Advertisement
ನಗರದ ಬೆಳ್ಳಹಳ್ಳಿ ಕ್ವಾರಿಯ ಬಳಿ ನಿತ್ಯ 1.20 ಲಕ್ಷ ಲೀಟರ್ ಹಾಗೂ ದೊಡ್ಡಬಿದರಕಲ್ಲು ತ್ಯಾಜ್ಯ ಸಂಸ್ಕರಣಾ ಘಟಕದ ಬಳಿ 25 ಸಾವಿರ ಲೀಟರ್ ಸಾಮರ್ಥಯದ ಲಿಚೆಟ್ ಶುದ್ಧೀಕರಣ ಘಟಕಗಳನ್ನು ಪಾಲಿಕೆಯಿಂದ ನಿರ್ಮಿಸಲಾಗಿದೆ. ಘಟಕಗಳು ಈಗಾಗಲೇ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಶುದ್ಧೀಕರಿಸಿದ ನೀರನ್ನು ಪಾಲಿಕೆಯ ಉದ್ಯಾನಗಳು, ಕೆರೆ ಹಾಗೂ ರಾಜಕಾಲುವೆಗಳಿಗೆ ಹರಿಸಲಾಗುತ್ತಿದೆ.
Related Articles
Advertisement
ಶುದ್ಧೀಕರಿಸಿದ ನೀರು ಕುಡಿಯಲು ಯೋಗ್ಯ!?: ಲಿಚೆಟ್ ನೀರನ್ನು ಐದು ಹಂತಗಳಲ್ಲಿ ಶುದ್ಧೀಕರಿಸುತ್ತಿದೆ. ಸಾಮಾನ್ಯವಾಗಿ ನೀರಿನ ಶುದ್ಧತೆಯನ್ನು ಟೋಟಲ್ ಡಿಸಾಲ್ಡ್ ಸಾಲಿಡ್ಸ್ (ಟಿಡಿಎಸ್) ಸಾಧನದ ಮೂಲಕ ಅಳೆಯಲಾಗುತ್ತದೆ. ಅದರಂತೆ ಲಿಚೆಟ್‌ನಲ್ಲಿ ಟಿಡಿಎಸ್ 4 ಸಾವಿರದಷ್ಟಿದ್ದರೆ ಸಂಸ್ಕರಣೆ ಬಳಿಕ 100-140ಕ್ಕೆ ಇಳಿಯುತ್ತಿದೆ. ಸಾಮಾನ್ಯವಾಗಿ ಟಿಡಿಎಸ್ ಪ್ರಮಾಣ 80ರಿಂದ 140ರಷ್ಟಿದ್ದರೆ ಆ ನೀರು ಕುಡಿಯಲು ಯೋಗ್ಯ. ಶುದ್ಧೀಕರಿಸಿದ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಉದ್ಯಾನಗಳಿಗೆ ಬಳಕೆ!: ಪಾಲಿಕೆಯ ಲಿಚೆಟ್ ಶುದ್ಧೀಕರಣ ಘಟಕಗಳಲ್ಲಿ ರಿವರ್ಸ್ ಆಸ್ಮೋಸಿಸ್ ಕ್ರಿಯೆ ಮೂಲಕ ತ್ಯಾಜ್ಯ ನೀರನ್ನು ಶುದ್ಧೀಕರಿಸಲಾಗುತ್ತಿದ್ದು, ಲಿಚೆಟ್ ಹಾಗೂ ಶುದ್ಧೀಕರಿಸಿದ ನೀರು ಶೇಖರಣೆಗಾಗಿ ಪ್ರತ್ಯೇಕ ಟ್ಯಾಂಕ್ ನಿರ್ಮಿಸಲಾಗಿದೆ. ಅದರಂತೆ ಶುದ್ಧೀಕರಿಸಿದ ನೀರನ್ನು ಘಟಕದ ಸುತ್ತಮುತ್ತಲಿನ ಪಾಲಿಕೆಯ ಉದ್ಯಾನಗಳಿಗೆ ಪೂರೈಸಿ, ನಂತರ ಸಮೀಪದ ಕೆರೆ ಹಾಗೂ ಮಳೆನೀರು ಕಾಲುವೆಗಳಿಗೆ ಹರಿಸಲಾಗುತ್ತಿದೆ.
ವಿಶ್ವದಲ್ಲೇ ಮೊದಲು: ಬಿಬಿಎಂಪಿ ಹಾಗೂ ಕೆಆರ್‌ಐಡಿಎಲ್ ಸಹಯೋಗದಲ್ಲಿ ನಿರ್ಮಿಸಿರುವ ಬೆಳ್ಳಹಳ್ಳಿ ಹಾಗೂ ದೊಡ್ಡಬಿದರಕಲ್ಲು ಲಿಚೆಟ್ ಶುದ್ಧೀಕರಣ ಘಟಕಗಳು ವಿಶ್ವದ ಮೊದಲ ಲಿಚೆಟ್ ಶುದ್ಧೀಕರಣ ಘಟಕ ಎಂಬ ಕೀರ್ತಿಗೆ ಪಾತ್ರವಾಗಿವೆ. ಈ ಘಟಕಗಳಿಂದ ಲಿಚೆಟ್ ದುರ್ವಾಸನೆ ಹಂತ ಹಂತವಾಗಿ ಕಡಿಮೆಯಾಗಲಿದೆ. ಈ ಲಿಚೆಟ್ ಶುದ್ಧೀಕರಣ ಘಟಕಗಳಿಗೆ ವಿಶ್ವದ ವಿವಿಧ ನಗರಗಳಿಂದ ತಜ್ಞರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ತ್ಯಾಜ್ಯ ಸಂಸ್ಕರಣ ಘಟಕಗಳಲ್ಲಿ ಉತ್ಪತ್ತಿಯಾಗುತ್ತಿರುವ ಲಿಚೆಟ್ ಶುದ್ಧೀಕರಣಕ್ಕೆ ಕಳೆದ ಮೂರು ತಿಂಗ ಳಿಂದ ಬೆಳ್ಳಹಳ್ಳಿ, ದೊಡ್ಡಬಿದರಕಲ್ಲು ಬಳಿಯ ಘಟಕಗಳಲ್ಲಿ ಪ್ರಾಯೋಗಿಕವಾಗಿ ಲಿಚೆಟ್ ಶುದ್ಧೀಕರಿಸಲಾಗಿದೆ. ಘಟಕಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಶುದ್ಧೀಕರಿಸಿದ ನೀರನ್ನು ಸಮೀಪದ ಉದ್ಯಾನ, ಕೆರೆ ಹಾಗೂ ಕಾಲುವೆಗಳಿಗೆ ಹರಿಸಲಾಗುತ್ತಿದೆ.-ಸಫ್ರಾಜ್ ಖಾನ್, ಜಂಟಿ ಆಯುಕ್ತ, ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗ * ವೆಂ.ಸುನೀಲ್ ಕುಮಾರ್