Advertisement

ಗ್ರಂಥಾಲಯದ 50 ಸಾವಿರ ಪುಸ್ತಕ ಆನ್‌ಲೈನ್‌ನಲ್ಲಿ ಲಭ್ಯ

11:57 AM Apr 24, 2017 | |

ಬೆಂಗಳೂರು: ಗ್ರಂಥಾಲಯಗಳಲ್ಲಿ ಇರುವ ಹಳೇ ಪುಸ್ತಕಗಳನ್ನು ಪುನರ್‌ ಮುದ್ರಿಸುವ ಬದಲು ಅಂತರ್ಜಾಲದಲ್ಲಿ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ 50 ಸಾವಿರ ಪುಸ್ತಕವನ್ನು ಅಂತರ್ಜಾಲದಲ್ಲಿ ದಾಖಲಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಹೇಳಿದರು.

Advertisement

ನಗರದ ಕಬ್ಬನ್‌ ಪಾರ್ಕ್‌ನಲ್ಲಿರುವ ಕೇಂದ್ರಗ್ರಂಥಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಪುಸ್ತಕ ಹಾಗೂ ಕೃತಿಸ್ವಾಮ್ಯ ದಿನಾಚರಣೆ ಮತ್ತು ಕೇಂದ್ರ ಗ್ರಂಥಾಲಯದ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ 3.64 ಲಕ್ಷ ಪುಸ್ತಕವಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಒಂದು ಲಕ್ಷ ಪುಸ್ತಕ ಇದೆ ಎಂದರು.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ನೆರವಿನೊಂದಿಗೆ ಸುಮಾರು 1.36 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಗ್ರಂಥಾಲಯ ನವೀಕರಿಸಲಾಗಿದೆ. ಕೋಲ್ಕತ್ತ ಹಾಗೂ ಚೆನ್ನೈ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಸುಸಜ್ಜಿತ ಕೇಂದ್ರ ಗ್ರಂಥಾಲಯವನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಸುಸಜ್ಜಿತ ಗ್ರಂಥಾಲಯದಲ್ಲಿ ಹಿರಿಯ ನಾಗರಿಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಆಸಕ್ತಿಗೆ ಅನುಗುಣವಾಗಿ ಪುಸ್ತಕಗಳನ್ನು ಓದಲು ಪೂರಕವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಆಸನ ವ್ಯವಸ್ಥೆಯೂ ಮಾಡಿದ್ದೇವೆ. ಗ್ರಂಥಾಲಯಗಳು ಪುಸ್ತಕ ಓದುವುದಕ್ಕೆ ಸೀಮಿತವಾಗಿರದೇ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಅನುಕೂಲವಾಗುವ ಪುಸ್ತಕ ಹೊಂದಿರುವ ಕೇಂದ್ರವಾಗಿ ಪರಿರ್ತಿಸಲು ಚಿಂತನೆ ನಡೆಸುತ್ತಿದ್ದೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಂಥಾಲಯ ಅಭಿವೃದ್ಧಿಗೆ ಸಹಕರಿಸಿ: ರಾಜ್ಯದ ಎಲ್ಲ ಸರ್ಕಾರಿ ಶಾಲೆ ಗಳಲ್ಲಿ ಗ್ರಂಥಾಲಯ ಪ್ರಾರಂಭಿಸಲಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 1204 ಪದವಿಪೂರ್ವ ಕಾಲೇಜುಗಳ ಪೈಕಿ 369 ಕಾಲೇಜುಗಳಲ್ಲಿ ಗ್ರಂಥಾಲಯ ಆರಂಭಿಸಲಿದ್ದೇವೆ. ರಾಜ್ಯದ ಎಲ್ಲ ಕೇಂದ್ರದಲ್ಲೂ ಗ್ರಂಥಾಲಯ ತೆರೆಯುವ ಯೋಜನೆ ಹೊಂದಿದ್ದು, ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಿ, ಗ್ರಂಥಾಲಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Advertisement

ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಪುಸ್ತಕ ಖರೀದಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ವಿದ್ಯೆ ಹಣ ಕೊಟ್ಟರೆ ಸಿಗುವಂತಹದಲ್ಲ, ಬದಲಾಗಿ ಕಷ್ಟಪಟ್ಟು ಓದಿದಾಗ ಲಭಿಸುತ್ತದೆ. ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ಆಸ್ತಿ ತೆರಿಗೆಯಿಂದಲೂ ಗ್ರಂಥಾಲಯಕ್ಕೆ ಅನುದಾನ ಬರಬೇಕಾಗಿದೆ. ಬಿಬಿಎಂಪಿಯಿಂದ 360 ಕೋಟಿ ಬರಬೇಕಿದ್ದು, 160 ಕೋಟಿ ಬಿಡುಗಡೆಯಾಗಿದೆ. ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಗ್ರಂಥಾಲಯ ಆರಂಭಿಸಲಿದ್ದೇವೆ ಎಂದು ಹೇಳಿದರು.

ಪುಸ್ತಕದಿಂದ ಪ್ರಜಾಪ್ರಭುತ್ವ ಗಟ್ಟಿ: ಸಾಹಿತಿ ಶೂದ್ರ ಶ್ರೀನಿವಾಸ ಮಾತನಾಡಿ, ಪ್ರತಿ ಶಾಲೆಗೊಂದು ಗ್ರಂಥಾಲಯ ಮಾಡುವುದರಿಂದ ಗ್ರಂಥಾಲಯ ಸಂಸ್ಕೃತಿ ಹೆಚ್ಚುತ್ತದೆ. ಪುಸ್ತಕ ಸಂಸ್ಕೃತಿ ಬೆಳೆದಾಗ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಸರ್ಕಾರವು ಗ್ರಂಥಾಲಯ ಇಲಾಖೆಯ ಅಭಿವೃದ್ಧಿಗೆ ಪ್ರತಿವರ್ಷ 150 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ, ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಡಾ.ಪಿ.ವೈ.ರಾಜೇಂದ್ರಕುಮಾರ್‌, ಕೆ.ಜಿ.ವೆಂಕಟೇಶ್‌, ಸಾಹಿತಿ ಬಿ.ಟಿ.ಲಲಿತನಾಯಕ್‌, ವಾರ್ತಾ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶು ಕುಮಾರ್‌, ಪೋಸ್ಟ್‌ ಮಾಸ್ಟರ್‌ ಜನರಲ್‌ ಕರ್ನಲ್‌ ವರ್ಮ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌, ಸಂಗೀತ ನಿರ್ದೇಶಕ ವಿ. ಮನೋಹರ್‌, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್‌ ಎಸ್‌.ಹೊಸಮತಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next