Advertisement

ಪದವಿ ಇಲ್ಲದವರಿಗೆ ಡ್ರೈವಿಂಗ್‌ ಲೈಸನ್ಸ್‌ ರದ್ದು ಕುವೈತ್‌ ಸರ್ಕಾರದ ನಿರ್ಧಾರ

07:43 PM Apr 02, 2023 | Team Udayavani |

ಕುವೈತ್‌: 600 ದಿನಾರ್‌ಗಳಿಂದ ಕಡಿಮೆ ಸಂಬಳ ಇರುವ ಹಾಗೂ ಮಾನ್ಯತೆ ಪಡೆದ ವಿವಿಯಿಂದ ಪದವಿ ಅಥವಾ ಡಿಪ್ಲೊಮಾ ಹೊಂದಿಲ್ಲದೇ ಇರುವ ವಿದೇಶಿ ಚಾಲಕರ ಚಾಲನಾ ಪರವಾನಗಿಯನ್ನು ಹಿಂಪಡೆಯಲು ಕುವೈತ್‌ ಸರ್ಕಾರ ನಿರ್ಧರಿಸಿದೆ. ಈ ನಿಯಮ ಜಾರಿಗೆ ಬಂದರೆ ಭಾರತೀಯರು ಸೇರಿ 3 ಲಕ್ಷ ಚಾಲಕರಿಗೆ ಸಂಕಷ್ಟ ಎದುರಾಗಲಿದೆ.

Advertisement

ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕುವೈತ್‌ ಗೃಹ ಸಚಿವಾಲಯ ತಿಳಿಸಿದೆ. ಸರ್ಕಾರದ ಈ ನಿರ್ಧಾರವು ಅಲ್ಲಿ ವಾಸಿಸುತ್ತಿರುವ ವಿದೇಶಿ ಚಾಲಕರಿಗೆ ಆಶ್ಚರ್ಯ ಮತ್ತು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಇದರಿಂದ ಇವರಿಗೆ ಸಂಬಳ ಕೊಟ್ಟು ಸಲಹುತ್ತಿರುವ ಟ್ಯಾಕ್ಸಿ ಕಂಪನಿಗಳು ಹಾಗೂ ಮಾಲೀಕರಿಗೂ ತೊಂದರೆಯಾಗಲಿದೆ.

ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕುವೈತ್‌ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ಸಂಬಳ ಮತ್ತು ಪದವಿ ಆಧಾರದಲ್ಲಿ ಅರ್ಹತೆ ಪೂರೈಸದವರ ಚಾಲನಾ ಪರವಾನಗಿ ರದ್ದುಪಡಿಸಲು ಶಿಫಾರಸು ಮಾಡಿದೆ. ಇದಕ್ಕೆ ನಾನಾ ವಲಯಗಳಿಂದ ವಿರೋಧ ವ್ಯಕ್ತವಾಗಿದೆ.

ಸಂಚಾರ ದಟ್ಟಣೆ ತಗ್ಗಿಸಲು ಅನೇಕ ಪರ್ಯಾಯ ಮಾರ್ಗಗಳಿವೆ. ರಸ್ತೆಗಳ ಸುಧಾರಣೆ, ಸೇತುವೆಗಳು ಹಾಗೂ ಸುರಂಗಗಳ ನಿರ್ಮಾಣ, ಸಾರ್ವಜನಿಕ ಸಾರಿಗೆ ಸುಧಾರಣೆ ಸೇರಿದಂತೆ ನಾನಾ ಕ್ರಮಗಳನ್ನು ಕೈಗೊಳ್ಳಬಹುದು ಎಂದು ನಾಗರಿಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next