Advertisement

ಸ್ವಂತ ಸೂರಿಲ್ಲದೇ ಸೊರಗಿದ ಗ್ರಂಥಾಲಯ

10:52 AM Nov 12, 2019 | Team Udayavani |

ಆಳಂದ: ಕೆಲ ದಶಕದಿಂದ ಸ್ವಂತ ಕಟ್ಟಡವಿಲ್ಲ. ದಿನ ಕಳೆದಂತೆ ಕ್ಷೀಣಿಸುತ್ತಿರುವ ಓದುಗರ ಸಂಖ್ಯೆ. ಕಟ್ಟಡದೊಳಗೆ ಶುದ್ಧಗಾಳಿಯ ಕೊರತೆ. ಗೋಡೆ ಮತ್ತು ಮೇಲ್ಛಾವಣಿ ಯಾವಾಗ ಕುಸಿಯುತ್ತವೆಂಬ ಆತಂಕ. ಮೂಲ ಸೌಲಭ್ಯಗಳ ಕೊರತೆ.

Advertisement

ಪುಸ್ತಕದ ರಾಶಿಯೇ ಇದ್ದರೂ ಗೋದಾಮಿನಂತೆ ಕಾಣಿಸುವ ಕಟ್ಟಡ. ಇದು 140 ಹಳ್ಳಿಗಳ ಕೇಂದ್ರಬಿಂದು ಆದ ಗಡಿನಾಡಿನ ತಾಲೂಕು ಕೇಂದ್ರ ಆಳಂದ ಪಟ್ಟಣದಲ್ಲಿನ ಗ್ರಂಥಾಲಯದ ಸದ್ಯದ ಸ್ಥಿತಿ-ಗತಿ. ಆರಂಭದಲ್ಲಿ ಈ ಗ್ರಂಥಾಲಯ ವ್ಯಾಪ್ತಿ ಗ್ರಾಮೀಣ ಭಾಗದಲ್ಲಿನ 43 ಗ್ರಂಥಾಲಯಗಳಿದ್ದವು. ಆದರೀಗ ಅವು ಗ್ರಾಪಂ ಆಡಳಿತಕ್ಕೆ ಒಳಪಟ್ಟ ನಂತರ ದೊಡ್ಡ ಗ್ರಂಥಾಲಯ ಎಂಬ ಹೆಗ್ಗಳಿಕೆಯ ನಡುವೆ ಈ ಗ್ರಂಥಾಲಯವು ಹೊಸ ಓದುಗರನ್ನು ಸೆಳೆಯುವ ಬದಲು ಅಲ್ಪ-ಸ್ವಲ್ಪ ಬರುವ ಜನರನ್ನು ಕಳೆದುಕೊಳ್ಳುತ್ತಿದೆ.

ಸ್ವಂತ ಕಟ್ಟಡವಿಲ್ಲ: ಪಟ್ಟಣದ ಪುರಸಭೆ ಕಚೇರಿ ಆವರಣದ ಮಳಿಗೆಯಲ್ಲಿ ನಾಲ್ಕು ದಶಕಗಳ ಹಿಂದೆ ಆರಂಭಗೊಂಡ ಸಾರ್ವಜನಿಕ ಗ್ರಂಥಾಲಯವೂ ಹಲವು ಏಳು ಬೀಳುಗಳ ನಡುವೆ ತನ್ನ ಸ್ವಂತ ನಿವೇಶನ ಹಾಗೂ ಕಟ್ಟಡದಂತಹ ಮೂಲ ಸೌಲಭ್ಯಗಳ ಅಸ್ತಿತ್ವದ ಹುಡುಕಾಟ ದಲ್ಲಿಯೇ ದಿನದೊಡುತ್ತಿದೆ.

ಕಲಬುರಗಿ ಸಾರ್ವಜನಿಕ ಗ್ರಂಥಾಲಯ ವ್ಯಾಪ್ತಿಗೆ ಬರುವ ಪಟ್ಟಣದ ಈ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಧಿ ಕಾರಿಗಳು ಅನೇಕ ಬಾರಿ ಸ್ಥಳೀಯ ಪುರಸಭೆಗೆ ನಿವೇಶನದ ಕೋರಿಕೆಯನಿಟ್ಟಿದ್ದಾರೆ. ಆದರೆ ನಿವೇಶನ ನೀಡಲು ಮುಂದಾದ ಪುರಸಭೆ ಪಟ್ಟಣದಲ್ಲಿ ಸೂಕ್ತಸ್ಥಳದ ಬದಲು ದೂರದ ಜಾಗವನ್ನು ತೋರಿದ ಹಿನ್ನೆಲೆಯಲ್ಲಿ ಗ್ರಂಥಾಲಯ ಅಧಿಕಾರಿಗಳು ಹಿಂದೇಟು ಹಾಕಿದರು. ಜತೆಗೆ ಇದ್ದ ಸ್ಥಳದಲ್ಲೇ ಅನಿವಾರ್ಯವಾಗಿ ಗ್ರಂಥಾಲಯ ತೆರೆಯಲಾಗುತ್ತಿದೆ ಎನ್ನಲಾಗಿದೆ.

15 ಸಾವಿರ ಪುಸ್ತಕ: ಶಿಥಿಲಾವ್ಯವಸ್ಥೆಗೆ ತಲುಪಿದ ಕಟ್ಟಡದಲ್ಲೇ ಗ್ರಂಥಾಲಯವನ್ನು ನಡೆಸುತ್ತಿರುವುದರಿಂದ ಪುಸ್ತಕ ಪ್ರೇಮಿಗಳು ಮತ್ತು ಓದುಗರಿಗೆ ಉತ್ತಮ ವಾತಾವರಣ ಇಲ್ಲವಾಗಿದೆ. ಗ್ರಂಥಾಲಯದಲ್ಲಿ ಸುಮಾರು 15 ಸಾವಿರ ಪುಸ್ತಕಗಳಿವೆ. 2,153 ಜನ ಸದಸ್ಯರನ್ನು ಹೊಂದಿದೆ. ಮೂರು ಜನ ಕಚೇರಿ ಸಿಬ್ಬಂದಿಗಳಲ್ಲಿ ಓರ್ವ ಕಾರ್ಯ ನಿರ್ವಹಿಸಿದರೆ, ಇನ್ನೊಬ್ಬರು ನಿಯೋಜನೆ ಮೇಲೆ ತೆರಳಿದ್ದಾರೆ. ಮತ್ತೂಬ್ಬರು ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

ನಿತ್ಯ 40-50 ಜನ ಓದುಗರು ಗ್ರಂಥಾಲಯಕ್ಕೆ ಬರುತ್ತಾರೆ. 6 ಕನ್ನಡ ದಿನಪತ್ರಿಕೆಗಳು, ಆಂಗ್ಲ, ಉರ್ದು, ಮರಾಠಿ, ಹಿಂದಿ ತಲಾ ಒಂದು ಪತ್ರಿಕೆ, ಐದು ಮಾಸಿಕ ಪತ್ರಿಗಳು ಬರುತ್ತವೆ. ಸುಸರ್ಜಿತ ಗ್ರಂಥಾಲಯ ಕಟ್ಟಡ, ಎಲ್ಲ ರೀತಿಯ ಪುಸ್ತಕ, ಪತ್ರಿಕೆ ಮತ್ತು ಕುಡಿಯುವ ನೀರು, ಉತ್ತಮ ಆಸನ, ಗಾಳು ಬೆಳಕಿನ ಕೊರತೆಯಿದೆ.

ಸ್ವತಂತ್ರವಾಗಿ ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಪುರಸಭೆಗೆ ಕೇಳಲಾಗಿತ್ತು. ಸ್ಥಳೀಯವಾಗಿ ಸೂಕ್ತ ಸ್ಥಳ ಲಭ್ಯವಿಲ್ಲದ ಕಾರಣ ಪಟ್ಟಣದ ಹೊರವಲಯದಲ್ಲಿ ಜಾಗೆ ತೋರಿಸುತ್ತಿದ್ದರಿಂದ ಇದ್ದ ಸ್ಥಳದಲ್ಲೇ ಮುಂದುವರಿಸುವುದು ಸೂಕ್ತವೆಂದು ದಿನದೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಹಶೀಲ್ದಾರ್‌ ಕಚೇರಿ ಮಿನಿ ವಿಧಾನಸೌಧಕ್ಕೆ ಸ್ಥಳಾಂತಗೊಂಡ ನಂತರ ಅಲ್ಲಿ ಗ್ರಂಥಾಲಯಕ್ಕಾಗಿ ಸ್ಥಳ ಪಡೆಯುವ ಉದ್ದೇಶವೂ ಇದೆ. -ಮಹಿಬೂಬ ಖಜೂರಿ, ಗ್ರಂಥಾಲಯ ಸಿಬ್ಬಂದಿ, ಆಳಂದ

 

-ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next