Advertisement

ತನ್ನ ನೋಡಿ ತಾಯಿ ನಕ್ಕಳೆಂದು ಮಗನ ಹತ್ಯೆ: ಆರೋಪಿಗೆ ಜೀವಾವಧಿ ಶಿಕ್ಷೆ, 25 ಸಾವಿರ ರೂ. ದಂಡ

06:27 PM Apr 25, 2023 | |

ವಿಜಯಪುರ: ತನ್ನನ್ನು ನೋಡಿ ತಾಯಿ ನಕ್ಕಳೆಂದು, ಇದರಿಂದ ಆಕೆಯನ್ನು ನಿಂದಿಸಿದ್ದನ್ನು ಪ್ರಶ್ನಿಸಿದ ಮಹಿಳೆಯ ಮಗನನ್ನು ಹತ್ಯೆ ಮಾಡಿದ ಆರೋಪಿಗೆ ಜಿಲ್ಲಾ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆಗೆ ಆದೇಶ ನೀಡಿದ್ದು, 26 ಸಾವಿರ ರೂ. ದಂಡವನ್ನೂ ವಿಧಿಸಿದೆ.

Advertisement

ಸರಿಯಾಗಿ 16 ತಿಂಗಳ ಹಿಂದೆ ಖತಿಜಾಪುರ ಗ್ರಾಮದ ಹಸೀನಾ ಉರ್ಫ್ ಬುಡ್ಡಿಮಾ ಮುಲ್ಲಾ ರಸ್ತೆಯಲ್ಲಿ ಹೋಗುವಾಗ ತನ್ನನ್ನು ನೋಡಿ ನಕ್ಕಳೆಂದು ಅನುಮಾನಿಸಿದ ಅದೇ ಗ್ರಾಮದ ಖಾಜಲ್ ಉರ್ಫ್ ಅಮೀನಸಾಬ್, ಇದನ್ನು ಪ್ರಶ್ನಿಸುವ ನೆಪದಲ್ಲಿ ಮಹಿಳೆಗೆ ಅವಾಚ್ಯವಾಗಿ ನಿಂದಿಸಿದ್ದ.

ಆದರೆ ತಾನು ಆರೋಪಿಯನ್ನು ನೋಡಿ ನಗಲಿಲ್ಲ ಎಂದು ಮಹಿಳೆ ಸಮಜಾಯಿಸಿ ನೀಡಿದರೂ ಆರೋಪಿ ಅಮೀನಸಾಬ್ ಮತ್ತೆ ಮನೆಗೆ ಆಗಮಿಸಿ ನಿಂದನೆ ಮಾಡಿದ್ದ. ಈ ವಿಷಯ ಹಸೀನಾಳ ಹಿರಿಯ ಮಗ ಇಸ್ಮಾಯಲ್‍ಗೆ ತಿಳಿದು, ಪ್ರಶ್ನಿಸಲು ಮುಂದಾಗಿದ್ದ.

ಇದನ್ನೂ ಓದಿ: Mamukkoya: ಜನರ ಸಮ್ಮುಖದಲ್ಲೇ ಕುಸಿದು ಬಿದ್ದ ಮಾಲಿವುಡ್‌ ದಿಗ್ಗಜ ನಟ ಮಾಮುಕ್ಕೋಯ

ಈ ಹಂತದಲ್ಲಿ ತನ್ನ ಚಿಕನ್ ಅಂಗಡಿ ಮುಂದೆ ಬಂದು ಇಸ್ಮಾಯಿಲ್ ಪ್ರಶ್ನಿಸಿದ್ದರಿಂದ ಕುಪಿತನಾದ ಆರೋಪಿ ಅಮೀನಸಾಬ್, ಚಿಕನ್ ಕತ್ತರಿಸುವ ಚಾಕು ಹಿಡಿದು ಬೆನ್ನತ್ತಿದ್ದು, ಕುಡಿಯುವ ನೀರಿನ ಘಟಕದ ಬಳಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ.

Advertisement

ಈ ಕುರಿತು ಹಸೀನಾ ವಿಜಯಪುರ ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಬಳಿಕ ತನಿಖಾಧಿಕಾರಿ ಸಿಪಿಐ ಎಸ್.ಬಿ.ಪಾಲಭಾವಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ 3ನೇ ಅಧಿಕ ಜಿಲ್ಲಾ-ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುಭಾಶ ಸಂಕದ ಹತ್ಯೆ ಮಾಡಿದ ಅಮೀನಸಾಬ್‍ಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ಇದೇ ಪ್ರಕರಣದ ಇತರೆ ಅಪರಾಧಕ್ಕಾಗಿ 2 ವರ್ಷ ಶಿಕ್ಷೆ, 1 ಸಾವಿರ ರೂ. ದಂಡ ವಿಧಿಸಿದೆ.

ದಂಡದ ಹಣದಲ್ಲಿ 20 ಸಾವಿರ ರೂ. ಪರಿಹಾರವಾಗಿ ಹತ್ಯೆ ಮಾಡಿದ ಅಮೀನಸಾಬ್‍ನಿಂದ ಮೃತನ ತಾಯಿ ಹಸೀನಾಳಿಗೆ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಮೂರನೇ ಅಧಿಕ ಸರ್ಕಾರಿ ಅಭಿಯೋಜಕ ಬಿ.ಡಿ.ಭಾಗವಾನ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next