ಹೈಸ್ಕೂಲಿನಲ್ಲಿ ಏಕಾಂತವನ್ನು ಸಂಭ್ರಮಿಸುತ್ತಿದ್ದ ನಾನು ಪಿಯು ಕಾಲೇಜಿನಲ್ಲಿಯೂ ಹಿಮಾಲಯದಿಂದ ಬಂದ ಭಯಂಕರ ಬೈರಾಗಿಯಂತೆ ಇರಲು ಇಚ್ಛಿಸಿದ್ದೆ. ಮೊದಲ ದಿನ ನನ್ನ ಕ್ಲಾಸಿನಿಂದ ಹೊರಗೆ ಬರುವಾಗ ಮುಂದಿನಿಂದ ಬಂದ ಮೂರು ಜನ ಅತ್ಯಂತ ಉತ್ಸಾಹದಿಂದ “”ಹಾಯ್ ರಕ್ಷಾ , ನಿನ್ನನ್ನು ಎಷ್ಟು ಮಿಸ್ ಮಾಡಿದ್ವಿ ಗೊತ್ತಾ? ನಾಟಕ ಮಾಡುವಾಗಲೆಲ್ಲಾ ನಿನ್ನದೇ ನೆನಪು” ಎನ್ನುವಾಗ ಸ್ವಲ್ಪ ಮುಜುಗರ ಅನ್ನಿಸಿದ್ದು ಸುಳ್ಳಲ್ಲ. ಅಂದಿನಿಂದ ನಮ್ಮ ಬಾಲ್ಯದ ಗೆಳೆತನ, ಮರೆಯಲಾಗದ ಸಂಬಂಧವಾಗಿ ಮಾರ್ಪಟ್ಟಿತು. ಹೇಗೆ ಎಂದು ನನಗೆ ತಿಳಿಯಲಿಲ್ಲ.
ನಾನು ನನ್ನನ್ನು ಮರೆತು ಅವರೊಂದಿಗೆ ಬೆರೆತು, ಅವರೇ ನಾನಾಗಿರುವಾಗ, ಅವರು ಅವರಲ್ಲಿ ನನ್ನನ್ನು ಉಳಿಸಿಕೊಂಡರು. ಪ್ರತಿಯೊಂದು ವಿಷಯದಲ್ಲೂ ತರ್ಕ ಹುಡುಕುತ್ತಿದ್ದ ನಾವು, ಊಟ ಮುಗಿಸಿ ಚರ್ಚೆಗೆ ಕುಳಿತುಬಿಡುತ್ತಿದ್ದೆವು. ನಮ್ಮ ಚರ್ಚೆ ನಮ್ಮ ತರಗತಿಗೆ ಸೀಮಿತವಾಗದೆ, ನಮ್ಮ ಪ್ರಾಧ್ಯಾಪಕರ ಕೊಠಡಿಗೂ ತಲುಪುತ್ತಿತ್ತು. (ಅದು ನಮ್ಮ ತಪ್ಪಲ್ಲ, ಇಂದಿಗೂ ವಾಯ್ಸ ಪಿಚ್‌ನ ಸಮಸ್ಯೆಯಿದೆ)ಒಂದು ಬಾರಿ ನಮ್ಮ ಭೌತಶಾಸ್ತ್ರ ಉಪನ್ಯಾಸಕರು ಬಂದು, “”ರೇಖಾ, ಯು ಫಾಟ್ ವಿದ್ ಯುವರ್ ಫ್ರೆಂಡ್ಸ್ ರೈಟ್?” ಎಂದಾಗ ನಾಚಿಕೆಯಿಂದ, “”ಇಲ್ಲ ಸಾರ್, ಚರ್ಚೆ ಮಾಡಿದ್ದು” ಎಂದು ಕಿಸಿಕ್ ಎಂದು ನಕ್ಕುಬಿಟ್ಟೆ. ಉಳಿದವರೆಲ್ಲಾ ಗೋಳ್ಳೋ ಎಂದು ನಕ್ಕರು. ಅಂದಿನಿಂದ ಧ್ವನಿ ಜಾಸ್ತಿಯಾದಾಗಲೆಲ್ಲ ನಾವು ಒಬ್ಬರನ್ನೊಬ್ಬರು ಎಚ್ಚರಿಸುತ್ತಿದ್ದೆವು. ಹೇಗೂ ಗೆಳೆತನ ಎಂದರೆ ಇದೇ ತಾನೆ? ಒಬ್ಬರನ್ನೊಬ್ಬರು ಎಚ್ಚರಿಸುವುದು. ಅದು ನೀರಸ ಗಣಿತಶಾಸ್ತ್ರ ತರಗತಿಯಲ್ಲಿರಬಹುದು ಅಥವಾ ಜೀವನದಲ್ಲಿಯೂ ಆಗಿರಬಹುದು.
ಜೀವನ ನಾಟಕ ರಂಗ ಎಂಬಂತೆ ನಮಗೆ ನಾಟಕವೇ ಜೀವನವಾಗಿತ್ತು. ನಾವು ಕಾಲೇಜಿನಲ್ಲಿ ನಾಟಕದ ಹಿಂದೆ ಅಲೆದಾಡಿದ್ದು ಅಷ್ಟಿಷ್ಟಲ್ಲ. ನಾಟಕದಲ್ಲಿ ಭಯಂಕರ ಆಸಕ್ತಿ ಇಲ್ಲದ ನನಗೆ ಮೊದಲು ನನ್ನ ಗೆಳೆತಿಯರ ನಾಟಕದ ಹುಚ್ಚು ವಿಲಕ್ಷಣವೆನಿಸುತ್ತಿತ್ತು. ಆದರೆ ಅದರ ಆನಂದ ಮತ್ತೆ ತಿಳಿಯಿತು. ತರಗತಿ ತಪ್ಪಿಸಿ ನಾಟಕ ಅಭ್ಯಾಸ ಮಾಡುವುದು, ಸುತ್ತಾಟ, ಅಲೆದಾಟ, ಹೊಗಳಿಕೆ, ತೆಗಳಿಕೆ ಎಲ್ಲವೂ. ಮತ್ತೆ ಕೆಲವೊಮ್ಮೆ ಶೂನ್ಯ. ಎಲ್ಲಾ ಗೆಳೆಯರಂತೆ ನಾವೂ ಎಂದೆಂದೂ ಒಂದಾಗಿ ಬದುಕೋಣ ಎಂದು ಶಪಥ ಮಾಡಿದ್ದೆವು. ಇದು ತರ್ಕರಹಿತವಾಗಿರಲಿಲ್ಲ. ಏಕೆಂದರೆ, ಪ್ರತೀ ಬಾರಿ ನಮ್ಮ ಹುಸಿ ಮುನಿಸನ್ನು ನಾಟಕ ಎಂಬ ಅಸ್ತ್ರ ಪುಡಿ ಪುಡಿ ಮಾಡಿ, ನಮ್ಮನ್ನು ಒಂದೆಡೆ ಸೇರಿಸುತ್ತಿತ್ತು. ಇದೇ ನಾಟಕ ಅಸ್ತ್ರದ ನಂಬಿಕೆಯಲ್ಲಿ ಕಾಲೇಜಿನಿಂದ ಹೊರಗೆ ಬಂದೆವು. ನಾಟಕದ ಹುಚ್ಚು ಬಿಡಲಿಲ್ಲ. ಆದರೆ ಪರಿಸ್ಥಿತಿ ಬದಲಾಯಿತು. ಒಬ್ಬಳು ಕೋಳಿ ಗೂಡಿಗೆ (ಯೂನಿವರ್ಸಿಟಿ), ಇನ್ನೊಬ್ಬಳು ಜೈಲಿಗೆ (ಮದುವೆಯೆಂಬುದು ಬಂಧನವಂತೆ) ಮತ್ತೂಬ್ಬಳು ಮತ್ತು ನಾನು ಸಮುದ್ರಕ್ಕೆ (ಉದ್ಯೋಗ ಹುಡುಕುತ್ತಾ, ಜೀವನವೆಂಬ ಸಮುದ್ರ) ನಾಟಕ ಕರೆದರೆ ಎಲ್ಲವನ್ನೂ ಬಿಟ್ಟು ಓಡುತ್ತಿದ್ದ ನಮಗೆ ಪರಿಸ್ಥಿತಿಯನ್ನು ಡಬಲ್‌ಶೂಟ್ ಮಾಡಲಾಗಲಿಲ್ಲ. ಮೊನ್ನೆ ಅರೆಹೊಳೆ ರಂಗ ಹಬ್ಬದ “ಜರ್ನಿ ಥಿಯೇಟರ್’ನ ನಾಟಕ ನೋಡುತ್ತಿದ್ದ ನನಗೆ, ನನ್ನ ಅಕ್ಕಪಕ್ಕದ ಕುರ್ಚಿಗಳನ್ನು ಖಾಲಿ ನೋಡಿ ಏನೋ ಹೊಟ್ಟೆಯೊಳಗೆ ನೋವಾದಂತೆ ತೋರಿತು. ಕಾಲೇಜಿನಿಂದ ಹೊರಬರುವಾಗ ನಿನ್ನನ್ನು ಮಿಸ್ ಮಾಡಲ್ಲ ಎಂದಿದ್ದ ನಾನು, ಮೊನ್ನೆ “ಮಿಸ್‌ಯೂ’ ಪದದ ಅರ್ಥ ತಿಳಿದುಕೊಂಡೆ. ಆಗ ನನಗೆ ಭಯಂಕರ ಬೈರಾಗಿ ಜೀವನವೇ ಒಳ್ಳೆದಿತ್ತು. ಅಯ್ಯೋ ಹಾಳು ಮಾಡಿದರಲ್ಲ ನನ್ನ, ಈಗ ಈ ಹೊಟ್ಟೆನೋವಿಗೆ ಏನು ಮಾಡಲಿ ಎಂದು ಯೋಚಿಸುತ್ತಾ ನನ್ನ ಗೆಳತಿಗೆ ಫೋನ್ ರಿಂಗಿಸಿದೆ. “ಹಲೋ’ ಎನ್ನುವ ಬದಲು “ನಾಟಕ ನೋಡಿದೆ’ ಎಂದೆ. ಒಂದು ತಾಸು ಮಾತನಾಡಿದ ನಂತರ ಅವಳೂ, “”ನಾನೂ ಮಿಸ್ ಮಾಡ್ತಾ ಇದ್ದೇನೆ’ ಎಂದಳು. ಆಗ ಹೊಟ್ಟೆನೋವು ಸ್ವಲ್ಪ ಸರಿ ಹೋಯಿತು.
ರಕ್ಷಾ ವಿ. ವಿ. ಕಾಲೇಜು, ಮಂಗಳೂರು