ನವದೆಹಲಿ: ಹೂಡಿಕೆದಾರರು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಎಲ್‌ಐಸಿ ಐಪಿಒ ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಅಧಿಕವಾಗಿದೆ.
ಮೇ ಆರಂಭದಲ್ಲೇ ಸರ್ಕಾರವು ಎಲ್‌ಐಸಿಯ ಶೇ.5ರಷ್ಟು ಷೇರುಗಳನ್ನು ಮಾರಾಟ ಮಾಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಆರಂಭಿಕ ಷೇರು ಮಾರಾಟ ಪ್ರಕ್ರಿಯೆಗೆ ಸಂಬಂಧಿಸಿ ಬ್ಯಾಂಕರ್‌ಗಳು ಮತ್ತು ಸಲಹೆಗಾರರೊಂದಿಗೆ ಸರ್ಕಾರವು ಸಂಪರ್ಕದಲ್ಲಿದೆ.
ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದಾಗಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈಗಾಗಲೇ ಎಲ್‌ಐಸಿ ಐಪಿಒ ಬಿಡುಗಡೆಗೆ ಮಾರುಕಟ್ಟೆ ನಿಯಂತ್ರಕ ಸೆಬಿಯಿಂದ ಅನುಮತಿ ದೊರೆತಿದೆ.
ಸೆಬಿಗೆ ಸಲ್ಲಿಸಿರುವ ಪ್ರಸ್ತಾಪದಂತೆ, ಸರ್ಕಾರವು ಎಲ್‌ಐಸಿಯ ಸುಮಾರು 31 ಕೋಟಿ ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.
ಸರ್ಕಾರವು ಎಲ್‌ಐಸಿಯ ಶೇ.100ರಷ್ಟು ಅಂದರೆ 632.49 ಕೋಟಿ ಷೇರುಗಳನ್ನು ಹೊಂದಿದೆ. ಸೆಬಿಗೆ ಹೊಸದಾಗಿ ದಾಖಲೆಗಳನ್ನು ಸಲ್ಲಿಸದೇ ಐಪಿಒ ಬಿಡುಗಡೆ ಮಾಡಲು ಸರ್ಕಾರಕ್ಕೆ ಮೇ 12ರವರೆಗೆ ಕಾಲಾವಕಾಶವಿದೆ.