Advertisement

ನರಹಳ್ಳಿಯಲ್ಲೊಂದು ಜ್ಞಾನಭಂಡಾರ..!

03:13 PM Jan 31, 2020 | Suhan S |

ಪಾಂಡವಪುರ: ಓದು ಹವ್ಯಾಸ ದೂರವಾಗುತ್ತಿರುವ ಹಾಗೂ ಗ್ರಂಥಾಲಯಗಳು ಅನಾಥವಾಗಿರುವ ಪ್ರಸ್ತುತ ದಿನಮಾನಗಳಲ್ಲಿ ತಾಲೂಕಿನ ನರಹಳ್ಳಿಯಲ್ಲಿರುವ ಗ್ರಂಥಾಲಯ ಮತ್ತು ವಾಚನಾಲಯ ಕಳೆದ ಏಳು ವರ್ಷಗಳಿಂದ ಎಲ್ಲರ ಆಕರ್ಷಿಸುತ್ತಾ ಗಮನ ಸೆಳೆಯುತ್ತಿದೆ.

Advertisement

ಊರಿನ ಜನರಿಗೆ ವಿಶೇಷ ಅಭಿಮಾನ: ಹದಿನೇಳನೇ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯಅವರನ್ನು ಕಂಡರೆ ಊರಿನ ಜನರಿಗೆ ವಿಶೇಷ ಅಭಿಮಾನ. ಅವರಸಾಹಿತ್ಯ, ವಿಮರ್ಶೆ, ಲೇಖನ, ಬರಹಗಳ ಬಗ್ಗೆ ಅಪಾರಪ್ರೀತಿಯನ್ನು ಹೊಂದಿದ್ದಾರೆ. ಬಾಲಸುಬ್ರಹ್ಮಣ್ಯ ಅವರು ಊರಿನ ಮಗ ಎಂದೆಲ್ಲಾ ಮೆಚ್ಚುಗೆಯ ಮಾತುಗಳನ್ನಾಡುತ್ತಾ ಅವರ ಬಗ್ಗೆ ಗೌರವ ಭಾವನೆ ಇಟ್ಟುಕೊಂಡಿದ್ದಾರೆ.

ನರಹಳ್ಳಿ ಬಾಲಸುಬ್ರಹ್ಮಣ್ಯ ಹೆಸರಿನಲ್ಲಿ ಅಭಿಮಾನಿಗಳ ಸಂಘ: ಗ್ರಾಮದ ಜನರೇ ಸೇರಿಕೊಂಡು ನರಹಳ್ಳಿ ಬಾಲಸುಬ್ರಹ್ಮಣ್ಯ ಹೆಸರಿನಲ್ಲಿ ಅಭಿಮಾನಿಗಳ ಸಂಘವೊಂದನ್ನು ಕಟ್ಟಿಕೊಂಡಿದ್ದಾರೆ. ಇದೇ ಅಭಿಮಾನಿಗಳು 2013ರಲ್ಲಿ ಗ್ರಂಥಾಲಯ ಮತ್ತುವಾಚನಾಲಯಕೆ ಚಾಲನೆ ನೀಡಿದರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನೇ ಗ್ರಂಥಾಲಯವಾಗಿ ಪರಿವರ್ತಿಸಿದ್ದಾರೆ. ಇಲ್ಲಿದ್ದ ಶಾಲೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಶಾಲೆಯ ಜಾಗವನ್ನೇ ಗ್ರಂಥಾಲಯಕ್ಕೆ ಬಳಸಿಕೊಳ್ಳಲಾಗುತ್ತಿದೆ.

1500 ರಿಂದ 2000 ಪುಸ್ತಕ ಸಂಗ್ರಹ:ಗ್ರಂಥಾಲಯ ಮತ್ತು ವಾಚನಾಲಯವಿರುವ ಸ್ಥಳ ಬಹಳ ವಿಶಾಲವಾಗಿದೆ. ಕಬ್ಬಿಣದ ರಾಕ್‌ಗಳನ್ನು ಜೋಡಿಸಿ ಬಹಳ ಅಚ್ಚುಕಟ್ಟಾಗಿ ಪುಸ್ತಕಗಳನ್ನು ಸಂಗ್ರಹಿಸಿಡಲಾಗಿದೆ. ಕುವೆಂಪು, ಬೇಂದ್ರೆ, ಮಾಸ್ತಿ ವೆಂಕಟೇಶಅಯ್ಯಂಗಾರ್‌, ಪು.ತಿ.ನರಸಿಂಹಾಚಾರ್‌, ವಿ.ಕೃ.ಗೋಕಾಕ್‌ ಸೇರಿದಂತೆ ಹಲವಾರು ಕವಿಗಳ ಕತೆ, ಕಾದಂಬರಿ, ಕೃತಿಗಳು, ಕವನಸಂಕಲನ, ಕಥಾ ಸಂಕಲನ, ಕರ್ನಾಟಕ ಇತಿಹಾಸ, ಪರಂಪರೆಯನ್ನು ಬಿಂಬಿಸುವ ಸಾವಿರಾರು ಪುಸ್ತಕಗಳು ಇಲ್ಲಿವೆ. ಗ್ರಂಥಾಲಯದಲ್ಲಿ ಸುಮಾರು 1500 ರಿಂದ 2000 ಪುಸ್ತಕಗಳನ್ನು ಸಂಗ್ರಹಿಸಿಡಲಾಗಿದೆ.

ಗ್ರಾಮಸ್ಥರನ್ನು ಪ್ರೇರೇಪಿಸುವ ವಿದ್ಯಾರ್ಥಿಗಳು: ಅಭಿಮಾನಿ ಸಂಘದವರು ವಿದ್ಯಾರ್ಥಿಗಳು ಹಾಗೂ ಊರಿನ ಜನರನ್ನು ಓದುವುದಕ್ಕೆ ಪ್ರೇರೇಪಿಸುತ್ತಾ ಬಂದಿದ್ದಾರೆ. ಶಾಲೆಯ ಪಕ್ಕದಲ್ಲೇ ಗ್ರಂಥಾಲಯವಿರುವುದರಿಂದ ಶಾಲಾ ಮಕ್ಕಳು ನಿತ್ಯವೂ ಇಲ್ಲಿಪುಸ್ತಕ, ದಿನಪತ್ರಿಕೆಗಳನ್ನು ಓದಲು ಬರುತ್ತಾರೆ. ಮಕ್ಕಳಷ್ಟೇ ಅಲ್ಲದೆ ಊರಿನ ಜನರು ಸಂಜೆ ಸಮಯದಲ್ಲಿ ಗ್ರಂಥಾಲಯಕ್ಕೆ ಬಂದು ತಮ್ಮ ನೆಚ್ಚಿನ ಪುಸ್ತಕಗಳನ್ನು, ಪತ್ರಿಕೆ ಓದುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದಾರೆ.

Advertisement

ಕಟ್ಟಡ ಸುತ್ತಲೂ ಕಬ್ಬಿಣದ ಫೆನ್ಸಿಂಗ್‌ ಅಳವಡಿಕೆ: ಗ್ರಂಥಾಲಯ ಮತ್ತು ವಾಚನಾಲಯವಿರುವ ಸ್ಥಳದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಶಾಲಾ ಕಟ್ಟಡದ ಸುತ್ತಲೂ ಕಬ್ಬಿಣದ ಫೆನ್ಸಿಂಗ್‌ ಅಳವಡಿಸಲಾಗಿದೆ. ಆವರಣವನ್ನೂ ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಗ್ರಂಥಾಲಯದ ಒಳಗೆ ನಿತ್ಯವೂ ಸ್ವಚ್ಛತಾ ಕಾರ್ಯ ನಡೆಸುವುದಕ್ಕೆ ಸಿಬ್ಬಂದಿ ಇದ್ದು, ಕಟ್ಟಡ ಹಳೆಯದಾಗಿದ್ದರೂ ಅಭಿಮಾನಿ ಸಂಘದವರು ಸಮರ್ಥವಾಗಿ ನಿರ್ವಹಣೆ ಮಾಡಿಕೊಂಡು ಬರುತ್ತಿರುವುದಕ್ಕೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ.

ಶಿಸ್ತು ಕಾಪಾಡುತ್ತಿರುವ ವಿದ್ಯಾರ್ಥಿಗಳು: ಇಲ್ಲಿಗೆ ಬರುವ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಿದ ಬಳಿಕ ಅವುಗಳನ್ನು ಜೋಪಾನವಾಗಿ ಇದ್ದ ಸ್ಥಳದಲ್ಲೇ ಇಟ್ಟು ಹಾಳಾಗದಂತೆ ಜೋಪಾನ ಮಾಡುತ್ತಿದ್ದಾರೆ. ಪತ್ರಿಕೆಗಳನ್ನು ಎಲ್ಲೆಂದರಲ್ಲಿ ಓದಿ, ಅಡ್ಡಾದಿಡ್ಡಿ ಬಿಸಾಡದೆ ಶಿಸ್ತನ್ನು ಕಾಪಾಡುತ್ತಿದ್ದಾರೆ. ಮಕ್ಕಳು ಹಾಗೂ ಊರಿನ ಜನರ ಜ್ಞಾನದ ಹಸಿವನ್ನು ನೀಗಿಸುತ್ತಾ ಗ್ರಂಥಾಲಯ ಹಾಗೂ ವಾಚನಾಲಯವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಿರುವ ಅಭಿಮಾನಿ ಸಂಘದವರ ಕಾರ್ಯಕ್ಕೆ ಪ್ರಶಂಸೆಯೂ ವ್ಯಕ್ತವಾಗಿದೆ.

ಜ್ಞಾನಾರ್ಜನೆಗೆ ಪೂರಕ ವಾತಾವರಣ: ನರಹಳ್ಳಿಬಾಲಸುಬ್ರಹ್ಮಣ್ಯ ಅವರು ಊರಿಗೆ ಬಂದಾಗಲೆಲ್ಲಾ ಗ್ರಂಥಾಲಯಕ್ಕೆ ತಪ್ಪದೇ ಭೇಟಿ ನೀಡುತ್ತಾರೆ. ಅವರೂ ಸಹಮಕ್ಕಳು ಹಾಗೂ ಜನರು ಅವಶ್ಯವಾಗಿ ಓದಬೇಕಾದ ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯಕ್ಕೆ ನೀಡಿದ್ದಾರೆ. ಗ್ರಂಥಾಲಯದ ವಾತಾವರಣ, ಸ್ವಚ್ಛತೆ, ವಿದ್ಯಾರ್ಥಿಗಳು ಹಾಗೂ ಊರಿನವರಲ್ಲಿ ಓದುವ ಬಗೆಗಿನ ಕುತೂಹಲ ಕಂಡು ಗ್ರಾಮಸ್ಥರೊಂದಿಗೆ ಸಂತಸ ವ್ಯಕ್ತಪಡಿಸುವುದರ ಜೊತೆಗೆ ತಮ್ಮ ಹೆಸರಿನಲ್ಲಿ ಅಭಿಮಾನಿಗಳ ಸಂಘ ಸ್ಥಾಪಿಸಿಕೊಂಡು ಜ್ಞಾನಾರ್ಜನೆಗೆ ಪೂರಕ ವಾತಾವರಣ ಸೃಷ್ಟಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಊರಿನಲ್ಲಿದ್ದ ಶಾಲೆಯ ಜಾಗವನ್ನು ಪಡೆದುಕೊಂಡು ಗ್ರಂಥಾಲಯ, ವಾಚನಾಲಯ ಮಾಡಿದ್ದೇವೆ. ವಿದ್ಯಾರ್ಥಿಗಳು ಹಾಗೂ ಊರಿನ ಜನರು ಇದರ ಸದುಪಯೋಗ ಪಡೆದುಕೊಂಡು ಜ್ಞಾನಾರ್ಜನೆಯಲ್ಲಿ ತೊಡಗಿದ್ದಾರೆ. ಇದರಿಂದ ನಮಗೂ ಸಂತಸವಾಗುತ್ತಿದೆ. ಗ್ರಂಥಾಲಯ ತೆರೆದಿದ್ದಕ್ಕೆ ಸಾರ್ಥಕವೆನಿಸುತ್ತಿದೆ.ಸುರೇಶ್‌, ಅಧ್ಯಕ್ಷರು, ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಮಾನಿಗಳ ಬಳಗ

 

-ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next