Advertisement

ಮೂಗು ಮುರಿಯುತ್ತಿದ್ದವರೇ ಓದುಗರಾದರು!

10:43 AM Jul 07, 2021 | Team Udayavani |

ಗದಗ: ಪುಟ್ಟ ಗುಡಿಸಲು ಎಂಬಂತಿದ್ದ ಗ್ರಂಥಾಲಯದ ಹೆಸರು ಹೇಳಿದರೆ ಸಾಕು ಗ್ರಾಮದ ಬಹುತೇಕರು ಮೂಗು ಮುರಿಯುತ್ತಿದ್ದರು. ಆದರೆ ಇದೀಗ ಪಂಚಾಯತ್‌ ಅಧಿಕಾರಿಗಳ ಕಾಳಜಿಯಿಂದ ನೂತನ ಕಟ್ಟಡದಲ್ಲಿ ತಲೆ ಎತ್ತಿರುವ ವಾಚನಾಲಯ ಅತ್ಯಾಧುನಿಕ ಪೀಠೊಪಕರಣ ಮತ್ತು ಕಂಪ್ಯೂಟರ್‌ಗಳು ಮಾರುದ್ದ ಹೋಗುತ್ತಿದ್ದವರನ್ನೂ ಕೂಡ ಆಕರ್ಷಿಸುತ್ತಿವೆ.

Advertisement

ತಾಲೂಕಿನ ಕದಡಿ ಗ್ರಾಮದಲ್ಲಿ ಹಳೇ ಕಟ್ಟಡದಲ್ಲಿದ್ದ ಗ್ರಂಥಾಲಯ ಅಲ್ಲಲ್ಲಿ ಶಿಥಿಲಗೊಂಡಿತ್ತು. ಗ್ರಂಥಾಲಯದ ಈ ಪರಿಸ್ಥಿತಿ ಅರಿತ ಗ್ರಾಪಂ ಅಧಿಕಾರಿಗಳು ಅದನ್ನು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸುವ ಜತೆಗೆ ಓದುಗರ ಆಕರ್ಷಣೆ ಹಾಗೂ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಹೆಚ್ಚಿಸಲು ವಿವಿಧ ಉಪಕ್ರಮ ಕೈಗೊಂಡಿರುವುದರಿಂದ ಓದುಗರನ್ನು ಕೈಬೀಸಿ ಕರೆಯುತ್ತಿದೆ.

ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಕದಡಿ ಗ್ರಾಮದಲ್ಲಿ 2001ರಲ್ಲಿ ಪುಟ್ಟದೊಂದು ಹಳೇ ಕೋಣೆಯಲ್ಲಿ ಗ್ರಂಥಾಲಯ ಆರಂಭಗೊಂಡಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅದು ಅಲ್ಲಲ್ಲಿ ಶಿಥಿಲಗೊಂಡು, ಮಳೆ ಬಂದರೆ ಸೋರುತ್ತಿತ್ತು. ಇದರಿಂದ ಗ್ರಂಥಾಲಯದಲ್ಲಿನ ಪುಸ್ತಕಗಳೂ ಹಾನಿಯಾಗುವ ಸಂಭವವಿತ್ತು.ಹೀಗಾಗಿ, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಗ್ರಂಥಾಲಯಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದರು.ಈ ಬಗ್ಗೆ ಗ್ರಂಥ ಪಾಲಕರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಗಮನ ಸೆಳೆದಿದ್ದರು.

ಸಮುದಾಯ ಭವನಕ್ಕೆ ಶಿಫ್ಟ್‌: ಸಮಸ್ಯೆ ಗಂಭೀರತೆ ಅರಿತ ಗ್ರಾಪಂ ಆಡಳಿತ ಮಂಡಳಿ, ಗ್ರಂಥಾಲಯ ಅಧಿಕಾರಿಗಳ ಅನುಮತಿಯೊಂದಿಗೆ ಪಂಚಾಯಿತಿ ಅಧೀನದಲ್ಲಿರುವ ನೂತನ ಸಮುದಾಯ ಭವನದ ಕಟ್ಟಡಕ್ಕೆ ಗ್ರಂಥಾಲಯ ಸ್ಥಳಾಂತರಿಸಿದೆ. ಅಲ್ಲದೇ, ಸಮುದಾಯ ಭವನದ ಒಂದು ಬೃಹತ್‌ ಕೊಠಡಿಯಲ್ಲಿ ಗ್ರಂಥಾಲಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಗ್ರಾಪಂನ 14ನೇ ಹಣಕಾಸು ಯೋಜನೆಯಡಿ ಸುಮಾರು 90 ಸಾವಿರ ರೂ. ಖರ್ಚು ಮಾಡಿ, ಓದುಗರ ಅನುಕೂಲಕ್ಕಾಗಿ ಸುಸಜ್ಜಿತ ಕಟ್ಟಿಗೆಯ 12 ಕುರ್ಚಿ, ಮೇಜುಗಳು ಹಾಗೂ ಸಾವಿರಾರು ಪುಸ್ತಕ ಅಚ್ಚುಕಟ್ಟಾಗಿ ಜೋಡಿಸಿಡಲು ರ್ಯಾಕ್‌ಗಳನ್ನೂ ಒದಗಿಸಲಾಗಿದೆ. ಹೀಗಾಗಿ, ಅತ್ಯಾಧುನಿಕವಾಗಿರುವ ಗ್ರಂಥಾಲಯ ಓದುಗರನ್ನು ಆಕರ್ಷಿಸುತ್ತಿದೆ.

Advertisement

ಪ್ರೌಢಶಾಲಾ ಮಕ್ಕಳಿಗೆ ಕಡ್ಡಾಯ: ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶಾಲೆಗಳು ಇನ್ನೂ ಬಾಗಿಲು ತೆರೆದಿಲ್ಲ. ಸದ್ಯಕ್ಕೆ ವಿವಿಧ ತರಗತಿಗಳಿಗೆಆನ್‌ಲೈನ್‌ ಮೂಲಕ ಶಿಕ್ಷಣ ಒದಗಿಸಲಾಗುತ್ತಿದೆ.ಆದರೂ, ಮಕ್ಕಳು ಮೊಬೈಲ್‌ ಗೇಮಿಂಗ್‌ ಗೀಳಿಗೆಅಂಟಿಕೊಳ್ಳುತ್ತಿದ್ದಾರೆ. ಮೊಬೈಲ್‌ ಗೇಮಿಂಗ್‌ಗೀಳು ತಪ್ಪಿಸಿ, ಅವರಲ್ಲಿ ಓದುವ ಆಸಕ್ತಿ ಹೆಚ್ಚಿಸಲು ಗ್ರಂಥಾಲಯ ಪರಿಣಾಮಕಾರಿಯಾಗಿ ಬಳಸುವ ಚಿಂತನೆ ನಡೆದಿದೆ.

ಗ್ರಂಥಾಲಯದಲ್ಲಿ ಸುಮಾರು 4443ಕ್ಕಿಂತ ಹೆಚ್ಚಿನ ಪುಸ್ತಕಗಳಿದ್ದು, ಪ್ರತಿನಿತ್ಯ 3 ದಿನ ಪತ್ರಿಕೆಗಳು ಲಭ್ಯವಿದೆ. ಅಗತ್ಯ ಪೀಠೊಪರಕಣ ಕಲ್ಪಿಸಲಾಗಿದ್ದು, ಗ್ರಂಥಾಲಯಸುಸಜ್ಜಿತವಾಗಿದೆ. ಮಕ್ಕಳ ಓದಿಗೆ ಪೂರಕ ವಾತಾವರಣಕಲ್ಪಿಸಲಾಗಿದೆ. ಸದ್ಯ ಶಾಲಾ ಮಕ್ಕಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳು ಪ್ರತಿನಿತ್ಯ ಗ್ರಂಥಾಲಯಕ್ಕೆ ಭೇಟಿ ನೀಡುವಂತೆ ಸೂಚಿಸಬೇಕು. ಶಾಲಾ ಆರಂಭದ ಬಳಿಕ ವಾರದಲ್ಲಿ ಒಂದು ಅವ ಧಿ ಗ್ರಂಥಾಲಯಕ್ಕೆ ಮೀಸಲಿಡಬೇಕೆಂದು ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳಿಗೆ ಮನವಿ ಮಾಡಲಾಗಿದ್ದು, ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ಪಾಳು ಬಿದ್ದಿದ್ದ ಗ್ರಂಥಾಲಯ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸುವ ಮೂಲಕ ಮಹತ್ವದ ಬದಲಾವಣೆಗೆ ಗ್ರಾಪಂ ಆಡಳಿತ ನಾಂದಿ ಹಾಡಿದೆ. ಹಿಂದೆ ಬೆರಳೆಣಿಕೆಯಷ್ಟು ಜನರು ಭೇಟಿ ನೀಡುತ್ತಿದ್ದ ಗ್ರಂಥಾಲಯದಲ್ಲಿ ಇದೀಗ ಓದುಗರ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ಗ್ರಂಥಪಾಲಕ ವೀರಪ್ಪ ಚೋಳಪ್ಪನವರ.

ಗ್ರಂಥಾಲಯದಲ್ಲಿ ಸಾಮಾನ್ಯವಾಗಿ ಕಥೆ, ಕಾದಂಬರಿ ಪುಸ್ತಕಗಳಿವೆ. ಪ್ರೌಢಶಾಲಾ ಪಠ್ಯಕ್ರಮಕ್ಕೆ ಪೂರಕ ಮತ್ತು ವಿದ್ಯಾರ್ಥಿಗಳಲ್ಲಿ ಓದುವ ಸದಭಿರುಚಿ ಬೆಳೆಸುವ ಪುಸ್ತಕ ಪಟ್ಟಿ ಮಾಡಿಕೊಡುವಂತೆ ಶಾಲೆ ಶಿಕ್ಷಕರನ್ನು ಕೋರಲಾಗಿದೆ. ಅದನ್ನು ಹಂತ ಹಂತವಾಗಿ ಪೂರೈಸಲಾಗುತ್ತದೆ. ಸರ್ಕಾರದಿಂದ ಅನುದಾನ ಲಭಿಸಿದರೆ ಪ್ರತ್ಯೇಕ ಗ್ರಂಥಾಲಯ ನಿರ್ಮಿಸಲಾಗುತ್ತದೆ. ಗ್ರಾಮದ ಮಕ್ಕಳು, ಯುವಕರಲ್ಲಿ ಓದುವ ಹವ್ಯಾಸ ಹೆಚ್ಚಿಸಬೇಕೆಂಬುದೇ ನಮ್ಮ ಆಶಯ. –ಜ್ಯೋತಿ ಬ. ಗುಡಗೂರ, ಗ್ರಾಪಂ ಪಿಡಿಒ

ಗ್ರಾಪಂನಲ್ಲಿ ಲಭ್ಯವಿರುವ ಅಲ್ಪಸ್ವಲ್ಪ ಅನುದಾನದಲ್ಲಿಉತ್ತಮ ಗ್ರಂಥಾಲಯ ಮಾಡಿದ್ದಾರೆ. ಇದಕ್ಕೆ ಗ್ರಾಪಂ ಪಿಡಿಒ ಅವರ ವೈಯಕ್ತಿಕ ಆಸಕ್ತಿಯೇ ಮುಖ್ಯ. ಗ್ರಂಥಾಲಯ ಸ್ಥಳಾಂತರ ಕಾರ್ಯಕ್ಕೆ ಗ್ರಾಮಸ್ಥರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿವೆ.– ಡಾ| ಎಚ್‌.ಎಸ್‌. ಜಿನಗಾ, ತಾಪಂ ಇಒ

Advertisement

Udayavani is now on Telegram. Click here to join our channel and stay updated with the latest news.

Next