Advertisement

ನನ್ನ ಲೈಫ‌ು ಮುಗೀತು ಅಂದಾಗ…

11:27 AM May 28, 2019 | keerthan |

ಈಜು ಕಲಿಯೋದು ಅಂದ್ರೆ, ಅದೇನೋ ಹುಮ್ಮಸ್ಸು. ಪ್ರೈಮರಿ ಸ್ಕೂಲ್‌ನಲ್ಲಿ ಓದುತ್ತಿದ್ದ ನನಗೆ, ಅದೇ ಹುಮ್ಮಸ್ಸು ಒಂದು ಕೆರೆಯ ದಡಕ್ಕೆ ಹೋಗಿ ನಿಲ್ಲಿಸಿತ್ತು. ಹೇಗಾದರೂ ಮಾಡಿ ಈಜಿನಲ್ಲಿ ನಿಪುಣತೆ ಸಾಧಿಸಲೇಬೇಕೆಂದು, ನಮ್ಮೂರಿನ ಆ ಕೆರೆಗೆ ಹೋಗಿದ್ದೆ. ಅಲ್ಲಿ ನೋಡಿದರೆ, ನನಗಿಂತ ದೊಡ್ಡವರೆಲ್ಲ ನೀರಿಗೆ ಇಳಿದಿದ್ದರು. ನಾನು ಕೆರೆಯ ದಂಡೆಯ ಬಳಿ ಈಜುತ್ತಾ, ಅವರನ್ನೇ ನೋಡುತ್ತಿದ್ದೆ. ಕೆಲವು ನಿಮಿಷದಲ್ಲಿ ಅವರೆಲ್ಲರೂ ಹೊರಟುಬಿಟ್ಟರು. ಇಡೀ ಕೆರೆಯಲ್ಲಿ ಇದ್ದಿದ್ದು ನಾನೊಬ್ಬನೇ. ಏನೋ ಸ್ವಲ್ಪ ಭಂಡ ಧೈರ್ಯ ಬಂತು. ತುಸು ಮುಂದೆ ಈಜಲು ಹೋದೆ. ಕೆಲವೇ ಕ್ಷಣಗಳಲ್ಲಿ ನನಗೇ ಗೊತ್ತಿಲ್ಲದ ಹಾಗೆ, ಕೆರೆಯ ಆಳಕ್ಕೆ ಹೋಗಿದ್ದೆ.

Advertisement

ಎಷ್ಟೇ ಕೈಕಾಲು ಬಡಿದರೂ ಮೇಲಕ್ಕೆ ಬರಲಾಗುತ್ತಿಲ್ಲ. ನನ್ನ ಜೀವನ ಇವತ್ತಿಗೆ ಮುಗೀತು ಅಂತಲೇ ಅಂದುಕೊಂಡಿದ್ದೆ.  ಅಷ್ಟರಲ್ಲೇ, ಯಾರೋ ನೀರಿಗೆ ಹಾರಿದ ಹಾಗಾಯಿತು. ಆ ಶಬ್ದ ಕೇಳಿ ನಾನು, ಕೈಗಳನ್ನು ಮೇಲೆತ್ತಿ, “ಅಣ್ಣಾ… ಅಣ್ಣಾ…’ ಅಳುತ್ತಾ ಕರೆಯತೊಡಗಿದೆ. ಆ ಅಪರಿಚಿತ ವ್ಯಕ್ತಿ, ಕೊಂಚವೂ ಎದೆಗುಂದದೆ ನನ್ನನ್ನು ರಕ್ಷಿಸಿ, ದಡಕ್ಕೆ ಬಿಟ್ಟ. ನಾನೀಗ ಜೀವಂತ ಇದ್ದೇನೆಂದರೆ, ಅದಕ್ಕೆ ಆ ವ್ಯಕ್ತಿಯೇ ಕಾರಣ. ಅವರಿಗೆ ಒಂದು ಥ್ಯಾಂಕ್ಸ್‌.

ದಸ್ತಗೀರ ನದಾಫ್, ಯಳಸಂಗಿ

Advertisement

Udayavani is now on Telegram. Click here to join our channel and stay updated with the latest news.

Next