Advertisement

ತಪ್ಪಲಿನ ಚಪ್ಪರದಲ್ಲಿ ವೃದ್ಧೆ ಜೀವನ

12:35 PM Jul 10, 2017 | Team Udayavani |

ಚಿಂಚೋಳಿ: ತಾಲೂಕಿನ ಶಾದೀಪುರ ಗ್ರಾಪಂ ವ್ಯಾಪ್ತಿಯಲ್ಲಿ ಚಾಪಲಾ ನಾಯಕ ತಾಂಡಾದಲ್ಲಿ ನಿರ್ಗತಿಕ ವೃದ್ಧೆಯೊಬ್ಬಳು
ವಾಸಿಸಲು ಮನೆ ಇಲ್ಲದೇ ತಪ್ಪಲುಗಳಿಂದ ಕಟ್ಟಿದ ಚಪ್ಪರದಲ್ಲಿ ಕಳೆದ 30 ವರ್ಷಗಳಿಂದ ಜೀವನ ನಡೆಸುತ್ತಿದ್ದು, ಪರಿಸ್ಥಿತಿ ಅತ್ಯಂತ
ಶೋಚನೀಯವಾಗಿದೆ.

Advertisement

ಚಾಪಲಾ ನಾಯಕ ತಾಂಡಾದ ಜಮ್ಮಾಬಾಯಿ ವಿಟ್ಟು ರಾಠೊಡ ವೃದ್ಧೆಗೆ 18ರ ಪ್ರಾಯದಲ್ಲೇ ಮದುವೆ ಆಗಿತ್ತು. ನಂತರ ಆಕೆ ಪತಿಯಿಂದ ವಿವಾಹ ವಿಚ್ಚೇದನ ಪಡೆದುಕೊಂಡು ತವರು ಮನೆಯಲ್ಲಿ ತಂದೆ-ತಾಯಿ ಆಶ್ರಯದಲ್ಲಿದ್ದಳು. ತಂದೆ- ತಾಯಿ ಮೃತಪಟ್ಟ ನಂತರ ಅಕೆಗೆ ಯಾರೂ  ಗತಿಯಿಲ್ಲದಂತೆ ಆಯಿತು.

ತವರು ಮನೆಯಲ್ಲಿ ಕಸ ಹಾಕುವ ಸ್ಥಳದಲ್ಲಿ ಕಳೆದ 30 ವರ್ಷಗಳಿಂದ ಮಳೆ, ಬಿಸಿಲು, ಚಳಿ ಎನ್ನದೇ ಯಾವುದೇ ಆಸರೆ ಇಲ್ಲದೇ ಕೇವಲ ಗಿಡಮರಗಳ ತಪ್ಪಲು ಹಾಕಿರುವ ಚಪ್ಪರದಲ್ಲಿಯೇ ವಾಸವಾಗಿದ್ದಾಳೆ. ವೃದ್ಧೆ ಹೆಸರಿನಲ್ಲಿದ್ದ ಆಹಾರ ಪಡಿತರ ಚೀಟಿ ರದ್ದಾಗಿದೆ. ಹಾಗಾಗಿ ನ್ಯಾಯ ಬೆಲೆ ಅಂಗಡಿಯಿಂದ ಆಹಾರ  ಧಾನ್ಯವೂ ಸಿಗುತ್ತಿಲ್ಲ. ಇದರಿಂದ ಶಾದೀಪುರ ಗ್ರಾಮಕ್ಕೆ ಬಂದು ದಿನ ಬಳಕೆ ಆಹಾರ
ಪದಾರ್ಥಗಳನ್ನು ಖರೀದಿಸುತ್ತಿದ್ದಾರೆ. ಜಮ್ಮಾಬಾಯಿಗೆ 60 ವರ್ಷವಾಗಿದ್ದರೂ ಕಂದಾಯ ಇಲಾಖೆಯಿಂದ ವೃದ್ಧಾಪ್ಯ ವೇತನ ದೊರೆಯುತ್ತಿಲ್ಲ. ಸರಕಾರ ಕಡು ಬಡವರಿಗೆ ಹಾಗೂ ನಿರ್ಗತಿಕರಿಗೆ ರಾಜೀವಗಾಂಧಿ  ವಸತಿ ಯೋಜನೆ ಅಡಿ ಮನೆ ನೀಡುತ್ತಿದೆ. ಆದರೆ ಸೂರಿಲ್ಲದೇ ಜೀವನ ಕಳೆಯುತ್ತಿರುವ ಅಸಹಾಯಕ ವೃದ್ಧೆಗೆ ಮನೆ ಮಂಜೂರಿ ಮಾಡಿಲ್ಲ ಎಂದು ತಾಂಡಾದ ರಾಮಚಂದ್ರ ನಾಯಕ ಅಸಮಾಧಾನ ವ್ಯಕ್ತಪಡಿಸುತ್ತಾರೆ. ನಾವು ಅನ್ನ, ರೊಟ್ಟಿ, ಅಕ್ಕಿ, ಬ್ಯಾಳಿ ಕೊಟ್ಟರೆ ತೆಗೆದುಕೊಳ್ಳುವುದಿಲ್ಲ. ಎಷ್ಟೆ ಮಳೆಯಾದರೂ ಚಪ್ಪರದಲ್ಲಿಯೇ ಇರುತ್ತಾಳೆ ಎಂದು ತಾಂಡಾದ ವಿಜಯಕುಮಾರ ರಾಠೊಡ ಹೇಳುತ್ತಾರೆ. ಶಾದೀಪುರ ತಾಪಂ ಕ್ಷೇತ್ರದಿಂದ ಚುನಾಯಿತರಾಗಿ ಅಧ್ಯಕ್ಷೆಯಾಗಿರುವ ರೇಣುಕಾ ಅಶೋಕ ಚವ್ಹಾಣ ಚಾಪಲಾ ನಾಯಕ ತಾಂಡಾಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಈ ಮಹಿಳೆ ಬಗ್ಗೆ ಗಮನ ಹರಿಸಿಲ್ಲ ಎಂದು ತಾಂಡಾದ ಜನರು ದೂರುತ್ತಾರೆ.

ಮನೆ ನಿರ್ಮಿಸಿ ಕೊಡುವೆವು
ಶಾದೀಪುರ ಗ್ರಾಪಂ ವ್ಯಾಪ್ತಿಯ ಚಾಪಲಾ ನಾಯಕ ತಾಂಡಾದಲ್ಲಿ ಜಮ್ಮಾಬಾಯಿ ವಿಟ್ಟು ರಾಠೊಡ ನಿರ್ಗತಿಕ ಮಹಿಳೆಗೆ ಮನೆ ಇಲ್ಲದಿರುವ ಬಗ್ಗೆ ಗಮನಕ್ಕೆ ಬಂದಿದೆ. ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಲು ಗ್ರಾಪಂ ವತಿಯಿಂದಲೇ ಮನೆ
ನಿರ್ಮಿಸಿ ಕೊಡಲಾಗುವುದು. 
ಅನೀಲಕುಮಾರ ರಾಠೊಡ, ತಾಪಂ ಅಧಿಕಾರಿ

ಶೀಘ್ರ ಸೌಲಭ್ಯ ನೀಡುವೆವು
ಶಾದೀಪುರ ಗ್ರಾಪಂ ವತಿಯಿಂದ ಪರಿಶಿಷ್ಟ ಜಾತಿ ಜನಾಂಗದವರಿಗೆ ಮನೆ ನಿರ್ಮಿಸಿಕೊಳ್ಳಲು ಡಾ| ಬಿ.ಆರ್‌. ಅಂಬೇಡ್ಕರ್‌ ವಸತಿ ಯೋಜನೆ ಅಡಿ ಹೆಸರು ಬರೆದುಕೊಳ್ಳಲಾಗಿದೆ. ಒಂದೆರೆಡು ತಿಂಗಳಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು.
ರಾಮಕೃಷ್ಣ, ಗ್ರಾಮೀಣಾಭಿವೃದ್ಧಿ ಅಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next