ಬಂಗಾರಪೇಟೆ: ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಆಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ, ಗ್ರಾಪಂನಿಂದ ವಾಸದ ಮನೆ ಎಂದು ಲೈಸೆನ್ಸ್ ಪಡೆದು ಐದು ಅಂತಸ್ತಿನ ವಾಣಿಜ್ಯ (ಲಾಡ್ಜ್) ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗುತ್ತಿದೆ. ಆದರೂ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ತಾಲೂಕಿನ ಪ್ರಸಿದ್ಧ ಕೋಟಿಲಿಂಗ ದೇಗುಲವಿರುವ ಕಮ್ಮಸಂದ್ರ ಗ್ರಾಪಂ ಕಚೇರಿಯಿಂದ 300 ಮೀಟರ್ ದೂರದಲ್ಲಿ ಈ ಕಟ್ಟಡವನ್ನು ಸಿ.ಮಂಜುನಾಥ್ ಹಾಗೂ ದಾಮೋದರರೆಡ್ಡಿ ಜಂಟಿ ಖಾತೆ ಇರುವ ಜಾಗದಲ್ಲಿ ನಿರ್ಮಿಸಲಾಗುತ್ತಿದೆ.
ಕಮ್ಮಸಂದ್ರ ಗ್ರಾಪಂಗೆ ಸೇರಿದ ಈ ಕಟ್ಟಡವನ್ನು 1972 ಮೇ 13 ರಂದು ಡಿಪಿಸಿ 15/1972-73ರಂತೆ ಭೂ ಪರಿವರ್ತನೆಯಾಗಿರುವ ಬಗ್ಗೆ ಇ-ಸ್ವತ್ತು ಖಾತೆ ಮಾಡುವ ಸಂದರ್ಭದಲ್ಲಿ ನಮೂದಿಸಲಾಗಿದೆ. ಈ ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಬಂಗಾರಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ದಾಖಲೆಗಳು ಇಲ್ಲ. ಭೂ ಪರಿವರ್ತನೆಯ ದಾಖಲೆ ನಕಲಿ ಎಂಬುದು ಮೆಲ್ನೋಟಕ್ಕೆ ಗೊತ್ತಾಗಿದೆ.
ವಾಣಿಜ್ಯ ಉದ್ದೇಶ: ಕಮ್ಮಸಂದ್ರ ಗ್ರಾಪಂ ಖಾತೆ ಸಂಖ್ಯೆ 166/162/1 ರಂತೆ 12.19 ಮೀಟರ್‌ಗೆ 21.33 ಮೀಟರ್ ನಿವೇಶನದಲ್ಲಿ ವಾಸದ ಮನೆ ನಿರ್ಮಾಣ ಮಾಡಲು ಫೆ. 22, 2018ರಂದು ಗ್ರಾಪಂ ನಿರ್ಣಯ ಸಂಖ್ಯೆ 5/2017-18ರಂತೆ ನಿವೇಶನದ ಮಾಲಿಕರಾದ ಸಿ.ಮಂಜುನಾಥ್ ಹಾಗೂ ದಾಮೋದರರೆಡ್ಡಿ ವಾಸದ ಮನೆಗಾಗಿ ಲೈಸನ್ಸ್ ಪಡೆದಿದ್ದು, ಈಗ ಐದು ಅಂತಸ್ತಿನ ಕಟ್ಟಡ ವಾಣಿಜ್ಯ ಉದ್ದೇಶಕ್ಕೆ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ.
ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಬರುವ ಸ್ಥಳಗಳಲ್ಲಿ ಮನೆ ಹಾಗೂ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿಕೊಳ್ಳಬೇಕಾದರೆ ಕಡ್ಡಾಯವಾಗಿ ಕೆಯುಡಿಎ ಅಧಿಕಾರಿಗಳಿಂದ ಲೈಸನ್ಸ್ ಪಡೆಯಬೇಕು. ಕಟ್ಟಡ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಪಡೆಯಬೇಕಾದರೆ ಕೆಯುಡಿಎ ಲೈಸನ್ಸ್ ಅಗತ್ಯ. ಇಲ್ಲೂ ವಾಸದ ಮನೆ ಎಂದು ಲೈಸನ್ಸ್ ಪಡೆಯಲಾಗಿದೆ.
ಕೆಯುಡಿಎ ಪ್ರಾಧಿಕಾರದ ಆಯುಕ್ತ ಮುನಿಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿರುವ ಬಗ್ಗೆ ಹಾಗೂ ಭೂ ಪರಿವರ್ತನೆ ದಾಖಲೆ ನಕಲಿಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೂಲ ದಾಖಲೆಗಳನ್ನು ಪರಿಶೀಲನೆಗೆ ತರುವಂತೆ
ಸಂಬಂಧಪಟ್ಟ ಮಾಲಿಕರಿಗೆ ಹೇಳಿದ್ದರು. ಆದರೆ, ಈಗ ಆಯುಕ್ತರು ಈ ವಿಚಾರದ ಬಗ್ಗೆ ಗೊತ್ತಿಲ್ಲ ಎಂಬಂತೆ ಮಾತನಾಡುತ್ತಿದ್ದು, ಮಾಹಿತಿ ನೀಡುವಂತೆ ಮನವಿ ಮಾಡಿದರೂ ನೀಡುತ್ತಿಲ್ಲ.
ಕ್ರಮಕೈಗೊಂಡಿಲ್ಲ: ರಾಜ್ಯ ಸರ್ಕಾರ ನಗರಾಭಿವೃದ್ಧಿ ಇಲಾಖೆಯ ಅದೇಶದಂತೆ ಕೋಲಾರ ಜಿಲ್ಲೆಯಲ್ಲಿ ನೆಲಂತಸ್ತು ಸೇರಿ ಮೂರು ಅಂತಸ್ತು ಕಟ್ಟಡ ನಿರ್ಮಾಣ ಮಾಡಲು ಸಂಬಂಧಪಟ್ಟ ನಗರಾಭಿವೃದ್ಧಿ ಇಲಾಖೆ ಹಾಗೂ ಕೆಯುಡಿಎ ಅನುಮತಿ ಪಡೆದು ನಿರ್ಮಾಣ ಮಾಡಬೇಕಾಗಿದೆ. ಆದರೆ, ಯಾವುದನ್ನೂ ಲೆಕ್ಕಿಸದೇ ಐದು ಅಂತಸ್ತು ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ಕಟ್ಟಡ ಪಕ್ಕದಲ್ಲಿಯೇ ಇರುವ ಗ್ರಾಪಂ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ.
ಮರು ನಮೂದು: ಕಟ್ಟಡ ಮಾಲಿಕರು ವಾಸದ ಮನೆ ಲೈಸನ್ಸ್ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದ ನಂತರ ಮತ್ತೆ ಇ ಖಾತೆಯನ್ನು ವಾಣಿಜ್ಯ ಕಟ್ಟಡ ಎಂದು ತಿದ್ದುಪಡಿ ಮಾಡಲಾಗಿದೆ. ಆದರೆ, ತಿದ್ದುಪಡಿ ಮಾಡಲು ಈ ಹಿಂದೆ ಗ್ರಾಪಂ ನಡವಳಿಕೆ ದಿನಾಂಕವನ್ನೇ ಮರು ನಮೂದು ಮಾಡಿರುವುದು ಅಕ್ರಮವಾಗಿದೆ.
ಈ ಅಕ್ರಮ ಕಟ್ಟಡದಲ್ಲಿ ಪ್ರಸ್ತುತ ಕಾಮಗಾರಿ ನಡೆಯುತ್ತಿದ್ದು, ಸಂಬಂಧಪಟ್ಟ ಗ್ರಾಪಂ ಪಿಡಿಒ ಶ್ರೀನಿವಾಸರೆಡ್ಡಿ ಈ ಅಕ್ರಮ ಕಟ್ಟಡಕ್ಕೆ ಸಂಬಂಧಪಟ್ಟಂತೆ ದಾಖಲೆ ನೀಡಲು ಹಿಂಜರಿಯುತ್ತಿದ್ದಾರೆ. ಕಟ್ಟಡ ಮಾಲಿಕರು ಪ್ರಭಾವಿಗಳಾಗಿರುವುದರಿಂದ ಗ್ರಾಪಂನಲ್ಲಿ ರಾತ್ರೋರಾತ್ರಿ ಅಕ್ರಮ ದಾಖಲೆಗಳು ಸೃಷ್ಟಿ ಮಾಡುತ್ತಿದ್ದಾರೆ. ಹಾಲಿ ಕಟ್ಟಡ ನಿವೇಶನವು ಕಮ್ಮಸಂದ್ರ ಗ್ರಾಮಕ್ಕೆ ಸೇರಿದ್ದು, ಅದಕ್ಕೆ ಯಾವುದೇ ಮೂಲ ದಾಖಲೆಗಳಿಲ್ಲ. ಮೂಲತಃ ಗೋಮಾಳವಾಗಿದ್ದು, 1992 ನ.16ರ ಪೂರ್ವದಲ್ಲಿ ಪಂಚಾಯ್ತಿಯಿಂದ ಬಡಾವಣೆ ಎಂದು ಅನುಮೋದನೆಯಾಗಿರುವ ಆಸ್ತಿ ಎಂದು ದಾಖಲೆಗಳನ್ನು ಗ್ರಾಪಂ ಅಧಿಕಾರಿಗಳು ಸೃಷ್ಟಿಸಿಕೊಂಡಿರುವುದರಿಂದ ಇಂತಹ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರ ಒತ್ತಾಯಿಸುತ್ತಿದ್ದಾರೆ.
●ಎಂ.ಸಿ.ಮಂಜುನಾಥ್