Advertisement

ಕೃತಜ್ಞತಾ ಬುದ್ಧಿಯಿಂದ ನಳನಳಿಸುವ ಜೀವನ

02:18 AM Nov 03, 2020 | mahesh |

ಗೌತಮ ಬುದ್ಧನ ಉಪದೇಶ ವಾಕ್ಯ ವೊಂದಿದೆ, “ನಿಮ್ಮದಾಗಿರುವ ಆಹಾರವನ್ನು ಅದರ ಅಗತ್ಯವಿರುವ ಇನ್ನೊಬ್ಬರಿಗೆ ದಾನ ಮಾಡಿದರೆ, ಅದರಿಂದ ನೀವು ದುರ್ಬಲರಾಗುವುದಿಲ್ಲ; ಬದಲಾಗಿ ನಿಮ್ಮ ಶಕ್ತಿ, ಮೌಲ್ಯ ವೃದ್ಧಿಸುತ್ತದೆ.’

Advertisement

ನಮ್ಮ ಆಹಾರವನ್ನು ನಾವು ಉಣ್ಣದೆ ಇನ್ನೊಬ್ಬರಿಗೆ ಕೊಟ್ಟರೆ ನಮ್ಮ ಹೊಟ್ಟೆಗೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಾಗಿಯೇ ಈ ಉಪದೇಶವನ್ನು ಅರ್ಥ ಮಾಡಿಕೊಳ್ಳು ವುದು ಸ್ವಲ್ಪ ಕಷ್ಟ. ಪ್ರತಿಯೊಂದು ಸನ್ನಿವೇಶ ವನ್ನೂ, ನಮ್ಮ ಬದುಕಿನಲ್ಲಿ ಎದುರಾಗುವ ಪ್ರತಿಯೊಬ್ಬ ವ್ಯಕ್ತಿಯನ್ನೂ ನಮ್ಮ ಪುರೋಗತಿಗೆ ಹೇಗೆ ಉಪಯೋಗಿಸಿಕೊಳ್ಳುವುದು ಎನ್ನುವ ಸೂತ್ರ ಈ ಉಪದೇಶ ವಾಕ್ಯದ ಹಿಂದಿದೆ.

ಜೀವನದ ಪ್ರತಿಯೊಂದು ಕ್ಷಣದಲ್ಲೂ ಪ್ರತೀ ಹೆಜ್ಜೆಯಲ್ಲೂ ನಾವು ಕೃತಜ್ಞತಾಪೂರ್ವಕ ವಾಗಿ ಬೆಳೆಯಬೇಕು; ನಾನು ಯಾರಿಗೋ, ಏನೋ ಉಪಕಾರ ಮಾಡುತ್ತಿದ್ದೇನೆ ಎಂಬ ಧರ್ಮ ಬುದ್ಧಿಯಿಂದಲ್ಲ. ದಾನ-ಧರ್ಮ ಬುದ್ಧಿಯು ನಿಧಾನವಾಗಿ ಅಹಂಕಾರ, ನಿರ್ಲಕ್ಷ್ಯಕ್ಕೆ ದಾರಿ ಮಾಡಿ ಕೊಡುತ್ತದೆ. ದಾನ ಧರ್ಮ ಎಂದರೆ ನಮ್ಮಲ್ಲಿ ಯಾವುದು ಅತೀ ಹೆಚ್ಚು ಇದೆಯೋ ಅದನ್ನು ನೀಡುವುದು. ಅದು ದೊಡ್ಡದಲ್ಲ. ದೇಹಿ ಎಂದಾತನಿಗೆ ಯಾವುದು ಅತ್ಯಂತ ಅಗತ್ಯವಾಗಿ ದೆಯೋ, ಯಾವುದು ಅವನ ಅಸ್ತಿತ್ವವೇ ಆಗಿದೆಯೋ ಅದನ್ನು ಕೊಡುವುದು ನಮ್ಮನ್ನು ಪರಮಾತ್ಮನಿಗೆ ಹತ್ತಿರವಾಗಿಸುತ್ತದೆ. ನಮ್ಮ ಬೆಳವಣಿಗೆ ಆಗುವುದು ಆಗ.

ಇಲ್ಲೊಂದು ಕಥೆಯಿದೆ. ಒಬ್ಬ ಕ್ರೂರಿ ಸರ್ವಾಧಿಕಾರಿ ನೂರಾರು ಅಮಾಯಕರನ್ನು ಸೆರೆಹಿಡಿದು ಶಿಬಿರವೊಂದರಲ್ಲಿ ಕೂಡಿ ಹಾಕಿದ್ದ. ಸೆರೆಯಾಳುಗಳಿಗೆಲ್ಲರಿಗೂ ಒಂದೊಂದು ಸಂಖ್ಯೆ ನೀಡಲಾಗಿತ್ತು. ಸರ್ವಾಧಿಕಾರಿಯ ಅನುಚರರು ದಿನವೂ ಬೆಳಗ್ಗೆ ಬಂದು ಬೇಕಾಬಿಟ್ಟಿಯಾಗಿ ಸಂಖ್ಯೆ ಕರೆಯುತ್ತಿದ್ದರು. ಯಾರ ಸಂಖ್ಯೆ ಕರೆಯಲಾಯಿತೋ ಅವರನ್ನು ಅಂದು ವಧಿಸಲಾಗುತ್ತಿತ್ತು.

ಒಂದು ದಿನ ಬಡಪಾಯಿಯೊಬ್ಬನ ಸರದಿ ಬಂತು. ಆತ ಸಾಯುವ ಭಯದಿಂದ ಗಡಗಡನೆ ನಡುಗುತ್ತಿದ್ದ. ಅವನಿಗೆ ಬದುಕಬೇಕು ಎಂಬ ಆಸೆ ಬಲವಾಗಿತ್ತು. ಅದನ್ನು ಗಮನಿಸಿದ ಅವನ ಜತೆಗಾರ, “ಹೆದರಬೇಡ. ಇಂದು ನಿನ್ನ ಬದಲು ನಾನೇ ಹೋಗುತ್ತೇನೆ’ ಎಂದ. ಹೋದ, ವಧಿಸಲ್ಪಟ್ಟ. ಕೆಲವು ದಿನಗಳ ಬಳಿಕ ಸರ್ವಾಧಿಕಾರಿಯ ದೇಶದಲ್ಲಿ ದಂಗೆಯುಂಟಾಯಿತು. ಆತ ಕೊಲ್ಲಲ್ಪಟ್ಟ. ಸೆರೆಯಾಳುಗಳನ್ನೆಲ್ಲ ಬಿಡುಗಡೆ ಮಾಡಲಾಯಿತು. ಶಿಬಿರದಲ್ಲಿದ್ದು ವಧೆಯಾಗ ಬೇಕಿದ್ದಾತ ಬದುಕುಳಿದ.

Advertisement

ಆತ ಆ ಬಳಿಕ ಜೀವನವಿಡೀ ತನಗೆ ಜೀವದಾನ ಮಾಡಿದ ಜತೆಗಾರನ ಋಣಭಾವದಲ್ಲಿ ಬದುಕಿದ. ಅವನ ಬದುಕು ಸತ್ತುಹೋದ ಜತೆಗಾರನ ಕೃಪೆಯಲ್ಲಿ ಅದ್ದಿಕೊಂಡಿತ್ತು. ಅದು ಕೃತಜ್ಞತಾಪೂರ್ವಕ ಜೀವನ.

ಇದರರ್ಥ ನಾವೂ ಯಾರಿಗೋ ಜೀವದಾನ ಮಾಡುವುದಕ್ಕಾಗಿ ಬಲಿದಾನ ಗೈಯ್ಯಬೇಕು ಎಂದಲ್ಲ. ಈ ಬದುಕು ಪರಮಾತ್ಮ ನಮಗೆ ನೀಡಿದ್ದು ಎಂಬ ಕೃತಜ್ಞತಾ ಭಾವ ನಮ್ಮಲ್ಲಿ ಅನುಗಾಲವೂ ಇರಬೇಕು. ನಾವು ಹೊಂದಿರುವ ಅತ್ಯಂತ ಅಮೂಲ್ಯ ವಾದುದನ್ನು ವಿನಿಯೋಗಿಸುವ ಮನಸ್ಸಿರ ಬೇಕು. ನಮ್ಮಲ್ಲಿರುವ ಅಮೂಲ್ಯವಾದದ್ದು ಏನು? ಸಂಪತ್ತು, ಅಧಿಕಾರ, ಅಂತಸ್ತು ಅಲ್ಲ; ಬದಲಾಗಿ ನಮ್ಮ ಕತೃìತ್ವ ಶಕ್ತಿ, ಯೋಚನಾ ಶಕ್ತಿ, ಬುದ್ಧಿ ಶಕ್ತಿ, ದುಡಿಮೆಯ ಸಾಮರ್ಥ್ಯ. ಈ ಜೀವನ ಭಗವಂತನ ಕೊಡುಗೆ ಎಂಬ ಕೃತಜ್ಞತಾಭಾವದಿಂದ ನಮ್ಮಲ್ಲಿರುವ ಈ ಶ್ರೇಷ್ಠವಾದವುಗಳನ್ನು ಗರಿಷ್ಠ ಮಟ್ಟದಲ್ಲಿ ವಿನಿಯೋಗಿಸಲು ತೊಡಗಿದರೆ ಪ್ರತಿಫ‌ಲವನ್ನು ನಿರೀಕ್ಷಿಸದೆ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವಾಗುತ್ತದೆ.

ನಮ್ಮ ಕೆಲಸವನ್ನು ನಾವು ಮಾಡೋಣ, ಯೋಗ್ಯ ಪ್ರತಿಫ‌ಲ ಸಿಕ್ಕಿಯೇ ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next