್ತು ತಮ್ಮ ಸಿಗ್ನಲ್‌ಗೆ ಬೇರೆಯವರು ವಸ್ತುಗಳನ್ನು ಮಾರಾಟ ಮಾಡಲು ಬಿಡುತ್ತಿರಲಿಲ್ಲ. ದಿನಕ್ಕೆ ನೂರರಿಂದ ಸಾವಿರ ರೂ.ವರೆಗೂ ಸಂಪಾದನೆ ಮಾಡುತ್ತಿದ್ದರು. ನಗರದಲ್ಲಿ ಅವರಿಗೆ ಶಾಶ್ವತ ನೆಲೆ ಇರಲಿಲ್ಲ. ಸಿಗ್ನಲ್‌ ಸಮೀಪದಲ್ಲಿ ಇರುವ ಜಾಗಗಳನ್ನೇ ತಮ್ಮ ಮನೆಯಾಗಿಸಿಕೊಳ್ಳುತ್ತಿದ್ದರು. ತಮ್ಮಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ, ಅದರಿಂದ ಜೀವನ ನಡೆಸುತ್ತಿದ್ದ ನೂರಾರು ಕುಟುಂಬಗಳು ಇಂದು ಕಾಣಸಿಗುತ್ತಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

Advertisement

ಪ್ರಯಾಣಿಕರೇ ಗ್ರಾಹಕರಾಗಿದ್ದರು…
ಕೇವಲ ಸಿಗ್ನಲ್‌ಗ‌ಳಲ್ಲ; ಟೋಲ್‌ಗೇಟ್‌, ಬಿಎಂಟಿಸಿ, ಕೆಂಪೇಗೌಡ ಬಸ್‌ ನಿಲ್ದಾಣ, ಪ್ರಮುಖ ರೈಲು ನಿಲ್ದಾಣಗಳು, ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆಯಂತಹ ಪ್ರತಿಷ್ಠಿತ ಮಾರ್ಗಗಳಲ್ಲೂ ಈ ವರ್ಗ ವಿನೂತನ ವಸ್ತುಗಳನ್ನು ಹಿಡಿದು ಜನರ ಗಮನ ಸೆಳೆಯುತ್ತಿತ್ತು. ಹೆಚ್ಚಾಗಿ ಟ್ಯಾಕ್ಸಿ ಚಾಲಕರು, ಆಟೋ ಚಾಲಕರು, ಕೆಲ ಕಾರು ಮಾಲೀಕರು ಇವರ ಗ್ರಾಹಕರು. ಈಗ ಯಾವುದೇ ವಾಹನ ಸಂಚಾರವಿಲ್ಲದೆ ವ್ಯಾಪಾರ- ವ್ಯವಹಾರವೂ ಇಲ್ಲದಿರುವ ಕಾರಣ ಅವರ ಜೀವನ ಮೂರಾಬಟ್ಟೆಯಾಗಿದೆ.

ಸೀಸನ್‌ಗಳಲ್ಲಿ ಮಾತ್ರ ವ್ಯಾಪಾರ
ರಸ್ತೆ ಸಿಗ್ನಲ್‌ ಮಳೆಗಾಲದಲ್ಲಿ ರೈನ್‌ ಕೋಟ್‌, ಜಾಕೇಟ್‌, ಕೂಲಿಂಗ್‌ ಗ್ಲಾಸ್‌, ಹೆಲ್ಮೆಟ್‌, ಬೇಸಿಗೆ ಮಜ್ಜಿಗೆ, ಸೌತೆಕಾಯಿ, ಚಿಪ್ಸ್‌, ಬಿಸ್ಕೆಟ್‌, ಕಲ್ಲಂಗಡಿ ಸೇರಿದಂತೆ ವಿವಿಧ ಬಗೆಯ ಹಣ್ಣುಗಳು, ನಾನಾ ಬಗೆಯ ಆಟಿಕೆ ಮತ್ತು ಚಳಿಗಾಲಯ ಕೆಲವೊಂದು ವಸ್ತುಗಳನ್ನು ಮಾರಾಟ ಮಾಡುವವರ ಬದುಕು ಸೀಜನ್‌ ವ್ಯಾಪಾರವನ್ನು ಅವಲಂಬಿಸಿಕೊಂಡಿದೆ. ಈ ಬೇಸಿಗೆ ಇವರ ಬದುಕಿನಲ್ಲಿ ಕರಾಳ ಬೇಸಿಗೆಯಾಗಲಿದೆ. ಸಿಗ್ನಲ್‌ನಲ್ಲಿ ವ್ಯಾಪಾರ ಮಾಡುತ್ತಿದ್ದರೂ ಯಾವತ್ತು ಸಂಚಾರ ಅಡಚಣೆ ಮಾಡುತ್ತಿರಲಿಲ್ಲ. ಅವರಪಾಡಿಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಸಂಚಾರ ಪೊಲೀಸರೊಬ್ಬರು ತಿಳಿಸಿದರು.

● ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next