Advertisement

ಮತದಾರರಿಗೆ ಆಮಿಷ: ಆರೋಪಿಗೆ 6 ತಿಂಗಳು ಜೈಲು

11:08 PM Apr 29, 2019 | Lakshmi GovindaRaju |

ಹುಬ್ಬಳ್ಳಿ: 2013ರಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇಂತಹುದೇ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರಿಗೆ ಆಸೆ-ಆಮಿಷವೊಡ್ಡಿ ಪ್ರೇರೇಪಿಸಿದ್ದ ವ್ಯಕ್ತಿಯೊಬ್ಬರಿಗೆ ಮಂಗಳವಾರ ಇಲ್ಲಿನ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಆರು ತಿಂಗಳ ಸಾದಾ ಶಿಕ್ಷೆ ಹಾಗೂ 20 ಸಾವಿರ ರೂ.ದಂಡ ವಿಧಿಸಿದೆ. ಇಲ್ಲಿನ ದೇಶಪಾಂಡೆನಗರ ಬೈಲಪ್ಪನವರನಗರದ ಜಗದೀಶ ಕೆ.ವೆರ್ಣೇಕರ ಎಂಬುವರೇ ಶಿಕ್ಷೆಗೊಳಗಾಗಿದ್ದಾರೆ.

Advertisement

ಏನಿದು ಪ್ರಕರಣ?: ಜಗದೀಶ ಕೆ.ವೆರ್ಣೇಕರ ಅವರು 2013ರಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೇ 4ರಂದು ತಮ್ಮ ದ್ವಿಚಕ್ರ ವಾಹನದಲ್ಲಿ 4 ಲಕ್ಷ ರೂ.ಹಣವಿಟ್ಟುಕೊಂಡು ಬಂದು ಮತದಾರರಿಗೆ ಹಣದ ಆಸೆ-ಆಮಿಷವೊಡ್ಡಿ ತನಗೆ ಬೇಕಾದ ಅಭ್ಯರ್ಥಿಗೆ ಮತ ಹಾಕುವಂತೆ ಪ್ರೇರೇಪಿಸುತ್ತಿದ್ದರು.

ಈ ಸಂದರ್ಭದಲ್ಲಿ ಉಪನಗರ ಠಾಣೆಯ ಅಂದಿನ ಇನ್‌ಸ್ಪೆಕ್ಟರ್‌ ಶ್ರೀನಿವಾಸ ಹಾಂಡ ಅವರು ಆಸೆ-ಆಮಿಷದ ಅಪರಾಧ ಕೃತ್ಯದಡಿ ಜಗದೀಶನನ್ನು ವಾಹನ ಮತ್ತು ಹಣ ಸಮೇತ ಬಂಧಿಸಿ ಪ್ರಕರಣ ದಾಖಲಿಸಿ, ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಮಹೇಶ ಪಾಟೀಲ ಅವರು, ಆರೋಪಿಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ 6 ತಿಂಗಳ ಸಾದಾ ಶಿಕ್ಷೆ ಮತ್ತು 20 ಸಾವಿರ ರೂ.ದಂಡ ವಿಧಿಸಿದ್ದಾರೆ ಹಾಗೂ ಆರೋಪಿಯಿಂದ ಜಪ್ತಿ ಮಾಡಿಕೊಂಡ 4 ಲಕ್ಷ ರೂ.ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next