Advertisement

ಜೀವ ವಿಮೆ ಮತ್ತು ಇತರೆ ವಿಚಾರಗಳು

08:29 PM Jan 12, 2020 | Sriram |

ಜೀವ ವಿಮೆ, ಇಂದು ಎಲ್ಲಾ ವರ್ಗದ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಭಾರತ, 130 ಕೋಟಿಗೂ ಅಧಿಕ ಜನಸಂಖ್ಯೆಯುಳ್ಳ ಬಹುದೊಡ್ಡ ದೇಶ. ಶೇ. 78ರಷ್ಟು ಜನರು ವಿಮಾ ವ್ಯಾಪ್ತಿಗೆ ಬಂದಿಲ್ಲ. ಇಂದಿನ ಆದಾಯ ತೆರಿಗೆ ಕಾನೂನು ಸೆಕ್ಷನ್‌ 80ಸಿ ಪ್ರಕಾರ, ಅಸೆಸ್‌ಮೆಂಟ್‌ ವರ್ಷದಲ್ಲಿ (ಏಪ್ರಿಲ್‌ 1ರಿಂದ ಮಾರ್ಚ್‌31ರ ತನಕ) ರೂ.1.50 ಲಕ್ಷದ ತನಕ ಕಟ್ಟಿರುವ ಜೀವವಿಮಾ ಪ್ರೀಮಿಯಂಅನ್ನು ವ್ಯಕ್ತಿಯ ಸಂಪೂರ್ಣ ಆದಾಯದಿಂದ ಕಡಿತ ಮಾಡಿ, ಉಳಿದ ಆದಾಯಕ್ಕೆ ಮಾತ್ರ ಆದಾಯ ತೆರಿಗೆ ಸಲ್ಲಿಸಬಹುದು. ಹೀಗೆ ಆದಾಯ ತೆರಿಗೆ ಉಳಿಸಿ, ಉಳಿದ ಹಣದಿಂದಲೇ ಬಹುಪಾಲು ಪ್ರೀಮಿಯಂ ಹಣವನ್ನು ಭರಿಸಬಹುದಾಗಿದೆ.ವಿಮಾ ಕಂತುಗಳನ್ನು ಮಾಸಿಕ, ತ್ತೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕ ಹೀಗೆ ಬೇರೆ ಬೇರೆ ಅವಧಿಗಳಲ್ಲಿ ತುಂಬಬಹುದು.

Advertisement

ನೌಕರಿಯಲ್ಲಿ ಇರುವವರಿಗೆ, ಉದ್ಯೋಗದಾತರು ಒಪ್ಪುವ ಮೇರೆಗೆ ಸಂಬಳದಿಂದ ಪ್ರತೀ ತಿಂಗಳೂ ಮುರಿದು (ಸ್ಯಾಲರಿ ಸೇವಿಂಗ್ಸ್‌ ಸ್ಕೀಮ್‌) ವಿಮಾ ಕಂತುಗಳನ್ನು ಸಲ್ಲಿಸಬಹುದು. ಪ್ರತೀ ತಿಂಗಳೂ ತುಂಬುವುದರಿಂದ, ಇಲ್ಲಿ ಸ್ವಲ್ಪ ಕಡಿಮೆ ಪ್ರೀಮಿಯಂ ಇರುತ್ತದೆ. ವಿಮಾ ಕಂತುಗಳನ್ನು ಮನಿ ಆರ್ಡರ್‌ (ಎಂ.ಓ), ಡಿಮ್ಯಾಂಡ್‌ ಡ್ರಾಫ್ಟ್ (ಡಿ.ಡಿ) ಅಥವಾ ಚೆಕ್ಕುಗಳ ಮೂಲಕ (ಪರ ಊರಿನ ಚೆಕ್ಕುಗಳಾದಲ್ಲಿ ಕಲೆಕ್ಷನ್‌ ಚಾರ್ಜನ್ನು ಪ್ರೀಮಿಯಂ ಹಣಕ್ಕೆ ಸೇರಿಸಿ ಚೆಕ್ಕನ್ನು ಬರೆಯಬೇಕು) ತುಂಬಬಹುದು. ವಿಮಾ ಕಂಪನಿಗಳ ಶಾಖೆಗಳಲ್ಲಿ ಹಾಗೂ ನಿಗದಿಪಡಿಸಿದ ಬ್ಯಾಂಕ್‌ಗಳ ಶಾಖೆಗಳಲ್ಲೂ ವಿಮಾ ಕಂತುಗಳನ್ನು ತುಂಬಬಹುದು. ಇ.ಸಿ.ಎಸ್‌ ಮುಖಾಂತರವೂ ಆನ್‌ಲೈನಿನಲ್ಲಿಯೂ ವಿಮಾ ಕಂತುಗಳನ್ನು ಪಾವತಿ ಮಾಡಬಹುದು. ಪಾಲಿಸಿದಾರರ ಹಿತಾಸಕ್ತಿ ಹಾಗೂ ಪಾಲಿಸಿದಾರರಿಗೆ ಯಾವುದೇ ತೊಂದರೆಗಳಾಗದಂತೆ ಹಲವು ನಗರಗಳಲ್ಲಿ ಓಂಬುಡ್ಸ್‌ಮನ್‌ ಕಚೇರಿಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ದಕ್ಷಿಣಭಾರತದ ನಗರಗಳಾದ ಹೈದರಾಬಾದ್‌, ಚೆನ್ನೈ ಕೂಡಾ ಸೇರಿವೆ.

ಎಲ್‌ಐಸಿ ಅಥವಾ ಇನ್ನಿತರ ಕಂಪನಿಗಳಿಗೆ ಸಲ್ಲಿಸಿದ ದೂರುಗಳಿಗೆ ಸಮರ್ಪಕವಾದ ಉತ್ತರ ಬಾರದಿದ್ದಲ್ಲಿ ಸಂಬಂಧಪಟ್ಟ ಓಂಬಡ್ಸ್‌ಮನ್‌ ಕಚೇರಿಗೆ ದೂರಿನೊಂದಿಗೆ ಮೊರೆ ಹೋಗಬಹುದು. ಭದ್ರತೆ, ದ್ರವ್ಯತೆ ಹಾಗೂ ಹೆಚ್ಚಿನ ವರಮಾನ ಇವೆಲ್ಲಾ ದೃಷ್ಟಿಗಳಲ್ಲಿ ಜೀವವಿಮೆ ಎಂದಿಗೂ ಕಡಿಮೆ ಇಲ್ಲ. ಜೊತೆಗೆ ಲೈಫ್ ರಿಸ್ಕ್ನಿಂದ ಎದುರಾಗುವ ತೊಂದರೆ ನೀಗಿಸುತ್ತದೆ. ವರಮಾನ ತೆರಿಗೆಯಲ್ಲೂ ಸಾಕಷ್ಟು ಉಳಿತಾಯ ಮಾಡಬಹುದು. ದೀರ್ಘಾವಧಿ ಹಣ ಹೂಡುವಿಕೆಯಲ್ಲಿ ಜೀವವಿಮೆ ಒಂದು ಉತ್ತಮ ಮಾರ್ಗ. “ಸಂಕಟ ಬಂದಾಗ ವೆಂಕಟರಮಣ’ ಎನ್ನುವ ಗಾದೆ ಮಾತು ಜೀವವಿಮೆಗೆ ಸಂಪೂರ್ಣ ಪೂರಕವಾಗಿದೆ. ಗಂಡಾಂತರ ಹಾಗೂ ಆರ್ಥಿಕ ಸಂಕಷ್ಟಗಳನ್ನು ಎದುರಿಸುವ ಸಮಯದಲ್ಲಿ ಜೀವವಿಮೆಗಿಂತ ಮಿಗಿಲಾದ ಯೋಜನೆ ಬೇರೊಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next