ಧಾರವಾಡ: ಭಾರತೀಯ ಜೀವ ವಿಮಾ ನಿಗಮವು ವಿಮಾ ಕ್ಷೇತ್ರದಲ್ಲಿ ಶೇ.76.09 ರಷ್ಟು ಮತ್ತು ಪ್ರೀಮಿಯಂ ವಿಭಾಗದಲ್ಲಿ ಶೇ.71.07ರಷ್ಟು ಮಾರುಕಟ್ಟೆ ಪಾಲುಗಾರಿಕೆ ಹೊಂದುವುದರ ಮೂಲಕ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ಎಲ್‌ಐಸಿ ಧಾರವಾಡ ವಿಭಾಗದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಎಚ್.ಕೆ. ರವಿಕಿರಣ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಧಾರವಾಡ ವಿಭಾಗದಿಂದ 2016-17ನೇ ಸಾಲಿನಲ್ಲಿ ಒಟ್ಟು 1,70,000 ಪಾಲಿಸಿ ಮಾರಾಟವಾಗಿ 260.97 ಕೋಟಿಯಷ್ಟು ಮೊದಲ ಪ್ರೀಮಿಯಂ ಸಂಗ್ರಹಣೆ ಆಗಿದೆ. 2017-18 ರಲ್ಲಿ ಒಟ್ಟು 261 ಕೋಟಿ ಪ್ರೀಮಿಯಂ ಹೊಂದಲು ಗುರಿ ಇರಿಸಿಕೊಳ್ಳಲಾಗಿದೆ. ಸಂಗ್ರಹಣೆಯಾದ ಒಟ್ಟು ಪ್ರೀಮಿಯಂ ಆದಾಯ 1422.21 ಕೋಟಿ ಹಾಗೂ ಸಂಗ್ರಹಣೆಯಾದ ಒಟ್ಟು ಆದಾಯ 1516.76 ಕೋಟಿಯಷ್ಟಾಗಿದೆ. ಡೆತ್ ಕ್ಲೇಮ್ ಪಾಲಿಸಿಗಳ ಸಂಖ್ಯೆ ಒಟ್ಟು 8228 ಆಗಿದ್ದು, 70.17 ಕೋಟಿ ಹಣ ಸಂದಾಯ ಮಾಡಲಾಗಿದೆ ಎಂದರು.
ಹುಬ್ಬಳ್ಳಿಯಲ್ಲಿ ವಲಯ ಕಚೇರಿ: ಧಾರವಾಡ ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದಿಂದ ಕಳೆದ ವರ್ಷದ ಆರ್ಥಿಕ ಲೆಕ್ಕ ಪತ್ರಗಳನ್ನು ಮೇಲಧಿಕಾರಿಗಳಿಗೆ ಸಮರ್ಪಿಸುವಲ್ಲಿ ಅಖೀಲ ಭಾರತ ಮಟ್ಟದಲ್ಲಿ ಮತ್ತು ವಲಯ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದೆ. ಧಾರವಾಡ ವಿಭಾಗದ ವ್ಯಾಪ್ತಿಯಲ್ಲಿ ಧಾರವಾಡ ಜಿಲ್ಲೆ, ಗದಗ, ಹಾವೇರಿ ಮತ್ತು ಕಾರವಾರ ಜಿಲ್ಲೆ ಒಳಗೊಂಡಿದ್ದು, 15 ಶಾಖಾ ಕಚೇರಿಗಳು ಮತ್ತು 16 ಉಪಗೃಹ ಸಂಪರ್ಕ ಶಾಖೆಗಳಿವೆ.
12 ಮಿನಿ ಆಫೀಸ್, 1 ಪಿಂಚಣಿ ಮತ್ತು ಸಮೂಹ ವಿಮಾ ಶಾಖೆ ಕಾರ್ಯ ನಿರ್ವಹಿಸುತ್ತಿವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಂದು ಪ್ರತ್ಯಕ್ಷ ಮಾರುಕಟ್ಟೆ ವಿಭಾಗವನ್ನು ಹಾಗೂ ಪ್ರತಿಷ್ಠಿತ ಗ್ರಾಹಕರ ಬೇಡಿಕೆ ಈಡೇರಿಸಲು ಗ್ರಾಹಕರ ವಲಯ ಕಚೇರಿಯನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭ ಮಾಡಲಾಗಿದೆ ಎಂದರು.
ಧಾರವಾಡ ವಿಭಾಗದಲ್ಲಿ 9168 ಎಲ್‌ಐಸಿ ಪ್ರತಿನಿಧಿಗಳು, 150 ಅಭಿವೃದ್ಧಿ ಅಧಿಕಾರಿಗಳು ಮತ್ತು 904 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಧಾರ ಕಾರ್ಡ್ ವಿವರಗಳನ್ನು ಪಾಲಿಸಿಗಳಲ್ಲಿ ದಾಖಲಿಸಲಾಗುತ್ತಿದೆ. ನಾಗರಿಕರಿಗೆ ಟರ್ಮ್ ಇನ್ಸುರೆನ್ಸ್ ಹಾಗೂ ಪೆನ್ಶನ್ ಪಾಲಿಸಿಗಳ ಮಾರಾಟದ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸೆ.1 ರಿಂದ ವಿಮಾ ಸಪ್ತಾಹ: ಭಾರತೀಯ ಜೀವ ವಿಮಾ ನಿಗಮವು 61ನೇ ವರ್ಷಕ್ಕೆ ಕಾಲಿಟ್ಟಿದ್ದು, ಸೆ.1 ರಿಂದ 7ರ ವರೆಗೆ ದೇಶದ ಎಲ್ಲ ಶಾಖೆಗಳಲ್ಲಿ ವಿಮಾ ಸಪ್ತಾಹ ಆಚರಿಸಲಾಗುತ್ತಿದೆ. ಸಪ್ತಾಹದ ಅಂಗವಾಗಿ ಪರಿಸರ ಸಂರಕ್ಷಣೆ ಹಾಗೂ ಜಾಗೃತಿ ಕಾರ್ಯಕ್ರಮ ಸೇರಿದಂತೆ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದರು. ಎಲ್ ಐಸಿ ಸಿಆರ್‌ಎಂ. ವಿಭಾಗದ ಪ್ರಬಂಧಕ ಎನ್. ನಾಗರಾಜ, ಮಾರುಕಟ್ಟೆ ಪ್ರಬಂಧಕ ಪ್ರಕಾಶ ಕೆ. ಬಂಟ, ಎಸ್.ಎಂ. ಮಮದಾಪುರ, ಸಂತೋಷ ಬಂಟ ಇತರರಿದ್ದರು.