Advertisement

ವ್ಯಾಪಾರಿಗಳಿಗೆ ಪರವಾನಗಿ ಕಡ್ಡಾಯ

09:16 PM Feb 29, 2020 | Team Udayavani |

ಕೊಳ್ಳೇಗಾಲ: ಮಾರ್ಚ್‌ 10ರೊಳಗೆ ಬೀದಿಬದಿ ಹೋಟೆಲ್‌ ವ್ಯಾಪಾರಿಗಳು ಮತ್ತು ಇನ್ನಿತರ ವ್ಯಾಪಾರಿಗಳು ನಗರಸಭೆಯಿಂದ ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಸಂಪೂರ್ಣ ತೆರವು ಮಾಡಲಾಗುವುದು ಎಂದು ನಗರಸಭೆ ಪೌರಯುಕ್ತ ನಾಗಶೆಟ್ಟಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ಫೆ.25ರಂದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದ ರಸ್ತೆ ಬದಿ ತಿಂಡಿತಿನಿಸು ಎಷ್ಟು ಸುರಕ್ಷಿತ? ವರದಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸ್ಪಂದಿಸಿ, ಕೂಡಲೇ ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ಅರಿವು ಮೂಡಿಸಲು ಪೌರಾಯುಕ್ತರಿಗೆ ಸೂಚನೆ ನೀಡಿದ್ದರು.

ಹೀಗಾಗಿ ನಗರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಬೀದಿಬದಿ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿ, ರಸ್ತೆ ಬದಿ ತಿಂಡಿ ತಿನಿಸುಗಳ ಮಾರಾಟ ಮಾಡುವ ವ್ಯಾಪಾರಿಗಳು ಮತ್ತು ರಾತ್ರಿ ವೇಳೆ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವವರು ನಗರಸಭೆಗೆ ಸೇರಿದ ಸ್ಥಳಗಳಲ್ಲಿ ಮಾರಾಟ ಮಾಡುವುದರಿಂದ ಕಡ್ಡಾಯವಾಗಿ ನಗರಸಭೆಯಿಂದ ಪರವಾನಗಿ ಪಡೆಯಬೇಕು ಎಂದು ಸೂಚನೆ ನೀಡಿದರು.

ಆಹಾರ ಪದಾರ್ಥ ಸುರಕ್ಷಿತವಾಗಿರಲಿ: ತಿಂಡಿ ತಿನಿಸು, ಆಹಾರ ಪದಾರ್ಥಗಳನ್ನು ತೆರೆದ ತಟ್ಟೆಯಲ್ಲಿ ಇಟ್ಟು ಮಾರಾಟ ಮಾಡುವುದರಿಂದ ಅದರ ಮೇಲೆ ಧೂಳು, ನೋಣ, ಸೊಳ್ಳೆ ಕೂರುತ್ತದೆ. ಇದರಿಂದ ಕ್ರಿಮಿಕೀಟಗಳು ಹೆಚ್ಚಾಗಿ ಆಹಾರ ಪದಾರ್ಥಗಳನ್ನು ತಿಂದ ಸಾರ್ವಜನಿಕರು, ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇದರಿಂದ ಕೂಡಲೇ ಗ್ಲಾಸ್ಟ್‌ ಪೆಟ್ಟಿಗೆಗಳನ್ನು ನಿರ್ಮಾಣ ಮಾಡಿ, ಅದರೊಳಗೆ ಸುರಕ್ಷಿತವಾಗಿ ಇಟ್ಟು ಮಾರಾಟ ಮಾಡಬೇಕು ಎಂದು ಸಲಹೆ ನೀಡಿದರು.

ಸ್ವಚ್ಛತೆ ಕಾಪಾಡಿ: ತಿಂಡಿ ತಿನಿಸುಗಳನ್ನು ಮಾರಾಟ ಮಾಡುವ ಬೀದಿಬದಿ ವ್ಯಾಪಾರಿಗಳು ಅಂಗಡಿಗಳಲ್ಲಿ ಸಾರ್ವಜನಿಕರು ಆಹಾರ ಪದಾರ್ಥಗಳನ್ನು ಸೇವನೆ ಮಾಡಿದ ಎಲೆ ಅಥವಾ ಇನ್ನಿತರ ಪೇಪರ್‌ ತಟ್ಟೆಗಳನ್ನು ಸುರಕ್ಷಿತವಾದ ಪೆಟ್ಟಿಗೆಗಳಲ್ಲಿ ಶೇಖರಣೆ ಮಾಡಬೇಕು. ಅದೇ ರೀತಿ ಒಣ ಕಸವನ್ನು ಮತ್ತೂಂದು ಬದಿಯಲ್ಲಿ ಶೇಖರಣೆ ಮಾಡಬೇಕು. ನಗರಸಭೆಯ ಕಸ ಶೇಖರಣೆಯ ವಾಹನ ಬಂದಾಗ ಕಡ್ಡಾಯವಾಗಿ ಕಸ ನೀಡಬೇಕು ಎಂದರು.

Advertisement

ಮಾರಾಟಕ್ಕೆ ಅವಕಾಶ‌: ಈಗಾಗಲೇ ನಾಲೆ ಕಾಮಗಾರಿ ಬರದಿಂದ ಸಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ನಗರಸಭೆಯು ಈ ಹಿಂದೆ ಕೈಗೊಂಡಿರುವ ನಿರ್ಣಯದಂತೆ ಎಲ್ಲಾ ಬೀದಿಬದಿ ವ್ಯಾಪಾರಿಗಳನ್ನು ಮತ್ತು ರಸ್ತೆ ಬದಿ ಹೋಟೆಲ್‌ ಮಾಲೀಕರನ್ನು ನಾಲೆಯ ರಸ್ತೆ ಮೇಲೆ ಮಾರಾಟ ಮಾಡಲು ಅವಕಾಶ‌ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.

ನಿಯಮ ಪಾಲಿಸಿ: ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ನೀಡಿರುವ ಆದೇಶವನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲವಾದಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಪರಿಸರ ಎಂಜಿನಿಯರ್‌ ಧನಂಜಯ್ಯ, ಆರೋಗ್ಯ ನಿರೀಕ್ಷಕಿ ಭೂಮಿಕ, ರಸ್ತೆ ಬದಿ ವ್ಯಾಪಾರಿಗಳು, ನಗರಸಭೆಯ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next