Advertisement

ಸೆಕ್ಸ್, ಡೀಲ್.. ಬಂಧಿತರಿಂದ 3 ನಿಗೂಢ ಕೊಲೆ ರಹಸ್ಯ ಬಯಲು, ಜೈಲುಪಾಲು!

10:27 AM Jun 08, 2017 | Sharanya Alva |

ಬೆಂಗಳೂರು: ಮೂರು ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು ಅದೇ ಆರೋಪಿಗಳು 16 ವರ್ಷದ ಹಿಂದೆ ನಡೆಸಿದ್ದ ಇನ್ನೂ ಎರಡು ಕೊಲೆ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. ವಿಶೇಷವೆಂದರೆ, ಬಂಧಿತ ಆರೋಪಿಗಳು ಮೂರೂ ಕೊಲೆಗಳನ್ನು ಒಂದೇ ಸ್ಥಳದಲ್ಲಿ,
ಒಂದೇ ಮಾದರಿಯಲ್ಲಿ ಮಾಡಿದ್ದರು. ನಂತರ ಶವವನ್ನು ರೈಲ್ವೆ ಹಳಿಗಳ ಮೇಲಿಟ್ಟು ಶವದ ಮೇಲೆ ರೈಲು ಹಾದು ಹೋಗುವವರೆಗೂ ಕಾದು ನಿಂತು ನಂತರ ಅಲ್ಲಿಂದ ತೆರಳುತ್ತಿದ್ದರು.

Advertisement

2014ರಲ್ಲಿ ಕೆಂಗೇರಿ ನಿವಾಸಿ ಸುರೇಶ್‌ ಎಂಬಾತನ ಕೊಲೆಗೆ ಸಂಬಂಧಿಸಿದಂತೆ ಕೆಂಗೇರಿಯ ಗಾಂಧಿನಗರ ನಿವಾಸಿ ಶೇಖರ್‌ (33), ಕುಮಾರ್‌ (37), ಗಣೇಶ್‌ (31), ನಾಗೇಂದ್ರ ಕುಮಾರ್‌ (34), ಅರುಂಧತಿನಗರದ ವೆಂಕಟೇಶ್‌ (40), ಮಾಕಳಿಯ ನಗರೂರು ಕಾಲೋನಿಯ ರಾಜು (34),ರಾಮೋಹಳ್ಳಿ ವಿನಾಯಕ ನಗರದ ನಾಗೇಂದ್ರ (25) ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇನ್ನೆರಡು ಕೊಲೆಗಳ ರಹಸ್ಯ ಬಯಲಾಗಿದೆ.

2014ರಲ್ಲಿ ಸುರೇಶ್‌ನನ್ನು ಕೊಲೆ ಮಾಡಿದ್ದ ಆರೋಪಿಗಳು, ಅದಕ್ಕೂ 12 ವರ್ಷ ಮುಂಚೆ (2002) ಸುರೇಶ್‌ನ
ಸಹೋದರ ರಮೇಶ್‌ನನ್ನು ಕೊಲೆ ಮಾಡಿದ್ದರು. ಅದಕ್ಕೂ ಮುನ್ನ ಅಂದರೆ 2001ರಲ್ಲಿ ಯಲ್ಲಪ್ಪ ಎಂಬುವರನ್ನು ಕೊಲೆ
ಮಾಡಿದ್ದರು ಎಂಬ ಅಂಶ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಂಗೇರಿ ನಿವಾಸಿ ಸುರೇಶ್‌ ಎಂಬಾತ ಮುನಿರತ್ನ ಎಂಬಾಕೆಯನ್ನು ವಿವಾಹವಾಗಿದ್ದ. ಆದರೆ, ವೈವಾಹಿಕ ಸಂಬಂಧ ಹದಗೆಟ್ಟು ಇಬ್ಬರೂ ಪ್ರತಿನಿತ್ಯ ಜಗಳವಾಡುತ್ತಿದ್ದು, ಇದರಿಂದ ಬೇಸರಗೊಂಡಿದ್ದ ಸುರೇಶ್‌ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದ.

ಕೆಲ ತಿಂಗಳು ಕಾದ ಬಳಿಕ ಮುನಿರತ್ನ, ತನ್ನ ಪತಿ ಜಗಳದಿಂದ ಬೇಸತ್ತು ನನ್ನಿಂದ ದೂರವಾಗಿರಬಹುದು ಎಂದು ಭಾವಿಸಿ ಮತ್ತೂಂದು ಮದುವೆಯಾಗಿದ್ದರು. ಈ ಮಧ್ಯೆ ಸುರೇಶ್‌ ಮೃತದೇಹ ಕೆಂಗೇರಿ- ಹೆಜ್ಜಾಲ ನಡುವಿನ ರೈಲ್ವೆ ಹಳಿ ಮೇಲೆ ಪತ್ತೆಯಾಗಿತ್ತು. ಈ ಮಧ್ಯೆ ಸುರೇಶ್‌ ಸಾವಿನ ಬಗ್ಗೆ ಸಿಸಿಬಿ ಪೊಲೀಸರು ಪರಿಶೀಲಿಸಿದಾಗ ಅದು ಕೊಲೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು.

Advertisement

ಈ ಹಿನ್ನೆಲೆಯಲ್ಲಿ ರೈಲ್ವೆ ಠಾಣೆಯಲ್ಲಿ ದಾಖಲಾಗಿದ್ದ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ಕೆಂಗೇರಿ ಠಾಣೆಯಲ್ಲಿ ಕೊಲೆ ಪ್ರಕರಣ ಎಂದು ದಾಖಲಿಸಿ ಮರು ತನಿಖೆ ಆರಂಭಿಸಲಾಗಿತ್ತು. 

ಸುರೇಶನ ಕೊಲೆಯಾಗಿದ್ದು ಏಕೆ?: ಈ ಮೊದಲೇ ಹೇಳಿದಂತೆ ಸುರೇಶ್‌ಗೂ ಮೊದಲು ಆತನ ಸೋದರ ರಮೇಶನನ್ನು
ಆರೋಪಿಗಳು 2002ರಲ್ಲಿ ಕೊಲೆ ಮಾಡಿದ್ದರು. ಇದಕ್ಕೆ ಶೇಖರ್‌ ಕಾರಣ ಎಂದು ಸುರೇಶ್‌ಗೆ ಗೊತ್ತಾಗಿತ್ತು. ಈ ಹಿನ್ನೆಲೆ ಯಲ್ಲಿ ಸುರೇಶ್‌, ಆರೋಪಿಗಳ ಪೈಕಿ ನಾಗೇಂದ್ರ, ಗಣೇಶ್‌ ಮತ್ತು ಇತರರಿಗೆ ಶೇಖರ್‌ನನ್ನು ಕೊಲ್ಲಲು ಸುಫಾರಿ ಕೊಟ್ಟಿದ್ದ. ಆದರೆ, ಆರೋ ಪಿ ಗಳು ಶೇಖರ್‌ನ ಜತೆ ಸೇರಿ 2014  ರಲ್ಲಿ ಸುರೇಶ್‌ನನ್ನು ಮದ್ಯ ಪಾನ ಸೇವನೆ
ನೆಪದಲ್ಲಿ ಕರೆಸಿಕೊಂಡು ಕುತ್ತಿ ಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.ನಂತರ ಕೆಂಗೇರಿ ಬಳಿಯ ರೈಲ್ವೆ ಹಳಿ ಮೇಲೆ ಮಲಗಿಸಿ ಅಪಘಾತವೆಂದು ಬಿಂಬಿಸಿದ್ದರು. 

ರಮೇಶನನ್ನು ಕೊಂದಿದ್ದು ಹೆಣ್ಣಿಗಾಗಿ:
ಸುರೇಶನ ಸೋದರ ರಮೇಶ್‌ ಆರೋಪಿಗಳಲ್ಲಿ ಒಬ್ಬನಾದ ವೆಂಕಟೇಶ್‌ನ ಒಂದು ಕಾಲದ ಪ್ರೇಯಸಿ, ಯಲ್ಲಪ್ಪನ
ಪತ್ನಿಯೂ ಆಗಿದ್ದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದರಿಂದ ಕೋಪಗೊಂಡಿದ್ದ ಆರೋಪಿ ವೆಂಕಟೇಶ್‌ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ರಮೇಶ್‌ನನ್ನು ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ರೈಲ್ವೆ ಹಳಿ ಮೇಲೆ ಮಲಗಿಸಿದ್ದರು. ರೈಲು ಹೋಗುವವರೆಗೂ ಕಾದು ದೇಹ ಛಿದ್ರವಾಗುವವರೆಗೆ ಕಾದಿದ್ದರು ಎಂದು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಅದೇ ಹೆಣ್ಣಿಗಾಗಿ ಯಲ್ಲಪ್ಪನ ಕೊಲೆ:
ರಮೇಶ ಅಕ್ರಮ ಸಂಬಂಧ ಹೊಂದಿದ್ದ ಅದೇ ಹೆಣ್ಣು ಯಲ್ಲಪ್ಪನ ಪತ್ನಿಯಾಗಿದ್ದಳು. ಅಲ್ಲದೆ ಆರೋಪಿ ವೆಂಕಟೇಶನಿಗೆ
ಪ್ರೇಯಸಿಯಾಗಿದ್ದಳು. ಯಲ್ಲಪ್ಪ ಯಲ್ಲಪ್ಪ ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಇದರಿಂದ ಆಕ್ರೋಶಗೊಂಡಿದ್ದ ವೆಂಕಟೇಶ್‌, ಶೇಖರ್‌ ಮತ್ತು ಕುಮಾರ್‌ ಹಾಗೂ ಇತರೆ ಆರೋಪಿಗಳ ಜತೆ ಸೇರಿಕೊಂಡು, 2001ರಲ್ಲಿ ರಮೇಶನಿಗೂ ಮೊದಲೇ ಕೆಂಗೇರಿ ಹೊರವಲಯದಲ್ಲಿ ಕೊಂದಿದ್ದರು.

ನಂತರ ಕೆಂಗೇರಿ ಬಳಿಯ ರೈಲ್ವೆ ಹಳಿ ಮೇಲೆ ಮಲಗಿಸಿ ನಾಪತ್ತೆಯಾಗಿದ್ದರು. ನಂತರ ವೆಂಕಟೇಶ್‌ ಯಲ್ಲಪ್ಪನ ಪತ್ನಿ ಜತೆ ಸಂಸಾರ ನಡೆಸುತ್ತಿದ್ದ. 

ಕೊಲೆಗಡುಕರು ಸಿಕ್ಕಿಬಿದ್ದಿದ್ದು ಹೀಗೆ
ಆರೋಪಿಗಳು ವಾರದ ಹಿಂದೆ ಕೆಂಗೇರಿ ಬಳಿಯ ಬಾರ್‌ವೊಂದರಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ಕುಳಿತಿದ್ದರು. ಆಗ ಈ ಹಿಂದಿನ ಕೊಲೆ ಪ್ರಕರಣ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ವೆಂಕಟೇಶ್‌ ಮತ್ತು ಶೇಖರ್‌, ಯಾವುದೇ ಕಾರಣಕ್ಕೂ ಈ ಹಿಂದಿನ ಕೃತ್ಯಗಳ ಬಗ್ಗೆ ಮಾತನಾಡದಂತೆ ಇತರರಿಗೆ ಎಚ್ಚರಿಸಿದ್ದರು. ಈ ಮಾಹಿತಿ ತಿಳಿದ ಬಾತ್ಮೀದಾರರೊಬ್ಬರು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಎಸಿಪಿ ಎಚ್‌. ಎಂ.ಮಹದೇವಪ್ಪ ಮತ್ತು ಇನ್‌ಸ್ಪೆಕ್ಟರ್‌ ಎಚ್‌.ಟಿ.ಕುಲಕರ್ಣಿ ರೈಲ್ವೆ ಠಾಣೆಯಲ್ಲಿ ದಾಖಲಾಗಿದ್ದ  ಪ್ರಕರಣವನ್ನು ಪರಿಶೀಲಿಸಿ 16 ವರ್ಷದ ಹಿಂದೆ ಕಂಗಟ್ಟಾಗಿ ಉಳಿದಿದ್ದ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೆರಡು ಪ್ರಕರಣಗಳಲ್ಲಿ ಭಾಗಿ: ಬಂಧಿತ ಏಳು ಆರೋಪಿಗಳು ಈ ಮೂರು ಪ್ರಕರಣ ಗಳಲ್ಲದೇ 2003 ಮತ್ತು 2013ರಲ್ಲಿ ನಡೆದಿದ್ದ ಮಣಿಮುತ್ತ ಮತ್ತು ವಾಸು ಕೊಲೆ ಪ್ರಕರಣ ದಲ್ಲೂ ಭಾಗಿಯಾಗಿ ಜೈಲು ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶೇಖರ್‌ನ ಸಂಬಂಧಿ ಸಂಪತ್‌ ಕುಮಾರ್‌ನ ಮಗಳಿಗೆ ಮಣಿಮುತ್ತು ಎಂಬಾತನ ಮಗ ಲೈಂಗಿಕ ಕಿರುಕುಳ ನೀಡಿದ್ದ. ಈ ಹಿನ್ನೆಲೆಯಲ್ಲಿ ಮಣಿಮುತ್ತುಗೆ ಶೇಖರ್‌, ಮಗನಿಗೆ ಬುದ್ಧಿ ಹೇಳುವಂತೆ
ಸೂಚಿಸಿದ್ದ. ಇದಕ್ಕೆ ಒಪ್ಪದ ಮಣಿಮುತ್ತುನನ್ನು ಆರೋಪಿಗಳು ಕೊಲೆಗೈದು ಗೋಣಿ  ಚೀಲದಲ್ಲಿ ತುಂಬಿ ಕೆಂಗೇರಿ ಕೆರೆಯ ಬಳಿ ಎಸೆದಿದ್ದರು. ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು 2013ರಲ್ಲಿ ಆರೋಪಿ ಶೇಖರನ
ಸ್ನೇಹಿತ ರಾಘವೇಂದ್ರ ಜಾತ್ರೆಯೊಂದರಲ್ಲಿ ಪರಿಚಯವಾದ ವಾಸು ಎಂಬಾತನ ಪತ್ನಿ ವೀಣಾ ಜತೆ ಅಕ್ರಮ ಸಂಬಂಧ ಹೊಂದಿದ್ದ.

ವೀಣಾ ಪತಿ ವಾಸುನನ್ನು ಕೊಲೆ ಮಾಡಲು 5 ಲಕ್ಷಕ್ಕೆ ರಾಘವೇಂದ್ರನಿಗೆ ಸುಪಾರಿ ಕೊಟ್ಟಿದ್ದಳು. ಆದರೆ, ರಾಘವೇಂದ್ರ ಶೇಖರ್‌ ಮತ್ತು ಇತರೆ ಆರೋಪಿಗಳಿಗೆ ಕೇವಲ 5 ಸಾವಿರ ರೂ. ಕೊಟ್ಟು ಕೊಲೆ ಮಾಡಿಸಿದ್ದ. ಇದರಿಂದ ಅಸಮಾಧಾನಗೊಂಡಿದ್ದ ಆರೋಪಿ ಗಳು, ವೀಣಾಳ ಬಳಿ ಹೋಗಿ ಕೇವಲ 5 ಸಾವಿರಕ್ಕೆ ಕೊಲೆಗೈದಿದ್ದೇವೆ. ಹಾಗಾಗಿ ಎಲ್ಲರೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕೆಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಆಕೆ ಕೂಡ ಒಪ್ಪಿದ್ದಳು. ಇದಕ್ಕೆ ವಿರೋಧ
ವ್ಯಕ್ತಪಡಿಸಿದ್ದ ರಾಘವೇಂದ್ರನ ಮೇಲೂ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ  ರಾಘವೇಂದ್ರ ವಿವಿಪುರಂ ಠಾಣೆಯಲ್ಲಿ ದೂರು ನೀ ಡಿ,ವಾಸು ಕೊಲೆ ಪ್ರಕರಣವನ್ನು ಪೊಲೀಸರ ಮುಂದೆ ಹೇಳಿದ್ದ. ಈ ಪ್ರಕರಣದಲ್ಲಿ ಎಲ್ಲರೂ ಜೈಲು ಸೇರಿದ್ದರು ಎನ್ನಲಾಗಿದೆ.

ಒಂದೇ ಸ್ಟೈಲ್‌,ಒಂದೇ ಸ್ಪಾಟ್‌
ಸುರೇಶ್‌, ಈತನ ಸಹೋದರ ರಮೇಶ್‌ ಹಾಗೂ ಯಲ್ಲಪ್ಪನನ್ನು ಕೆಂಗೇರಿ ಹೊರವಲಯದ ನಿರ್ಜನ ಪ್ರದೇಶದಲ್ಲಿ ಒಂದೇ ಮಾದರಿಯಲ್ಲಿ ಒಂದೇ ಸ್ಥಳದಲ್ಲಿ ಆರೋಪಿಗಳು ಕೊಲೆ ಮಾಡಿದ್ದರು. ಮೃತ ದೇಹಗಳನ್ನು ರೈಲು ಹಳಿ ಮೇಲೆ ಮಲಗಿಸಿ, ನಂತರ ಮೃತ ದೇಹಗಳು ಛಿದ್ರವಾದ ಬಳಿಕ ಸ್ಥಳದಿಂದ ಪರಾರಿಯಾಗುತ್ತಿದ್ದರು. ಮತ್ತೂಂದು ವಿಚಾರವೆಂದರೆ ಒಂದೇ ಹಗ್ಗದಿಂದ ಮೂವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತ(ಅಪರಾಧ) ಎಸ್‌.ರವಿ, ಡಿಸಿಪಿ ರಾಮ್‌ನಿವಾಸ್‌, ಎಸಿಪಿ ಎಚ್‌. ಎಂ.ಮಹದೇವಪ್ಪ, ಉಪಸ್ಥಿತರಿದ್ದರು. ಈ ವೇಳೆ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್‌ ಎಚ್‌.ಟಿ. ಕುಲಕರ್ಣಿ ಮತ್ತು ತಂಡಕ್ಕೆ ಆಯುಕ್ತರು ಬಹುಮಾನ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next