Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 10 ತಿಂಗಳ ಅವಧಿಯಲ್ಲಿ 32 ಕಡೆಗಳಲ್ಲಿ ದಾಳಿ ನಡೆಸಿರುವ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿಗಳು, 262 ಪ್ರಕರಣ ದಾಖಲಿಸಿ 52 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ. ಆದರೂ, ವಾಣಿಜ್ಯ ಮಳಿಗೆಗಳಲ್ಲಿ ಅಕ್ರಮವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ದಾವಣಗೆರೆ ಮಾದರಿ ಕಡ್ಡಾಯ ಪರವಾನಗಿ ಮಾದರಿ ಜಾರಿ ಆದರೆ, ಮಾರಾಟಕ್ಕೆ ಮತ್ತಷ್ಟು ಕಡಿವಾಣ ಬೀಳಲಿದೆ ಎಂಬುದು ಅಧಿಕಾರಿಗಳು ಹೇಳಿಕೆಯಾಗಿದೆ.
Related Articles
Advertisement
ತಂಬಾಕು ಉತ್ಪನ್ನ ಮಾರಾಟಕ್ಕೆ ಲೈಸೆನ್ಸ್ ಪಡೆಯುವ ಸಂಬಂಧ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಹಾಗೆಯೇ, ಕೇಳಿದ ಅಗತ್ಯ ದಾಖಲೆಗಳನ್ನು ವಾಣಿಜ್ಯ ಮಳಿಗೆ ಮಾಲಿಕರು ನೀಡಬೇಕು. ಅವರಿಂದ ಒಪ್ಪಿಗೆ ಪಡೆದ ಬಳಿಕ ಜಿಲ್ಲಾ ತಂಬಾಕು ನಿಯಂತ್ರಣದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಗ್ರೀನ್ ಸಿಗ್ನಲ್ ನೀಡಿದರಷ್ಟೇ ಪರವಾನಗಿ ಅಧಿಕೃತವಾಗಲಿದೆ.
ವಾಣಿಜ್ಯ ಮಳಿಗೆಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸೆನ್ಸ್ ಪಡೆಯಲು ಕೆಲವೊಂದು ಕಠಿಣ ನಿಯಮಗಳನ್ನು ಅಳವಡಿಸಿರುವುದರಿಂದ ಹೆಚ್ಚಿನ ಮಂದಿ ಲೈಸೆನ್ಸ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ದೇವಸ್ಥಾನ, ಶಾಲೆ, ಕೋರ್ಟ್ ಆವರಣ, ಸರ್ಕಾರಿ ಕಚೇರಿಗಳ ಆವರಣ ಸೇರಿ ಹಲವು ಕಡೆಗಳಲ್ಲಿ ಅಂಗಡಿಯವರು ಲೈಸೆನ್ಸ್ ಡೆಯುವುದು ಕಷ್ಟ. ಆದ್ದರಿಂದ ತಂಬಾಕು ಉತ್ಪನ್ನ ಮಾರಾಟ ತಡೆಗೆ ಈ ನೀತಿ ಸಹಕಾರಿಯಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಮುಖ್ಯವಾಗಿ ಶಾಲೆಗಳ 100 ಗಜದ ಅಂತರದಲ್ಲಿನ ಯಾವುದೇ ಮಳಿಗೆಗಳಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶವಿಲ್ಲದಿರುವುದು ಇಂಥವರಿಗೆ ಲೈಸೆನ್ಸ್ ಸಿಗುವುದಿಲ್ಲ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳು ಸುಲಭವಾಗಿ ಸಿಗಬಾರದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ತಂಬಾಕು ಉತ್ಪನ್ನ ಮಾರುವ ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ನಡೆಸಿ ಕೇಸು ದಾಖಲಿಸಲಾಗುತ್ತಿದೆ. ದಾವಣಗೆರೆಯಲ್ಲಿ ಈ ನಿಯಮ ಯಶಸ್ವಿಯಾಗಿದೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲೂ ಶೀಘ್ರ ಅನುಷ್ಠಾನಗೊಳಿಸುತ್ತೇವೆ. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ನೀಡುವುದರಿಂದ ಸ್ಥಳೀಯ ಆಡಳಿತಕ್ಕೆ ಆದಾಯ ಬರುವುದಕ್ಕೆ ಸಹಕಾರಿಯಾಗುತ್ತದೆ.-ಡಾ.ವಿದ್ಯಾರಾಣಿ, ಜಿಲ್ಲಾ ಸಲಹಗಾರ್ತಿ, ತಂಬಾಕು ನಿಯಂತ್ರಣ ಘಟಕ.
– ಎಸ್.ಮಹೇಶ್