ಬೀದರ: ಗ್ರಂಥಾಲಯಗಳು ಜ್ಞಾನ ವಿಸ್ತಾರದ ಕೇಂದ್ರಗಳಾಗಿದ್ದು, ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ಹೋಗಿ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಆ ಮೂಲಕ ಜ್ಞಾನವೃದ್ಧಿಗೆ ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ಹಾಲಹಳ್ಳಿ ಜ್ಞಾನ ಕಾರಂಜಿ ಸ್ನಾತಕೋತ್ತರ ಕೇಂದ್ರದಲ್ಲಿ ನ್ಯಾಕ್ ಪೂರ್ವ ಸಿದ್ಧತೆ ತಾಂತ್ರಿಕ ಹಾಗೂ ದಾಖಲೀಕರಣ ಕುರಿತು ರಾಷ್ಟ್ರೀಯ ಕಾರ್ಯಾಗಾರ ಮತ್ತು ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಾಲಯಗಳಿಗೆ ಹೆಚ್ಚು ಭೇಟಿ ನೀಡಿ ನೆಟ್‌ಸೆಟ್ ಹಾಗೂ ಜೆಆರ್‌ಎಫ್ ಪರೀಕ್ಷೆಗಳನ್ನು ಪಾಸಾಗಲು ಪ್ರಯತ್ನಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವೇಗ ಓದು, ವೇಗ ಬರಹ, ಗಮನ ಹರಿಸುವಿಕೆ, ಪುನಃ ಮನನ ಮತ್ತು ಸಾಮೂಹಿಕ ಚರ್ಚೆ ಮಾಡುವುದನ್ನು ಕರಗತ ಮಾಡಿಕೊಳ್ಳಬೇಕು. ಹೀಗಾದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ಗುಲಬರ್ಗಾ ವಿವಿ ಕುಲಪತಿ ಪ್ರೊ| ದಯಾನಂದ ಅಗಸರ್ ಮಾತನಾಡಿ, ಜ್ಞಾನ ಕಾರಂಜಿ ಸ್ನಾತಕ್ಕೋತ್ತರ ಕೇಂದ್ರವು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಂಜೀವಿನಿಯಾಗಿದ್ದು, ವಿದ್ಯಾರ್ಥಿಗಳು ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು. ಈ ಕೇಂದ್ರದಲ್ಲಿ ಸೇವೆ ಸಲ್ಲಿಸುವ ಉಪನ್ಯಾಸಕರಿಗೆ ಸರ್ಕಾರ ಮತ್ತು ವಿಶ್ವವಿದ್ಯಾಲಯ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಲಿದೆ. ಶಿಕ್ಷಕರು ಕೂಡಾ ಸ್ವತಂತ್ರರಾಗಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ವಿಶ್ರಾಂತ ಕುಲಪತಿ ಪ್ರೊ| ಬಿ.ಜಿ. ಮೂಲಿಮನಿ ಮಾತನಾಡಿ, ಪ್ರಪಂಚದಲ್ಲಿ ವಿವಿಧ ಕ್ರಾಂತಿಗಳು ನಡೆದಂತೆ ಇಂದು ಜ್ಞಾನದ ಕ್ರಾಂತಿ ನಡೆಯುತ್ತಿದೆ. ಗ್ರಂಥಾಲಯಕ್ಕೆ ಆಧುನಿಕ ಸ್ಪರ್ಶ ನೀಡಬೇಕಾಗಿದೆ. ವೈಪೈ, ಗಣಕಯಂತ್ರ ಮತ್ತು ಮೊಬೈಲ್ ಮೂಲಕ ಜ್ಞಾನವೃದ್ಧಿ ಆಗಬೇಕಾಗಿದೆ. ಸಮರ್ಥನೀಯ ಬೆಳವಣಿಗೆಯಿಂದ ಮಕ್ಕಳು ಜ್ಞಾನವೃದ್ಧಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ವಿವಿ ಗ್ರಂಥಪಾಲಕ ಡಾ| ಸುರೇಶ ಜಂಗೆ ಮಾತನಾಡಿದರು. ವಿವಿ ವಿದ್ಯಾ ವಿಷಯಕ ಪರಿಷತ್ ಸದಸ್ಯ ಬಸವರಾಜ ಪವಾರ್, ಯೋಗೇಶ ಎಂ.ಬಿ., ಪ್ರಾಧ್ಯಾಪಕ ಡಾ| ಮಲ್ಲಿಕಾರ್ಜುನ ಹಂಗರಗೆ ವೇದಿಕೆಯಲ್ಲಿದ್ದರು. ಡಾ| ಶಾಂತಕುಮಾರ ಚಿದ್ರಿ, ಡಾ| ರಾಮಚಂದ್ರ ಗಣಾಪುರ, ಡಾ| ಎಂ.ಎಸ್ ಚೆಲ್ವಾ, ಹೇಮರೆಡ್ಡಿ, ಗುರು ಶೆರಂಜೆ, ಸೋಮನಾಥ ರೇಶಟ್ಟಿ, ಶೇಖ್ ಸೈಯದ್ ಅಬ್ದುಲ್, ಅಭಿಜಿತ್ ಪಾಟೀಲ ಮತ್ತಿತರರಿದ್ದರು.