Advertisement

ಶಿಸ್ತುಬದ್ಧ ಶಿಕ್ಷಣದಿಂದ ಜೀವನ ಸಾರ್ಥಕ: ಡಾ|ಆರ್‌. ಕೆ. ಶೆಟ್ಟಿ

12:44 PM Aug 05, 2019 | Team Udayavani |

ಮುಂಬಯಿ, ಆ. 4: ಮನುಷ್ಯನು ತನ್ನ ಜೀವನದಲ್ಲಿ ಶಕ್ತಿ ಮತ್ತು ಯುಕ್ತಿಯಿಂದ ತನಗೆ ಬಂದ ಕಷ್ಟವನ್ನು ಎದುರಿಸಿ ಮುನ್ನಡೆದರೆ ಖಂಡಿತಾ ಸಫಲನಾಗುತ್ತಾನೆ. ನಮ್ಮಲ್ಲಿ ಪ್ರತ್ಯೇಕ ಗುರಿ ಮುಟ್ಟುವ ಛಲ ಬೇಕು. ಉತ್ತಮ ಕಾರ್ಯಕ್ಕೆ ಪ್ರಯತ್ನ ಅಗತ್ಯವಾಗಿದೆ. ಕಲಿಯುವ ವಿದ್ಯೆಯು ಶಿಸ್ತುಬದ್ಧವಾಗಿರಬೇಕು. ದೇವರು ಕೊಟ್ಟ ಶಕ್ತಿಯನ್ನು ಉಪಯೋಗಿಸಬೇಕು ಎಂದು ಇಸ್ಸಾಲ್ ಫೈನಾಶಿಯಲ್ ಸರ್ವಿಸಸ್‌ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ಜು. 28ರಂದು ಮೀರಾರೋಡ್‌ ಸಾಯಿಬಾಬಾ ನಗರದ ಸೈಂಟ್ ಥೋಮಸ್‌ ಚರ್ಚ್‌ ಸಭಾಂಗಣದಲ್ಲಿ ತುಳುನಾಡ ಸಮಾಜ ಮೀರಾ-ಭಾಯಂದರ್‌ ಆಯೋಜಿಸಿದ್ದ ಶಾಲಾ ಪರಿಕರಗಳ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣ ದೊಂದಿಗೆ ಸಂಸ್ಕಾರವಂತರಾಗಿ ಬೆಳೆಯಬೇಕು ಎಂದು ನುಡಿದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಭಾಯಂದರ್‌ ಯುನೈಟೆಡ್‌ ರಬ್ಬರ್ ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕ ಅಜಿತ್‌ ರೈ ಅವರು ಮಾತನಾಡಿ, ವಿದ್ಯಾರ್ಜನೆಯಲ್ಲಿ ವಿಜ್ಞಾನಕ್ಕೆ ಮಹತ್ವ ನೀಡಬೇಕು. ಮನುಷ್ಯನ ಜೀವನಕ್ಕಾಗಿ ಖರ್ಚನ್ನು ವಿಜ್ಞಾನದ ಮುಖಾಂತರ, ಹೊಸ ಅನ್ವೇಷಣೆಯೊಂದಿಗೆ ಸಮಾಜಕ್ಕೆ ನೀಡಬೇಕು. ವಿದ್ಯೆಯ ಮೂಲಕ ಜೀವನದ ವಿಕಸನಕ್ಕೆ ನಮ್ಮ ಪ್ರೋತ್ಸಾಹ ಸದಾಯಿದೆ ಎಂದರು.

ಇನ್ನೋರ್ವ ಅತಿಥಿ ಉದ್ಯಮಿ ಪಿ. ವಿ. ಭಾಸ್ಕರ್‌ ಅವರು ಮಾತನಾಡಿ, ಪ್ರತಿಯೋರ್ವ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಗುಣವನ್ನು ಪರಮಾತ್ಮ ನೀಡುತ್ತಾನೆ. ಸರ್ವವೂ ಪರಮಾತ್ಮನ ಇಚ್ಛೆಯಂತೆಯೇ ನಡೆಯುತ್ತದೆ. ನಾವು ಗಳಿಸಿದ ಒಂದಂಶವನ್ನು ಸಮಾಜಪರ ಕಾರ್ಯಕ್ಕೆ ಉಪಯೋಗಿಸಬೇಕು ಎಂದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಉಪಾಧ್ಯಕ್ಷ ದಯಾನಂದ ಪೂಜಾರಿ ಅವರು ಮಾತನಾಡಿ, ವಿದ್ಯೆಗೆ ಸದಾ ಪ್ರೋತ್ಸಾಹ ನೀಡುತ್ತಿರುವ ತುಳುನಾಡ ಸಮಾಜನ ಕಾರ್ಯವೈಖರಿ ಅಭಿನಂದನೀಯವಾಗಿದೆ. ಸಂಸ್ಥೆಯ ಸಮಾಜ ಸೇವೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

Advertisement

ಮೀರಾ-ಭಾಯಂದರ್‌ ಬಂಟರ ಸಂಘದ ಸ್ಥಳೀಯ ಸಮಿತಿಯ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪಾಡಿ ಅವರು ಮಾತನಾಡಿ, ಮಕ್ಕಳಿಗೆ ವಿದ್ಯೆಯೊಂದಿಗೆ ಮಾತಾಪಿತರು ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಘ-ಸಂಸ್ಥೆಗಳು ದತ್ತು ತೆಗೆದುಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಲೇಖಕ, ವಿದ್ವಾಂಸ ಮುಲ್ಕಿ ಹರಿಶ್ಚಂದ್ರ ಪಿ. ಸಾಲ್ಯಾನ್‌ ಅವರನ್ನು ತುಳು ಜಾನಪದ ಸಂಶೋಧಕ ಬಿರುದು ಪ್ರದಾನಿಸಿ ಸಮ್ಮಾನಿಸಲಾಯಿತು. ಅಲ್ಲದೆ ಕಲಾ ಸಂಘಟಕ ಕರುಣಾಕರ ಶೆಟ್ಟಿ ಕುಕ್ಕುಂದೂರು ದಂಪತಿ, ಕಲಾವಿದ, ಗಾಯಕ ಅಕ್ಷಯ್‌ ಕುಮಾರ್‌ ಕಾರ್ಕಳ ಅವರನ್ನು ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿದ ಹರಿಶ್ಚಂದ್ರ ಪಿ. ಸಾಲ್ಯಾನ್‌ ಅವರು ಮಾತನಾಡಿ, ತುಳುನಾಡಿನಿಂದ ಮಹಾರಾಷ್ಟ್ರಕ್ಕೆ ತನ್ನನ್ನು ಆಹ್ವಾನಿಸಿ ಸಮ್ಮಾನಿಸಿರುವುದಕ್ಕೆ ಋಣಿಯಾಗಿದ್ದೇನೆ. ತುಳುನಾಡ ಸಂಸ್ಕೃತಿಯನ್ನು ಬೆಳೆಸಲು ಸಂಘ-ಸಂಸ್ಥೆಗಳು ಮುಂದಾಗಬೇಕು ಎಂದರು.

ಪರಿಸರದ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ, ಉದ್ಯಮಿಗಳಿಗೆ, ಸಂಸ್ಥೆಯ ಪೋಷಕರುಗಳನ್ನು ಪುಷ್ಪಗುಚ್ಛವನ್ನಿತ್ತು ಅಭಿನಂದಿ ಸಲಾಯಿತು. ಆರಂಭದಲ್ಲಿ ಭಾರತಿ ಉಡುಪ ಮತ್ತು ಜ್ಯೋತಿ ಉಡುಪ ಪ್ರಾರ್ಥನೆಗೈದರು. ಅತಿಥಿ-ಗಣ್ಯರು, ಪದಾಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೌರವಾಧ್ಯಕ್ಷ ಶಂಭು ಕೆ. ಶೆಟ್ಟಿ ಸ್ವಾಗತಿಸಿದರು. ಅಧ್ಯಕ್ಷ ಡಾ| ರವಿರಾಜ್‌ ಎಂ. ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಕಲಾವಿದ ಜಿ. ಕೆ. ಕೆಂಚನಕೆರೆ ಕಾರ್ಯಕ್ರಮ ನಿರ್ವಹಿಸಿದರು.

ಆರಂಭದಲ್ಲಿ ಸದಸ್ಯರು, ಮಕ್ಕಳಿಂದ ಹಾಗೂ ವಿಶ್ವ ಡಾನ್ಸ್‌ ಅಕಾಡೆಮಿಯ ಮಕ್ಕಳಿಂದ ನೃತ್ಯ ವೈವಿಧ್ಯ, ಅಕ್ಷಯ ಕುಮಾರ್‌ ಕಾರ್ಕಳ ಅವರಿಂದ ರಸಮಂಜರಿ, ಡಾ| ರವಿರಾಜ್‌ ಸುವರ್ಣ ಕಥೆಯಾಧರಿಸಿ, ಅಶೋಕ್‌ ವಲದೂರು ಸಂಭಾಷಣೆ ನೀಡಿದ, ಜಿ. ಕೆ. ಕೆಂಚನಕೆರೆ ನಿರ್ದೇಶಿಸಿದ ಪೊಟ್ಟು ಗಟ್ಟಿ ಕಿರು ನಾಟಕ ಮಹಿಳಾ ವಿಭಾಗದ ಸದಸ್ಯೆಯರಿಂದ ಪ್ರದರ್ಶನಗೊಂಡಿತು.

ವೇದಿಕೆಯಲ್ಲಿ ಅತಿಥಿಗಳಾಗಿ ರಮೇಶ್‌ ಶೆಟ್ಟಿ ಸಿದ್ಧಕಟ್ಟೆ, ದುರ್ಗಾಪ್ರಸಾದ್‌ ಸಾಲ್ಯಾನ್‌, ಶ್ರೀಧರ ಮೂಲ್ಯ, ಪದಾಧಿಕಾರಿಗಳಾದ ನಾರಾಯಣ ಮೂಡಬಿದ್ರೆ, ಶೋಭಾ ವಿ. ಉಡುಪ, ರವೀಂದ್ರ ಶೆಟ್ಟಿ ಸೂಡ, ಅಮಿತಾ ಎಸ್‌. ಶೆಟ್ಟಿ, ಜಯಪ್ರಕಾಶ್‌ ಪೂಜಾರಿ, ಮಂಜುನಾಥ ಬಿ. ಕೆ., ರವಿ ಶೆಟ್ಟಿ ಶೃಂಗೇರಿ ಉಪಸ್ಥಿತರಿದ್ದರು. ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ವಿಭಾಗದ, ಯುವ ವಿಭಾಗದ ಸದಸ್ಯರು ಸಹಕರಿಸಿದರು. ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣೆ ನಡೆಯಿತು. ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ತುಳು-ಕನ್ನಡಿಗರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next