ಹಾನಗಲ್ಲ: ಕೌಶಲ್ಯಯುತ ವಿಧಾನದಿಂದ ಯಶಸ್ವಿ ಬದುಕು ನಮ್ಮದಾಗಲಿದ್ದು, ಭವಿಷ್ಯದ ಬದುಕಿಗೆ ನಮ್ಮನ್ನು ಸಜ್ಜುಗೊಳಿಸಿಕೊಳ್ಳುವಲ್ಲಿ ಯುವ ಸಮುದಾಯ ಈಗಲೇ ಸನ್ನದ್ಧರಾಗಬೇಕು ಎಂದು ಎನ್‌ಎಸ್‌ಎಸ್ ಜಿಲ್ಲಾ ನೋಡಲ್ ಅಧಿಕಾರಿ ಡಾ| ಪ್ರಕಾಶ ಹೊಳೇರ ತಿಳಿಸಿದರು.
ಶನಿವಾರ ಹಾನಗಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಾವೇರಿ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯೋಜಿಸಿದ್ದ ‘ಜೀವನ ಕೌಶಲ್ಯ ತರಬೇತಿ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯದ ಹೊರತಾಗಿಯೂ ಒಂದು ಪ್ರಪಂಚವಿದೆ. ಅದು ನಮ್ಮ ಬದುಕಿಗೆ ಸಹಕಾರಿಯೂ ಆಗಿದೆ. ಅದರೆ, ಅಲ್ಲಿ ಒಳ್ಳೆಯದನ್ನು ಮಾತ್ರ ಸ್ವೀಕರಿಸಬೇಕು. ನಮ್ಮ ಸುತ್ತಲ ಬದುಕು ಸುಂದರವಾಗಲು ಸುಂದರ ಬದುಕಿನ ಕನಸುಗಳೂ ಬೇಕು. ಆತ್ಮ, ಮನಸ್ಸು, ದೈಹಿಕ ಬಲ ಕುಂದಬಾರದು. ಸರಿದಾರಿಯತ್ತ ಬದಲಾವಣೆಯೇ ಬದುಕು. ದುಸ್ಸಾಹಸ ಬೇಡ. ಜೀವನ ದೃಷ್ಟಿ ಸರಿಪಡಿಸಿಕೊಳ್ಳಿ ಎಂದು ಸಲಹೆ ಮಾಡಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಮಾರುತಿ ಶಿಡ್ಲಾಪುರ, ಯುವ ಮನಸ್ಸುಗಳು ಅಕಾಲಿಕವಾಗಿ ಮುಪ್ಪಿಗೆ ಬಲಿಯಾಗುತ್ತಿವೆ. ಪುಸ್ತಕ ಸಂಸ್ಕೃತಿ ದೂರವಾಗಿ ಆಧುನಿಕ ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೇವೆ. ಆಧುನಿಕತೆಯ ಹೆಸರಿನಲ್ಲಿ ಬದುಕು ಹಸನಗೆಡುವುದು ಬೇಡ ಎಂದ ಅವರು, ನಾಳೆಗಾಗಿ ನನ್ನಲ್ಲಿ ಉತ್ಸಾಹ ಇಮ್ಮಡಿಗೊಳ್ಳಬೇಕು. ಅದಕ್ಕಾಗಿ ಉನ್ನತವಾದುದನ್ನು ಕಟ್ಟಿಕೊಳ್ಳಬೇಕು. ಹೋದ ಸಮಯ ಮತ್ತೆ ಬಾರದು ಎಂದರು.
ಜೀವನ ಕೌಶಲ್ಯ ತರಬೇತಿಯ ಸಂಪನ್ಮೂಲ ವ್ಯಕ್ತಿ ಈಶ್ವರ ಹುಣಸಿಕಟ್ಟಿ ಮಾತನಾಡಿ, ನಮ್ಮ ಮನಸ್ಸನ್ನು ನಮ್ಮ ಹಿಡಿತದಲ್ಲಿಡಬೇಕು. ಜೀವನ ಎಂದರೆ ಮನಬಂದಂತೆ ಬದುಕುವುದಲ್ಲ, ಮನಸ್ಸನ್ನು ಆದರ್ಶ ಬದುಕಿಗೆ ಹತ್ತಿರ ಮಾಡಿಕೊಳ್ಳುವುದು ಮುಖ್ಯ. ಜೀವನ ವಿಕಾಸವೇ ಬದುಕು. ಅವಿವೇಕವೆ ಬದುಕಿನ ಅಂತ್ಯ. ಮನೋಬಲವೇ ಎಲ್ಲದಕ್ಕೂ ಮುಖ್ಯ, ಧೈರ್ಯ ಸಾಹಸ ಮನೋವೃತ್ತಿಯೂ ಬೇಕು. ಮೋಸ ವಂಚನೆಯ ಜೀವನದಿಂದ ದೂರವಿರಿ. ಸಾಧ್ಯವಾದರೆ ಸಹಾಯ ಮಾಡಿ ಜೀವನ ಸಾರ್ಥಕವಾಗುತ್ತದೆ ಎಂದರು.
ಜೀವನ ಕೌಶಲ್ಯ ತರಬೇತಿಯ ಸಂಪನ್ಮೂಲ ವ್ಯಕ್ತಿ ಸಂಜೀವಕುಮಾರ ಬೆಳವತ್ತಿ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ| ಎಚ್.ಎಸ್.ಬಾರ್ಕಿ, ಉಪನ್ಯಾಸಕ ಪ್ರೊ| ಎಸ್.ಎಸ್. ನಿಸ್ಸೀಮಗೌಡರ್, ಪ್ರೊ| ಸುಮಂಗಲಾ ನಾಯನೇಗಿಲ, ಪ್ರೊ| ರೂಪಾ ಹಿರೇಮಠ, ಪ್ರೊ| ಕೆ.ಈಶ್ವರ, ಪ್ರೊ| ವೀಣಾ ದೇವರಗುಡಿ, ಪ್ರೊ| ಮೂಕಾಂಬಿಕಾ ನಾಯ್ಕ ಅತಿಥಿಗಳಾಗಿದ್ದರು. ದುರ್ಗಾಲಕ್ಷಿ ್ಮೕ ಕುಲಕರ್ಣಿ ಭಾವಗೀತೆ ಹಾಡಿದರು.