Advertisement

Drought: ಜನವರಿ ಬಳಿಕದ ಬದುಕು ಆತಂಕಿತ: ಸದನದಲ್ಲಿ ಬರ ಚರ್ಚೆ

11:34 PM Dec 08, 2023 | Team Udayavani |

ಬೆಳಗಾವಿ: ಬರಗಾಲದ ಹಿನ್ನೆಲೆಯಲ್ಲಿ ಜನವರಿ ಬಳಿಕದ ನಾಲ್ಕೈದು ತಿಂಗಳ ಬದುಕುವುದು ಹೇಗೆ ಎಂದು ಜನ ಆಕಾಶ ನೋಡುವಂತಾಗಿದೆ ಎಂದು ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು.

Advertisement

ಶುಕ್ರವಾರ ವಿಧಾನಸಭೆಯಲ್ಲಿ ನಡೆದ ಬರಗಾಲದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನಾವಿನ್ನೂ ಡಿಸೆಂಬರ್‌ ತಿಂಗಳಲ್ಲಿ ಇದ್ದೇವೆ. ಈಗಾಗಲೇ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೊಂದು ತಿಂಗಳು ಹೇಗೋ ದೂಡಿಬಿಡಬಹುದು. ಜನವರಿ ಬಳಿಕ ಹೇಗೆ ಎನ್ನುವ ಆತಂಕ ಆರಂಭವಾಗಿದೆ ಎಂದರು.

ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಕೇಂದ್ರ ಸರಕಾರ ಪ್ರತಿ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡಿದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 4 ಸಾವಿರ ರೂ. ಸೇರಿಸಿ ನೀಡಲಾಗುತ್ತಿತ್ತು. ಅದನ್ನು ಈಗಿನ ಕಾಂಗ್ರೆಸ್‌ ಸರಕಾರ ನಿಲ್ಲಿಸಿದೆ. ಅದನ್ನು ಮುಂದುವರಿಸಿದ್ದರೆ ಬರಗಾಲದಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗುತ್ತಿತ್ತು. ಅದನ್ನು ಬಿಟ್ಟು ಈಗ 2 ಸಾವಿರ ರೂ.ವರೆಗೆ ಹಣ ನೀಡುವುದಾಗಿ ಪ್ರಕಟಿಸಿದೆ. ಇದುವರೆಗೆ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.

ತಟ್ಟೆಗೆ ಊಟ ಹಾಕಿ ಕೈ ಕಟ್ಟಿ ಹಾಕಿದರೆ ಹೇಗೆ?
ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣ ಇದೆ ಎನ್ನುತ್ತೀರಿ. ಆದರೆ ಒಂದೇ ಒಂದು ಕೊಳವೆಬಾವಿ ಕೊರೆಸಲು ಆಗುತ್ತಿಲ್ಲ. ತಟ್ಟೆಗೆ ಊಟ ಹಾಕಿ ಕೈ ಕಟ್ಟಿ ಹಾಕಿದರೆ ಹೇಗೆ? ಕೊಳವೆಬಾವಿ ಕೊರೆದ ಕೂಡಲೇ ವಿದ್ಯುತ್‌ ಪರಿವರ್ತಕ (ಟಿಸಿ) ಹಾಗೂ ಕೊಳವೆಮಾರ್ಗ ಅಳವಡಿಸಬೇಕು. ಲೋಡ್‌ಶೆಡ್ಡಿಂಗ್‌ ನಿಲ್ಲಿಸಿ. ನರೇಗಾ ಕಾರ್ಮಿಕರಿಗೆ ಕನಿಷ್ಠ 500 ರೂ. ಕೂಲಿ ಕೊಡಬೇಕು. ಪಶುಭಾಗ್ಯ ಯೋಜನೆ ಮರುಜಾರಿ ಮಾಡಬೇಕು. ಈ ಸರಕಾರದಲ್ಲಿ ರಸ್ತೆಗೂ ಬರಗಾಲ ಬಂದಿದೆ. ಯಡಿಯೂರು-ತುರುವೇಕರೆಗೆ ರಸ್ತೆಯಲ್ಲಿ ಹೆರಿಗೆ ಆಸ್ಪತ್ರೆಯೇ ಬೇಡ, ವಾಹನದಲ್ಲಿ ಹೋದರೆ ಸಾಕು ಹೆರಿಗೆ ಆಗುತ್ತದೆ. ಕೇವಲ ಗ್ಯಾರಂಟಿ ಯೋಜನೆಗಳಿಗೆ ಸೀಮಿತ ಆದರೆ ಸಾಲದು. ಅಭಿವೃದ್ಧಿಗೂ ಹಣ ಕೊಡಬೇಕು. ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ನೀಡುವ ಸರಕಾರ, ರೈತರಿಗೆ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಸತತ ಬರಗಾಲ ಬಂದರೆ ಗತಿ ಏನು?
ಶರತ್‌ ಬಚ್ಚೇಗೌಡ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಳದಿಂದ ಹವಾಮಾನ ವೈಪರೀತ್ಯ ಆಗುತ್ತಲೇ ಇದ್ದು, ಅತಿ ಹೆಚ್ಚು ತಾಪಮಾನವುಳ್ಳ ದೇಶಗಳ ಸಾಲಿನಲ್ಲಿ ಭಾರತವು 6ನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ ನೂರಾರು ವರ್ಷಗಳಾದರೂ ಬತ್ತದ ಹೂವರ್‌ ಜಲಾಶಯವಿದೆ. ಆದರೆ ಸತತ 7 ವರ್ಷಗಳ ಬರಗಾಲದಿಂದ ಹೂವರ್‌ ಜಲಾಶಯವೂ ತಳ ಕಂಡಿದೆ. ನಮ್ಮಲ್ಲಿರುವ ಜಲಾಶಯಗಳು ಒಂದು ವರ್ಷ ಮಳೆ ಬಾರದಿದ್ದರೆ ತಳ ಕಾಣುತ್ತವೆ. ಹೀಗಿರುವಾಗ ಸತತ ಬರಗಾಲ ಬಂದರೆ ಗತಿ ಏನು? ಕೆ.ಸಿ. ವ್ಯಾಲಿ, ಎಚ್‌ಎನ್‌ ವ್ಯಾಲಿಯಿಂದ ಸಂಸ್ಕರಿಸಿದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಸುತ್ತಮುತ್ತಲ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ವೃದ್ಧಿಸಲಾಗುತ್ತಿದೆ. ಇಂತಹ ಕಾಮಗಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಬೇಕು. ಎಲ್ಲ ಇಲಾಖೆಗಳ ಬಜೆಟ್‌ನಲ್ಲಿ ಶೇ.24ರಷ್ಟು ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಾತ್ರ ಬಳಸುವ ಕಾನೂನು ರೀತಿಯಲ್ಲೇ ವಿಪತ್ತು ನಿರ್ವಹಣೆಗೂ ಒಂದು ನಿಧಿ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

Advertisement

ಅಡಿಕೆ ಆಮದು ನಿರ್ಬಂಧ ಅಗತ್ಯ: ಅಶೋಕ್‌ ರೈ
ಕಾಂಗ್ರೆಸ್‌ನ ಅಶೋಕ ರೈ ಮಾತನಾಡಿ, 400-480 ರೂ. ಇದ್ದ ಕ್ವಿಂಟಾಲ್‌ ಅಡಿಕೆ ದರವು 410 ರೂ.ಗೆ ಇಳಿದಿದೆ. 12 ಸಾವಿರ ಟನ್‌ ಅಡಿಕೆ ಆಮದು ಮಾಡಲಾಗುತ್ತಿದೆ. ನಮ್ಮ ರಾಜ್ಯ ಸರಕಾರವು ಕೇಂದ್ರಕ್ಕೆ ಪತ್ರ ಬರೆದು ಅಡಿಕೆ ಆಮದನ್ನು ನಿಲ್ಲಿಸಬೇಕು. ಅಡಕೆಯಲ್ಲಿ ಹಾನಿಕಾರಿಕ ಅಂಶಗಳಿವೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಪ್ರಮಾಣಪತ್ರ ಸಲ್ಲಿಸಿದ್ದು, ಈ ವಿಚಾರದಲ್ಲೂ ರಾಜ್ಯ ಸರಕಾರ ಮಧ್ಯಪ್ರವೇಶಿಸಿ ಸರಿಯಾದ ಮಾಹಿತಿಯನ್ನು ನ್ಯಾಯಾಲಯಕ್ಕೆ ದಾಖಲೆಸಹಿತ ಒದಗಿಸಬೇಕು. ಹಳದಿ ರೋಗಕ್ಕೆ ತುತ್ತಾಗಿರುವ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರೈತರಿಗೆ ಶಕ್ತಿ ತುಂಬಬೇಕಿದೆ: ಪೂಂಜ
ಬಿಜೆಪಿಯ ಹರೀಶ್‌ ಪೂಂಜ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿಗಾಗಿ 900-1,200 ಅಡಿ ಕೊಳವೆಬಾವಿ ಕೊರೆಯಬೇಕಾಗಿದೆ. ಹಿಂದಿನ ಸಿದ್ದರಾಮಯ್ಯ ಸರಕಾರ ಘೋಷಿಸಿದ್ದ ಪಶ್ಚಿಮವಾಹಿನಿ ಯೋಜನೆಯನ್ನು ಯಡಿಯೂರಪ್ಪ ಸರಕಾರ ಅನುಷ್ಠಾನಗೊಳಿಸುವ ಮೂಲಕ 400-500 ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದ ಅಂತರ್ಜಲ ಮಟ್ಟವೂ ವೃದ್ಧಿಯಾಗಿದ್ದು, ಕೃಷಿಗೂ ಸಹಕಾರಿಯಾಗಿದೆ. ಆದರೆ ಫ‌ಸಲ್‌ಬಿಮಾ ಯೋಜನೆಯ ಹಣ ತಲುಪಿಲ್ಲ. ಈ ಬಗ್ಗೆ ಸರಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು. ಎಲೆಚುಕ್ಕಿ ರೋಗ, ಹಳದಿ ರೋಗದಿಂದಾಗಿ ರೈತರು ಶಕ್ತಿ ಕಳೆದುಕೊಂಡಿದ್ದು, ರಬ್ಬರ್‌ ಬೆಲೆ ಕುಸಿತ ಆಗಿದೆ. ಹೀಗಾಗಿ ರಬ್ಬರ್‌ಗೆ ಬೆಂಬಲ ಬೆಲೆ ಘೋಷಿಸುವ ಮೂಲಕ ರೈತರಿಗೆ ಶಕ್ತಿ ತುಂಬಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next