Advertisement

ಪರವಾನಗಿ ಮುಗಿದ್ರೂ ಓಲಾ, ಉಬರ್‌ ಓಡಾಟ

12:27 PM Feb 01, 2022 | Team Udayavani |

ಬೆಂಗಳೂರು: ಆ್ಯಪ್‌ ಆಧಾರಿತ ಸಾರಿಗೆ ಸೇವೆಗಳನ್ನು ಕಲ್ಪಿಸುತ್ತಿರುವ ಅಗ್ರಿಗೇಟರ್‌ ಕಂಪನಿಗಳಾದ ಓಲಾ ಮತ್ತು ಉಬರ್‌ ಪರವಾನಗಿ ಅವಧಿ ತಿಂಗಳುಗಳ ಹಿಂದೆಯೇ ಮುಗಿದಿದೆ. ಆದರೆ, ನವೀಕರಣಗೊಳಿಸಿಕೊಳ್ಳದೆ ಎಂದಿನಂತೆ ರಾಜಾರೋಷವಾಗಿ ಕಾರ್ಯಾಚರಣೆ ಮಾಡುತ್ತಿವೆ.

Advertisement

ಅಷ್ಟೇ ಅಲ್ಲದೆ, ಲೈಸೆನ್ಸ್‌ ಪಡೆಯುವಾಗ ನೀಡಿದ ವಿಳಾಸದಲ್ಲಿ ಈಗ ಆ ಕಂಪನಿಗಳೇ ಇಲ್ಲ. ಅಸಹಾಯಕವಾದ ಸಾರಿಗೆ ಇಲಾಖೆ ಅಧಿಕಾರಿಗಳು, ಅದರಲ್ಲಿ ನೋಂದಣಿ ಮಾಡಿಕೊಂಡ ಚಾಲಕರ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

2017ರಲ್ಲಿ ಕಾರ್ಯಾಚರಣೆಗಾಗಿ ಅಗ್ರಿಗೇಟರ್‌ ಲೈಸೆನ್ಸ್‌ ಪಡೆದಿದ್ದ ಓಲಾ ಕಂಪನಿಯದ್ದು 2021ರ ಜೂನ್‌ ನಲ್ಲೇ ಅವಧಿ ಮುಗಿದಿದೆ. ಇದು ಮುರುಗೇಶಪಾಳ್ಯದ ವಿಳಾಸ ನೀಡಿತ್ತು. ಅದೇ ವರ್ಷ ಪರವಾನಗಿ ಪಡೆದಿದ್ದ ಉಬರ್‌ ಕಂಪನಿಯ ಅವಧಿ 2021ರ ಡಿಸೆಂಬರ್‌ನಲ್ಲಿ ಮುಗಿದಿದೆ. ಈ ಕಂಪನಿ ಕೂಡ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿನ ವಿಳಾಸ ನೀಡಿತ್ತು. ಸಾಮಾನ್ಯವಾಗಿ ಅವಧಿ ಮುಗಿದ 30ರಿಂದ 60 ದಿನಗಳಲ್ಲಿ ಲೈಸೆನ್ಸ್‌ ನವೀಕರಿಸಿ ಕೊಳ್ಳಬೇಕು. ಇದಕ್ಕೆ ಹತ್ತಾರು ಷರತ್ತುಗಳಿರುತ್ತವೆ. ಅವುಗಳನ್ನು ಪೂರೈಸುವುದು ಕಂಪನಿಗಳ ಹೊಣೆಯಾಗಿರುತ್ತದೆ.

ಕಂಪನಿಗಳು ನೀಡಿದ ವಿಳಾಸಕ್ಕೆ ಸಾರಿಗೆ ಅಧಿಕಾರಿಗಳು ಭೇಟಿ ನೀಡಿದಾಗ, ಅಂತಹ ಯಾವುದೇ ಅಗ್ರಿಗೇಟರ್‌ ಕಂಪನಿಗಳು ಸ್ಥಳದಲ್ಲಿ ಇರಲಿಲ್ಲ. ಜತೆಗೆ ಸಂಬಂಧಪಟ್ಟ ಕಂಪನಿ ಅಧಿಕಾರಿಗಳು, ಉದ್ಯೋಗಿಗಳಾರೂ ಪತ್ತೆ ಇಲ್ಲ. ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಇದು ಅಧಿಕಾರಿಗಳ ನಿದ್ದೆಗೆಡಿಸಿದ್ದು, ಈಗ ಈ ಅಗ್ರಿಗೇಟರ್‌ಗಳಲ್ಲಿ ನೋಂದಣಿ ಮಾಡಿಸಿಕೊಂಡ ಕಾರು, ಆಟೋ ಚಾಲಕರ ವಿರುದ್ಧ ಕಾರ್ಯಾಚರಣೆಗಿಳಿದಿದ್ದಾರೆ. ಈಗಾಗಲೇ ಜ. 29ರಂದು ಸುಮಾರು 80 ಓಲಾ-ಉಬರ್‌ ಟ್ಯಾಕ್ಸಿಗಳನ್ನು ಜಪ್ತಿ ಮಾಡಲಾಗಿದೆ.

ಕಾರಣಾಂತರಗಳಿಂದ ಕ್ರಮ ಕೈಗೊಂಡಿಲ್ಲ; ಅಧಿಕಾರಿ: ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಆಯುಕ್ತ (ಕಾರ್ಯಾಚರಣೆ) ನರೇಂದ್ರ ಹೋಳ್ಕರ್‌, “ಓಲಾ-ಉಬರ್‌ ಎರಡೂ ಕಂಪನಿಗಳ ಅಗ್ರಿಗೇಟರ್‌ ಲೈಸೆನ್ಸ್‌ ಅವಧಿ ಮುಗಿದಿದೆ. ನವೀಕರಣ ಮಾಡಿಕೊಂಡಿಲ್ಲ. ಆದರೂ, ಅವುಗಳೊಂದಿಗೆ ಲಿಂಕ್‌ ಮಾಡಿಕೊಂಡ ವಾಹನಗಳು ಕಾರ್ಯಾಚರಣೆ ನಡೆಸುತ್ತಿವೆ.ನಿಯಮ ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿರುವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಕಂಪನಿಗಳ ವಿರುದ್ಧ ತಾಂತ್ರಿಕ ಕಾರಣಗಳಿಂದಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

Advertisement

ಪ್ರತಿಭಟನೆ ಎಚ್ಚರಿಕೆ : “ಕಂಪನಿಗಳ ಅಧಿಕಾರಿಗಳು ಸಿಗಲಿಲ್ಲವೆಂದಾದರೆ,ಆಫೀಸ್‌ ಜಪ್ತಿ ಮಾಡಲಿ. ಮಾಧ್ಯಮಗಳ ಮೂಲಕ ಆಕಂಪನಿಗಳ ಇಮೇಜ್‌ ಏನಿದೆ ಎಂಬುದನ್ನು ಪ್ರದರ್ಶಿಸಿದರೆ, ಸಂಬಂಧಪಟ್ಟವರು ತಾವಾಗಿಯೇ ಮುಂದೆಬರುತ್ತಾರೆ. ಅದುಬಿಟ್ಟು, ಸಾಲ ಮಾಡಿ ಟ್ಯಾಕ್ಸಿ ತೆಗೆದುಕೊಂಡು, ಬಾಡಿಗೆ ಓಡಿಸುವ ಚಾಲಕರ ಮೇಲೆಗದಾಪ್ರಹಾರ ಮಾಡುತ್ತಿರುವುದು ಎಷ್ಟು ಸರಿ? ಈ ಕುರಿತು ಶೀಘ್ರ ಸಾರಿಗೆ ಆಯುಕ್ತರನ್ನು ಭೇಟಿ ಮಾಡಿಗಮನಸೆಳೆಯಲಾಗುವುದು. ಒಂದು ವೇಳೆ ಸಮಸ್ಯೆಮುಂದುವರಿದರೆ, ಪ್ರತಿಭಟನೆ ಅನಿವಾರ್ಯ’ ಎಂದು ಓಲಾ-ಉಬರ್‌ ಟ್ಯಾಕ್ಸಿ ಮಾಲಿಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next