ವೇಣೂರು: ಕಬಡ್ಡಿ ಯುವಕರಿಗೆ ಪ್ರೇರಣೆ, ಸ್ಫೂರ್ತಿ ನೀಡುವ ಕ್ರೀಡೆ. ಕಬಡ್ಡಿ ಒಗ್ಗಟ್ಟು ಮೂಡಿಸುವುದರ ಜತೆಗೆ ಸಮಾಜ ವಿರೋಧಿ ಕೃತ್ಯ ಎದುರಿಸಲು ಶಕ್ತಿ ನೀಡುತ್ತದೆ. ಹಿಂದೂ ಧರ್ಮವೆಂದರೆ ಜೀವನ ಪದ್ಧತಿ. ಆ ಜೀವನ ಪದ್ಧತಿ ಹುಟ್ಟಿದ್ದು ಕಬಡ್ಡಿ ಕ್ರೀಡೆಯಿಂದ ಎಂದು ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಹೇಳಿದರು.
ಅಂಡಿಂಜೆ ಫ್ರೆಂಡ್ಸ್ ವತಿಯಿಂದ ದ.ಕ. ಜಿಲ್ಲಾ ಕಬಡ್ಡಿ ಅಮೆಚೂರ್ ಸಂಸ್ಥೆ, ಬೆಳ್ತಂಗಡಿ ತಾ| ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಆಶ್ರಯದಲ್ಲಿ ಅಂಡಿಂಜೆ ಶಾಲಾ ಮೈದಾನದಲ್ಲಿ ಜರಗಿದ ಪುರುಷರ ಹೊನಲು ಬೆಳಕಿನ 60 ಕೆ.ಜಿ. ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾರಂಭದ ಉದ್ಘಾಟನೆಯನ್ನು ಬಂಟ್ವಾಳ ಸಂಗಬೆಟ್ಟುವಿನ ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ ನೆರವೇರಿಸಿದರು. ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ ಅಂಡಿಂಜೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇಣೂರು ಗ್ರಾ.ಪಂ. ಸದಸ್ಯ ರಾಜೇಶ್ ಮೂಡುಕೋಡಿ, ಅಂಡಿಂಜೆ ಗ್ರಾ.ಪಂ. ಸದಸ್ಯ ದಯಾನಂದ ಕುಲಾಲ್, ಸಾವ್ಯದ ಶ್ರೀಧರ ಪೂಜಾರಿ ಬೂತಡ್ಕ, ನಿವೃತ್ತ ಕಂದಾಯ ನಿರೀಕ್ಷಕ ಕೆ. ಸಾಧು, ಅಂಡಿಂಜೆ ಪ್ರಾಣೇಶ್ ಪುತ್ರನ್, ಅಂಡಿಂಜೆ ಕೈತ್ರೋಡಿಯ ಸುಜ್ಞಾನ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಅಂಡಿಂಜೆ ಫ್ರೆಂಡ್ಸ್ ಸದಸ್ಯರು ಸಹಕರಿಸಿದರು. ಅವಿಲ್ ಮೊರಾಸ್ ನಯನಾಡು ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ಟಾಪ್ ಎಂಟರ್‌ಟ್ರೈನರ್ ಉಜಿರೆ ಇವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರಗಿತು. ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ ಅಂಡಿಂಜೆ ವಹಿಸಿದ್ದರು. ಅತಿಥಿಗಳಾಗಿ ಅಂಡಿಂಜೆ ಗ್ರಾ.ಪಂ. ಸದಸ್ಯರಾದ ವಿಟ್ಠಲ ಸುವರ್ಣ ಸಾವ್ಯ, ನಿತಿನ್ ಮುಂಡೇವು ಮತ್ತಿತರರು ಉಪಸ್ಥಿತರಿದ್ದರು.