Advertisement
ಇದು ಮೂರು ಹಂತದ, 40 ದಿನಗಳ ಲಾಕ್‌ಡೌನ್ ನಿರ್ಬಂಧ ಸಡಿಲಿಸಿದ ಬಳಿಕ ಸೋಮವಾರ ದೇಶದ ವಿವಿಧ ಭಾಗಗಳಲ್ಲಿ ಕಂಡುಬಂದ ಚಿತ್ರಣ. ಇದು ಜೀವನ, ಜೀವನೋಪಾಯಕ್ಕೆ ಸಂಬಂಧಿಸಿದ ಚಿತ್ರಣವಾದರೆ, ಬಾರ್‌ಗಳ ಎದುರು ಕಿಕ್ಕಿರಿದು ನಿಂತಿದ್ದ ಪಾನಪ್ರಿಯರ ಮುಖದಲ್ಲಿ ಮರುಭೂಮಿಯಲ್ಲಿ ನೀರಿನ ಸೆಲೆ ಸಿಕ್ಕಷ್ಟೇ ಸಂತೋಷವಿತ್ತು.
ಈ ನಡುವೆ ವಾರಗಳಿಂದ ಬಾಕಿ ಉಳಿದಿದ್ದ ಹಣದ ವಹಿವಾಟು ಪೂರ್ಣಗೊಳಿಸಲು ಬ್ಯಾಂಕ್‌ಗಳ ಮುಂದೆ ಜನ ಸಾಲಾಗಿ ನಿಂತಿದ್ದರು. ಬಿಸಿಲಲ್ಲಿ ನಿಂತು ಬೆವರಿದವರ ತನು ತಂಪಾಗಿಸಲು ಐಸ್‌ಕ್ರೀಂ ಗಾಡಿಗಳು ಆಗಾಗ ಬಂದು ಹೋಗುತ್ತಿದ್ದವು.
Related Articles
Advertisement
ಗುಜರಾತ್‌ನಲ್ಲಿ ಗಲಿಬಿಲಿ: ಬೇರೆ ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್ ಚಿತ್ರಣ ಕೊಂಚ ಭಿನ್ನವಾಗಿತ್ತು. ಕೆಂಪುವಲಯದಲ್ಲಿ ಬರುವ ಆರು ಪ್ರಮುಖ ನಗರಗಳನ್ನು ಹೊರತುಪಡಿಸಿ ಬೇರೆಲ್ಲಾ ಕಡೆ ವಾಣಿಜ್ಯ, ವ್ಯಾಪಾರ ನಡೆಯಿತು. ಬಹುತೇಕ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಜನ ರಸ್ತೆಗಿಳಿದು ವ್ಯಾಪಾರ, ವಹಿವಾಟಿನಲ್ಲಿ ತೊಡಗಿದ್ದರು. ಸೂರತ್ ಜಿಲ್ಲೆಯ ಗ್ರಾಮವೊಂದರಲ್ಲಿ ವಲಸೆ ಕಾರ್ಮಿಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ನಡುವೆ ರಾಜ್‌ಕೋಟ್‌ನಲ್ಲಿ ತವರಿಗೆ ತೆರಳಲಾಗದೆ ಬೇಸರಗೊಂಡ ವಲಸೆ ಕಾರ್ಮಿಕರು ಕೇಶ ಮುಂಡನ ಮಾಡಿಸಿಕೊಂಡು ಪ್ರತಿಭಟಿಸಿದರು.
ತಮಿಳುನಾಡಲ್ಲೂ ತಮ್ಮನ್ನು ತವರಿಗೆ ಕಳಿಸಿಕೊಡುವಂತೆ ವಲಸೆ ಕಾರ್ಮಿಕರು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು. ಅಸ್ಸಾಂನಲ್ಲಿ ಬಹುತೇಕ ಅಂಗಡಿ, ಮುಂಗಟ್ಟುಗಳು ತೆರೆದಿದ್ದವಾದರೂ ವ್ಯಾಪಾರ ಮಂಕಾಗಿತ್ತು. ಕರ್ಫ್ಯೂ ಜಾರಿಯಲ್ಲಿದ್ದ ಕಾರಣ ಅಂಗಡಿಗಳ ಬಾಗಿಲು ಪೂರ್ಣ ತೆರೆದಿರಲಿಲ್ಲ.
ಇನ್ನು ಒಡಿಶಾದಲ್ಲಿ ಕಿತ್ತಳೆ ಹಾಗೂ ಹಸಿರು ವಲಯಗಳಲ್ಲಿ ಬಹುತೇಕ ಎಲ್ಲ ವಾಣಿಜ್ಯ ಚಟುವಟಿಕೆಗಳು ಆರಂಭವಾದವು. ಆದರೆ ಕೆಂಪು ವಲಯಗಳಲ್ಲಿನ ಜನರಿಗೆ ಲಾಕ್‌ಡೌನ್ ನಿರ್ಬಂಧ ಸಡಿಲಿಕೆಯ ಸಿಹಿ ಸಿಗಲಿಲ್ಲ. ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದಂತೆ ಕಂಡುಬಂತು.
ಮರಳಿ ದುಡಿಮೆಯ ಹಳಿಗೆ
ದಿನದ ದುಡಿಮೆ ನಂಬಿಕೊಂಡಿರುವ ಲಕ್ಷಾಂತರ ಮಂದಿಗೆ ಲಾಕ್‌ಡೌನ್ ಸಡಿಲಿಕೆ ಮೊದಲ ದಿನವೇ ವರವಾಗಿ ಪರಿಣಮಿಸಿತು. ಸಗಟು ವ್ಯಾಪಾರಿ ಮಳಿಗೆಗಳು, ದಿನಸಿ ಅಂಗಡಿ, ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಸಾಮಗ್ರಿ ಸಾಗಿಸುವ ಕೆಲಸ ಗಿಟ್ಟಿಸಿಕೊಂಡ ದಿನಗೂಲಿ ಕಾರ್ಮಿಕರ ಮೊಗದಲ್ಲಿ ಮಂದಹಾಸ ಕಂಡಿತು. ತಳ್ಳುಗಾಡಿಗಳಲ್ಲಿ ಸಣ್ಣಪುಟ್ಟ ವಸ್ತು, ತರಕಾರಿ, ಹಣ್ಣು ಮಾರುವವರು, ಐಸ್‌ಕ್ರೀಮ್ ವ್ಯಾಪಾರಿಗಳು, ಮನೆಗೆ ಲಸದವರು, ಧೋಬಿಗಳು ದುಡಿಮೆಯ ಹಳಿಗೆ ಮರಳಿದರು. ಸಾರಿಗೆ ಸೌಲಭ್ಯ ಇಲ್ಲದಿದ್ದರೂ ಮನೆಯಿಂದ ನಡೆದು ಬಂದ ಕಾರ್ಮಿಕರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದುದು ಕಂಡುಬಂತು. ಕಾಂಗ್ರೆಸ್ V/S ಬಿಜೆಪಿ
ವಲಸೆ ಕಾರ್ಮಿಕರಿಗಾಗಿ ಶುರು ಮಾಡಲಾಗಿರುವ ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಟಿಕೆಟ್‌ಗೆ ಶುಲ್ಕ ಪಡೆದುಕೊಳ್ಳಲಾಗುತ್ತಿದೆ ಎಂಬ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ‘ಟಿಕೆಟ್ ಹಣ ಕೊಡಲು ಅಶಕ್ತರಾಗಿರುವ ಕೂಲಿಯಾಳುಗಳ ಟಿಕೆಟ್ ದರವನ್ನು ಅವರು ಯಾವ ರಾಜ್ಯಗಳಿಗೆ ಪಯಣಿಸುತ್ತಾರೋ ಆ ರಾಜ್ಯಗಳಲ್ಲಿರುವ ಕಾಂಗ್ರೆಸ್ ಘಟಕ ಭರಿಸುತ್ತದೆ’ ಎಂದು ಘೋಷಿಸಿದ್ದಾರೆ. ಅದಕ್ಕೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಸಂಭಿತ್ ಪಾತ್ರಾ, ‘ಕಾರ್ಮಿಕರನ್ನು ಉಚಿತವಾಗಿಯೇ ಅವರ ಊರುಗಳಿಗೆ ಕರೆದೊಯ್ಯಲಾಗುತ್ತಿದೆ. ಕಾಂಗ್ರೆಸ್ ಇದನ್ನು ವೃಥಾ ವಿವಾದವಾಗಿ ಪರಿವರ್ತಿಸುತ್ತಿದೆ’ ಎಂದಿದ್ದಾರೆ. ಕೇಂದ್ರದ ಸ್ಪಷ್ಟನೆ: ಶುಲ್ಕ ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೆ ಸಚಿವಾಲಯ ಮತ್ತು ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಖಾತೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಕೇಂದ್ರ ಸರ್ಕಾರ ಶೇ.85, ಆಯಾ ರಾಜ್ಯ ಸರ್ಕಾರಗಳು ಶೇ.15ರಷ್ಟು ವೆಚ್ಚ ಭರಿಸುತ್ತಿವೆ. ಅವರಿಗೆ ಊಟ, ನೀರಿನ ಬಾಟಲಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಬಹುತೇಕ ದೇಶಗಳಲ್ಲಿ ಲಾಕ್ ಡೌನ್ ಸಡಿಲಿಕೆ
ಜಗತ್ತಿನ ಅನೇಕ ದೇಶಗಳು ದೀರ್ಘಾವಧಿಯ ಲಾಕ್ ಡೌನ್ ಸಡಿಲಿಕೆ ಮಾಡಿವೆ. ಕಳವಳಕಾರಿ ಅಂಶವೆಂದರೆ ಎಲ್ಲಾ ದೇಶಗಳಲ್ಲೂ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಲಾಕ್‌ಡೌನ್ ವಿಸ್ತರಿಸುತ್ತಾ ಹೋದರೆ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ ಎಂಬ ಭಯದಿಂದ ಬಹುತೇಕ ದೇಶಗಳು ನಿರ್ಬಂಧ ಸಡಿಲಿಸಿ, ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಿವೆ. ಭಾರೀ ಸಾವು ನೋವು ಕಂಡ ಇಟಲಿಯಲ್ಲೂ ಪಾರ್ಕುಗಳು ಹಾಗೂ ಉದ್ಯಾನಗಳನ್ನು ಸೋಮವಾರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಸ್ಪೇನ್ ನಲ್ಲಿ ಸಾಮಾಜಿಕ ಅಂತರ ನಿಯಮ ಜಾರಿಯಲ್ಲಿರುವಂತೆಯೇ, ಜನರು ಮನೆ ಗಳಿಂದ ಹೊರಬಂದಿದ್ದಾರೆ.
ಅಮೆರಿಕದಲ್ಲೂ ನ್ಯೂಜೆರ್ಸಿ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಂಡಿವೆ.