Advertisement

ಗ್ರಂಥಾಲಯಕ್ಕಿಲ್ಲ ಸ್ವಂತ ಕಟ್ಟಡ

03:46 PM Oct 22, 2019 | Suhan S |

ಶಹಾಪುರ: ನಗರದಲ್ಲಿ 35 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವೇ ಇಲ್ಲ. ಹೀಗಾಗಿ ಸದ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎರಡು ಕೋಣೆಗಳಲ್ಲಿ ನಡೆಯುತ್ತಿದೆ.

Advertisement

ನಗರದ ಹೊರವಲಯದಲ್ಲಿ ಸರ್ಕಾರಿ ಅಧೀನ ಕಟ್ಟಡವೊಂದಕ್ಕೆ ಈ ಮೊದಲು ಈ ಗ್ರಂಥಾಲಯವನ್ನು ಸ್ಥಳಾಂತರಿಸಲಾಗಿತ್ತು. ಓದುಗರಿಗೆ ಅಷ್ಟೊಂದು ದೂರ ಬರಲು ಸಮಸ್ಯೆ ಆಗುತ್ತಿರುವುದರಿಂದ, ಸಾಕಷ್ಟು ಜನ ಓದುಗರು ಗ್ರಂಥಾಲಯ ನಗರದಲ್ಲೇ ಇರಬೇಕೆಂದು ಒತ್ತಾಯಿಸಿದ ಕಾರಣ ಗ್ರಂಥಾಲಯವನ್ನು ನಗರದ ಮಧ್ಯ ಭಾಗದಲ್ಲಿರುವ ಪಿಯು ಕಾಲೇಜ್‌ ಕಟ್ಟಡವೊಂದರಲ್ಲಿ ಆರಂಭಿಸಲಾಗಿದೆ.

ಸಿಬ್ಬಂದಿ ಬೇಕು: ಗ್ರಂಥಾಲಯ ಸಹಾಯಕರೊಬ್ಬರೇ ಈ ಗ್ರಂಥಾಲಯ ನಿರ್ವಹಿಸುತ್ತಿದ್ದು, ಇನ್ನಿಬ್ಬರ ಸಿಬ್ಬಂದಿ ಅಗತ್ಯವಿದೆ. ಒಬ್ಬರು ಗ್ರಂಥಾಲಯ ಸಹವರ್ತಿ ಮತ್ತು ಇನ್ನೊಬ್ಬ ಜವಾನ್‌ ಹುದ್ದೆ ನಿರ್ವಹಿಸುವವರನ್ನು ನೇಮಿಸಬೇಕಿದೆ. ಸಮರ್ಪಕ ಸಿಬ್ಬಂದಿ ಇದ್ದರೆ ಬೆಳಗ್ಗೆ 8:30 ಗಂಟೆಯಿಂದ ರಾತ್ರಿ 8:30 ಗಂಟೆವರೆಗೂ ಗ್ರಂಥಾಲಯವನ್ನು ಓದುಗರ ಸೇವೆಗೆ ತೆರೆಯಬಹುದು.  ಆದರೆ ಪ್ರಸ್ತುತ ಓರ್ವರು ಮಾತ್ರ ಗ್ರಂಥಾಲಯ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದು, ದಿನಕ್ಕೆ 7:00 ಗಂಟೆ ಮಾತ್ರ ಓದುಗರಿಗೆ ಗ್ರಂಥಾಲಯ ಲಭ್ಯವಾಗುತ್ತಿದೆ.

ಸಾಕಷ್ಟು ಕೃತಿಗಳು ಲಭ್ಯ: ಗ್ರಂಥಾಲಯದಲ್ಲಿ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿ ಸಿದ ಸ್ಪರ್ಧಾತ್ಮಕ ಪುಸ್ತಕಗಳು ಇವೆ.ನಾಡಿನ ಹೆಸರಾಂತ ಸಾಹಿತಿಗಳ ಕೃತಿಗಳು, ಶರಣರ ಚರಿತ್ರೆ, ವಚನಗಳ ಪುಸ್ತಕಗಳಿವೆ. ಸ್ಪರ್ಧಾಚಿತ್ರ, ಚಾಣಕ್ಯ, ಚೈತ್ರಾ ಸೇರಿದಂತೆ ಎಂಪ್ಲಾಯ್‌ ಮೆಂಟ್‌ ಪತ್ರಿಕೆಗಳಿವೆ. ನಾಡಿನ ಪ್ರಮುಖ ಕನ್ನಡ ದಿನ ಪತ್ರಿಕೆಗಳು, ಒಂದು ಡೆಕ್ಕನ್‌ ಹೆರಾಲ್ಡ್‌ ಇಂಗ್ಲಿಷ್‌ ಪತ್ರಿಕೆಯೂ ದೊರೆಯುತ್ತಿದೆ.  ದಿನಪತ್ರಿಕೆಗಳು ಮತ್ತು ಮ್ಯಾಗ್‌ಜಿನ್‌ ಖರೀದಿಗೆ ಪ್ರತಿ ಗ್ರಂಥಾಲಯ ಮಾಸಿಕ ಸಾವಿರ ರೂ. ವೆಚ್ಚ ಮಾಡುತ್ತಿದೆ.

 ಹಣದ ಕೊರತೆ ಇಲ್ಲ :  ಗ್ರಂಥಾಲಯ ನಿರ್ವಹಣೆಗೆ ಯಾವುದೇ ಹಣದ ಕೊರತೆ ಇಲ್ಲ. ಸ್ಥಳೀಯ ನಗರಸಭೆ ಸಂಗ್ರಹಿಸುವ ಒಟ್ಟು ಭೂ ಕಂದಾಯ ಹಣದಲ್ಲಿ ಶೇ. 6 ಗ್ರಂಥಾಲಯ ನಿರ್ವಹಣೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಗ್ರಂಥಾಲಯಕ್ಕೆ ನಿತ್ಯ 250 ರಿಂದ 300 ಜನ ಓದುಗರು ಆಗಮಿಸುತ್ತಾರೆ. ಓದುಗರು ಅಭಿರುಚಿಗೆ ತಕ್ಕ ಪುಸ್ತಕಗಳನ್ನು ತೆಗೆದುಕೊಂಡು ಓದುತ್ತಾರೆ.

Advertisement

ಗ್ರಂಥಾಲಯ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ದಿನದ 12 ಗಂಟೆ ತೆರೆಯಲು ಸಮಸ್ಯೆ ಆಗುತ್ತಿದೆ. ಸ್ವಂತ ಕಟ್ಟಡ ಸಕಲ ಸೌಲಭ್ಯ ದೊರಕಿಸಿಕೊಟ್ಟಲ್ಲಿ ಅನುಕೂಲವಾಗಲಿದೆ. ಓದುಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸೋಮವಾರಕ್ಕೊಮ್ಮೆ ರಜೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ನಿರ್ವಹಣೆಗೆ ಯಾವುದೇ ಹಣದ ಸಮಸ್ಯೆ ಇಲ್ಲ. –ಕಿಶನ್‌ ರಾಠೊಡ, ಗ್ರಂಥಾಲಯ ಸಹಾಯಕ.

 

-ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next