ಬೆಂಗಳೂರು: ಲೆಫ್ಟಿನೆಂಟ್ ಜನರಲ್ ವಿ.ಎಂ. ಪಾಟೀಲ್ (84) ಅವರು ರವಿವಾರ ನಿಧನ ಹೊಂದಿದರು.
ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಸಹಿತ ಹಲವು ಅತ್ಯುನ್ನತ ಪದಕಗಳನ್ನು ಮುಡಿಗೇರಿಸಿಕೊಂಡಿದ್ದ ಅವರು 1962ರಲ್ಲಿ ನಡೆದ ಭಾರತ- ಚೀನ ಯುದ್ಧ ಮತ್ತು 1965ರಲ್ಲಿ ಭಾರತ- ಪಾಕಿಸ್ಥಾನ ನಡುವಿನ ಯುದ್ಧದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದರು.
ವಿಯೆಟ್ನಾಂ, ಲಾವೋಸ್ ಮತ್ತು ಕಾಂಬೋಡಿಯದ ಭಾರತೀಯ ರಾಯಭಾರಿ ಕಚೇರಿಗಳ ಮೊದಲ ಭಾರತೀಯ ರಕ್ಷಣ ಸಲಹೆಗಾರರಾಗಿದ್ದರು.
ಇರಾಕ್ ಮತ್ತು ಇರಾನ್‌ನ ಯುನೈಟೆಡ್ ನೇಷನ್ಸ್‌ನ ಸೇನಾ ವೀಕ್ಷಕರ ತಂಡದ ಕಮಾಂಡರ್ ಆಗಿ, ಅಖಿಲ ಭಾರತೀಯ ಪೂರ್ವ ಸೈನಿಕ ಸೇವಾ ಪರಿಷತ್ತಿನ ಅಧ್ಯಕ್ಷರು ಹಾಗೂ ಫೋರಂ ಫಾರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯುರಿಟಿ (ಎಫ್ಐಎನ್‌ಎಸ್) ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ವಿ.ಎಂ. ಪಾಟೀಲ್ ಅವರ ನಿಧನಕ್ಕೆ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂತಾಪ ಸೂಚಿಸಿದ್ದಾರೆ.