ಮಾಸ್ತಿ: ಮಾಸ್ತಿ ಹೋಬಳಿ ಗ್ರಾಪಂ ವ್ಯಾಪ್ತಿಯ ಬಿಟ್ನಹಳ್ಳಿ ಗ್ರಾಮದ ಪ್ರಗತಿಪರ ರೈತ ಬಿ.ಎಂ.ಗಂಗಾರೆಡ್ಡಿ ರೇಷ್ಮೆ ಕೃಷಿಯಲ್ಲಿ ಸಾವಯವ ಕೃಷಿ ಪದ್ಧತಿ ಮೂಲಕ ನೂತನ ತಂತ್ರಜ್ಞಾನದಿಂದ ವರ್ಷಕ್ಕೆ ಸುಮಾರು 30 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವುದರ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ನೆರೆಯ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಮಾಲೂರು ತಾಲೂಕಿನ ಮಾಸ್ತಿ ಗ್ರಾಪಂ ವ್ಯಾಪ್ತಿಯ ಬಿಟ್ನಹಳ್ಳಿ ಗ್ರಾಮದ ರೈತ ಬಿ.ಎಂ.ಗಂಗಾರೆಡ್ಡಿ ತಮ್ಮ ತಂದೆ ಮುನಿಸ್ವಾಮಿ ರೆಡ್ಡಿ ಮೂಲಕ ಬಂದಂತಹ 4 ಎಕರೆ ಕೃಷಿ ಭೂಮಿ ಯಲ್ಲಿ 2 ಎಕರೆಯಲ್ಲಿ ಹಿಪ್ಪು ನೆರಳೆ ಸೋಪ್ಪು ಬೆಳೆದು ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ರೇಷ್ಮೆ ಇಲಾಖೆಯ ಅಧಧಿಕಾರಿಗಳ ಮಾರ್ಗದರ್ಶನದಲ್ಲಿ ಸೂಕ್ತ ಮಾಹಿತಿ ಪಡೆದು ತಿಂಗಳಲ್ಲಿ 500 ಮೊಟ್ಟೆ ಚಾಕಿ ಮಾಡಿ ತಿಂಗಳಿಗೆ ಎರೆಡುವರೆ ಲಕ್ಷಕ್ಕೂ ಹೆಚ್ಚಿನ ಲಾಭ ಆದಾಯ ಗಳಿಸುತ್ತಿದ್ದಾರೆ. ರೇಷ್ಮೆ ಕೃಷಿಯನ್ನು ಕಳೆದ ಸುಮಾರು 33 ವರ್ಷಗಳಿಂದ ನಿರಂತರವಾಗಿ ಮುಂದುವರೆಸಿಕೊಂಡು ಬರುತ್ತಿರುವುದು ಮತ್ತೂಂದು ವಿಶೇಷವಾಗಿದೆ.
ಇತರ ರೈತರರಿಗೆ ಮಾರ್ಗದರ್ಶನ: ರೇಷ್ಮೆ ಕೃಷಿಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೆಳೆಗಳನ್ನು ಬೆಳೆದು ಮಾದರಿ ರೈತರಾಗಿದ್ದಾರೆ. ತಮಿಳುನಾಡಿನ ಹೊಸೂರಿನಲ್ಲಿ ಮೊಟ್ಟೆಯನ್ನು ತಂದು ಚಾಕಿ ಮಾಡಿಸಿ ತಮ್ಮ ಮನೆಯ ಸಮೀಪದಲ್ಲಿ ರೇಷ್ಮೆ ಕೃಷಿ ಮಾಡುವುದರ ಜತೆಗೆ ಹಲವು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ರೈತ ಬಿ.ಎಂ.ಗಂಗಾರೆಡ್ಡಿ ಅವರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರಿನ ವ್ಯವಸ್ಥೆ ಮಾಡಿ ಕೊಂಡಿದ್ದಾರೆ. ಅಲ್ಲದೆ, ಕೃಷಿ ಹೊಂಡ ನಿರ್ಮಿಸಿ ಹನಿ ನೀರಾವರಿ ಪದ್ಧತಿ ಮೂಲಕ ಬೆಳೆಗೆ ನೀರು ಹರಿಸುತ್ತಾರೆ. 2 ಎಕರೆ ವಿಸ್ತೀರ್ಣದಲ್ಲಿ ಸಾವಯವ ಕೃಷಿ ಪದ್ಧತಿಯ ಮೂಲಕ 2 ಬ್ಯಾಚ್‌ನಲ್ಲಿ ಮರಕಟ್ಟೆ ಸೋಪ್ಪನ್ನು ಬೆಳೆದಿದ್ದಾರೆ. 10 ಅಡಿಗೆ ಒಂದರಂತೆ ಹಿಪ್ಪುನೆರಳೆ ಬೆಳೆಯನ್ನು ನಾಟಿ ಮಾಡಿದ್ದಾರೆ. ಒಟ್ಟು ಸುಮಾರು 830 ಗಿಡಗಳನ್ನು ಬೆಳೆದು ರೇಷ್ಮೆಗೆ ಬಳಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸೋಪ್ಪನ್ನು ಇತರೆ ರೈತರಿಗೆ ಮಾರಾಟ ಮಾಡುತ್ತಾರೆ.
ಹೆಬ್ಬೇವು ಗಿಡಗಳ ನಾಟಿ: ರೇಷ್ಮೆ ಕೃಷಿ ಮಾಡುವ ರೈತರು ತಮ್ಮ ಜಮೀನಿನಲ್ಲಿ ಬೇರೆ ಬೆಳೆ ಬೆಳೆದರೆ ರೇಷ್ಮೆ ಬೆಳೆಗೆ ತೊಂದರೆಯಾಗುವ ನಿಟ್ಟಿನಲ್ಲಿ ಉಳಿದಿರುವ 2 ಎಕರೆಯಲ್ಲಿ 1 ಸಾವಿರ ಹೆಬ್ಬೇವು ಗಿಡಗಳನ್ನು ನಾಟಿ ಮಾಡಿದ್ದು, ಕಳೆದ ಸುಮಾರು 3 ವರ್ಷಗಳಿಂದ ಮರಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ಕನಿಷ್ಠ 10 ರಿಂದ 12 ವರ್ಷಗಳ ಕಾಲ ಮರಗಳು ಹೆಮ್ಮರವಾಗಿ ಬೆಳೆದರೆ ಹೆಚ್ಚಿನ ಲಾಭ ಸಿಗಲಿದೆ. ಅಲ್ಲದೆ, ಹೆಬ್ಬೇವು ಸೋಪ್ಪನ್ನು ಕಟಾವು ಮಾಡಿ ಅದಕ್ಕೆ ಶೇ.90 ರಷ್ಟು ಎನ್ ಪಿಕೆ ಅರ್ಗನೈಕ್ ಕಾಂಪೋಸ್ಟ್ ಹಾಗೂ ಬೇವಿನ ಹಿಂಡಿಯೊಂದಿಗೆ ಬೆಳೆಗೆ ನೀಡುವುದರಿಂದ ಹೆಚ್ಚಿನ ಇಳುವರಿ ಸಿಗಲಿದೆ ಎನ್ನುತ್ತಾರೆ.
100 ಕ್ಕೂ ಹೆಚ್ಚು ಕುರಿಗಳ ಸಾಕಣಿಕೆ: ಈ ಮೇವನ್ನು ಕುರಿಗಳಿಗೆ ನೀಡುವುದರಿಂದ ಕುರಿಗಳು ದಷ್ಟ ಪುಷ್ಟವಾಗಿ ಬೆಳೆವಣಿಗೆ ಹೊಂದುತ್ತವೆ. ಈ ನಿಟ್ಟಿನಲ್ಲಿ ರೈತ ಗಂಗಾರೆಡ್ಡಿ ಅವರು ತಮ್ಮ ಜಮೀನಿ ನಲ್ಲಿಯೇ ಕುರಿಗಳ ಶೆಡ್ ಹಾಗೂ ಕೋಳಿ ಸಾಕಾಣಿಕೆ ಮಾಡಲು ಶೆಡ್ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಕುರಿಗಳ ಸಾಕಾಣಿಕೆ ಮಾಡಲು ತಯಾರಿ ನಡೆಸಿದ್ದಾರೆ.
ರೇಷ್ಮೆ ಕೃಷಿಯತ್ತ ಮುಖ ಮಾಡಿದ ರೈತರು: ರೇಷ್ಮೆ ಬೆಳೆಗೆ ನರೆಗಾ ಯೋಜನೆಯಡಿ ನಿರ್ವ ಹಣಾ ವೆಚ್ಚವಾಗಿ ಒಂದೂವರೆ ಲಕ್ಷ ಹಣ ಪಡೆದಿ ದ್ದಾರೆ. ಅಲ್ಲದೆ, ಕೃಷಿ ಹೊಂಡ ನಿರ್ಮಾಣಕ್ಕೆ ಇಲಾಖೆಯಿಂದ ಅನುದಾನ ಪಡೆದಿದ್ದಾರೆ. ಹಿಂದಿನ ಕಾಲದಲ್ಲಿ ರೇಷ್ಮೆ ಕೃಷಿ ಎಂದರೆ ರೈತರು ಹೆಚ್ಚಿನ ನಷ್ಟ ಅನುಭವಿಸುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಕೆಜಿ ರೇಷ್ಮೆ ಸಾವಿರಕ್ಕೂ ಹೆಚ್ಚು ಮಾರಾಟವಾಗುವುದರಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ರೇಷ್ಮೆ ಕೃಷಿಯತ್ತ ಮುಖ ಮಾಡುತ್ತಿ ದ್ದಾರೆ. ಉತ್ತಮ ರೈತ ಪ್ರಶಸ್ತಿ ಪಡೆದ ರೈತ ಇಂತಹ ಸಂದರ್ಭದಲ್ಲಿ ರೈತ ಗಂಗಾರೆಡ್ಡಿ ರೇಷ್ಮೆ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿರುವುದನ್ನು ಗುರ್ತಿಸಿರುವ ಕೃಷಿ ಇಲಾಖೆಯು 2022-23ನೇ ಸಾಲಿನ ಜಿಲ್ಲಾ ಮಟ್ಟದಲ್ಲಿ ನಡೆದ ಉತ್ತಮ ರೈತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರೇಷ್ಮೆ ಕೃಷಿ ಯಲ್ಲಿ ಉತ್ತಮ ಸಾಧನೆ ಮಾಡಿ ಇತರೆ ರೈತರಿಗೆ ಬಿ.ಎಂ.ಗಂಗಾರೆಡ್ಡಿ ಮಾದರಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇಂತಹ ರೈತರಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಿದ್ದಲ್ಲಿ ರೈತರು ಮತ್ತಷ್ಟು ಪ್ರಗತಿ ಸಾಧಿಲು ಸಹಕಾರಿಯಾಗಲಿದೆ.
–ಮಾಸ್ತಿ ಎಂ.ಮೂರ್ತಿ