Advertisement

ಪಾಳು ಬೀಳುತ್ತಿವೆ ಗ್ರಂಥಾಲಯಗಳು

11:02 AM Nov 19, 2019 | Team Udayavani |

ಚಿತ್ತಾಪುರ: ವಿದ್ಯಾರ್ಥಿಗಳು ಹಾಗೂ ಯುವಸಮೂಹದ ಜ್ಞಾನ ಭಂಡಾರ ಹೆಚ್ಚಿಸುವ ಉದ್ದೇಶ ಹೊಂದಿದ ಗ್ರಂಥಾಲಯಗಳು ಸದ್ದಿಲ್ಲದೆ ಮುಚ್ಚುತ್ತಿವೆ.ಗ್ರಾಪಂ ಖರ್ಚು-ವೆಚ್ಚದಲ್ಲಿ ಗ್ರಂಥಾಲಯದ ಮಾಸಿಕನಿರ್ವಹಣೆಗೆ ಹಣ ಭರಿಸಲಾಗುತ್ತಿದ್ದರೂ ನಾಗರಿಕರಿಗೆ ಮಾತ್ರ ಗ್ರಂಥಾಲಯ ಸೌಲಭ್ಯ ಅಲಭ್ಯವಾಗಿದೆ.

Advertisement

ತಾಲೂಕಿನ 43 ಗ್ರಾಪಂ ವ್ಯಾಪ್ತಿಯಲ್ಲಿನ ಬಹುತೇಕ ಸಾರ್ವಜನಿಕ ಗ್ರಂಥಾಲಯಗಳ ಸ್ಥಿತಿ ಇದು. ಸ್ವಂತ ನೆಲೆಯಿಲ್ಲ. ಸರಿಯಾದ ಸಮಯಕ್ಕೆಪುಸ್ತಕಗಳು-ಪತ್ರಿಕೆಗಳ ಸರಬರಾಜು ಆಗುತ್ತಿಲ್ಲ.ಗ್ರಂಥಪಾಲಕರ ಕೊರತೆಯಿಂದ ಇರುವ ತಾತ್ಕಾಲಿಕ ಕಟ್ಟಡದ ಬೀಗ ತೆಗೆಯುವವರೂ ಇಲ್ಲದಂತಾಗಿ ಗ್ರಂಥಾಲಯಗಳು ಪಾಳು ಬಿದ್ದಿವೆ.

ತಾಲೂಕಿನ ಬಹುತೇಕ ಸಾರ್ವಜನಿಕಗ್ರಂಥಾಲಯಗಳಲ್ಲಿ ಸಿಬ್ಬಂದಿಯೇ ಇಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಎಲ್ಲ ಗ್ರಂಥಾಲಯಗಳು ದುಸ್ಥಿತಿಯತ್ತ ಸಾಗಿವೆ. ಪ್ರತಿ ಗ್ರಾಪಂ ಮಟ್ಟದಲ್ಲಿ ಗ್ರಂಥಾಲಯ ಇರಬೇಕು ಎನ್ನುವ ನಿಯಮವಿದೆ. ಆದರೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಸ್ವಂತ ಕಟ್ಟಡವಿಲ್ಲದೇ ಗ್ರಂಥಾಲಯಗಳು ಇರುವ ಕುರುಹುಗಳು ಇಲ್ಲ.

ಇರುವ ಕೆಲವು ಹಳ್ಳಿಗಳಲ್ಲಿ ಯುವಕ ಮಂಡಳಿ, ಸಮುದಾಯ ಭವನ, ಶಿಥಿಲಾವಸ್ಥೆಯ ಗ್ರಾಪಂ ಕಟ್ಟಡ, ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿವೆ. ಆದರೆಇವುಗಳಿಗೆ ಸೌಲಭ್ಯಗಳೇ ಇಲ್ಲ. ಕುರ್ಚಿ, ಟೇಬಲ್‌, ರ್ಯಾಕ್‌ ಸರಬರಾಜು ಸ್ಥಗಿತವಾಗಿದೆ. ಇನ್ನು ಪುಸ್ತಕಗಳನ್ನಂತೂ ಕೇಳುವಂತಿಲ್ಲ. ದಿನಪತ್ರಿಕೆ, ನಿಯತಕಾಲಿಕ, ಮಾಸಿಕ ಪತ್ರಿಕೆ, ವಿವಿಧ ಮ್ಯಾಗ್‌ಜಿನ್‌ಗಳು ಹಾಗೂ ವಿವಿಧ ಪುಸ್ತಕಗಳ ಖರೀದಿಯೂ ಸ್ಥಗಿತವಾಗಿದೆ. ಬೇಡಿಕೆ ಹೆಚ್ಚಿದ ಕಡೆ ಮಾತ್ರ ಎರಡು ಪತ್ರಿಕೆ, ಎರಡು ಮ್ಯಾಗ್‌ಜಿನ್‌ ಗಳನ್ನು ತರಲಾಗುತ್ತಿದೆ. ತಾಲೂಕಿನ ಕೆಲವು ಗ್ರಾಮಗಳಲ್ಲಿ ಮಾತ್ರ ಸ್ವಂತ ಕಟ್ಟಡದಲ್ಲಿ ಗ್ರಂಥಾಲಯಗಳು ನಡೆಯುತ್ತಿವೆ.

ಸಾತನೂರ, ಕೂಡದೂರ, ಮೂಡಬೂಳ, ಯಾಗಾಪುರ, ಕೋರವಾರ, ಸನ್ನತಿ, ಪೇಠಶಿರೂರ, ಗೋಟೂರ, ತೋನಸನಳ್ಳಿ, ಭೀಮನಳ್ಳಿ, ಹೊನಗುಂಟಾ, ದಿಗ್ಗಾಂವ, ಕಂದಗೋಳ, ರಾಜಾಪುರ, ಭಂಕೂರ, ಕಲ್ಲೂರ, ಗುಂಡಗುರ್ತಿ, ಅರಣಕಲ್‌ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡಗಳು ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ.

Advertisement

400 ರೂ. ಮಾಸಿಕ ವೆಚ್ಚ :  ಗ್ರಂಥಾಲಯ ನಿರ್ವಹಣೆಗೆ ಮಾಸಿಕ 400 ರೂ. ಗಳನ್ನು ಸರ್ಕಾರ ನೀಡುತ್ತಿದೆ. ಇದರಲ್ಲಿಯೇ ಸ್ಥಳೀಯ ಮಟ್ಟದ ಪತ್ರಿಕೆ, ರಾಜ್ಯ ಮಟ್ಟದ ಪತ್ರಿಕೆ, ನಿಯತಕಾಲಿಕೆಗಳನ್ನು ತರಿಸಿ ಓದುಗರಿಗೆ ನೀಡಬೇಕು. ಅಲ್ಲದೇ ವಾರ್ಷಿಕವಾಗಿ ಗ್ರಾ.ಪಂ ಬಜೆಟ್‌ನಿಂದ ಪುಸ್ತಕಗಳನ್ನು ಖರೀದಿ ಮಾಡಿ ಗ್ರಂಥಾಲಯಕ್ಕೆ ನೀಡಬೇಕು. ಗ್ರಂಥಪಾಲಕರಿಗೆ ಗೌರವ ಧನ ನೀಡಬೇಕು. ಆದರೆ ಇದು ಯಾವುದೂ ನಡೆಯುತ್ತಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಜನರ ಜ್ಞಾನ ಹೆಚ್ಚಿಸಬೇಕಾದ ಮೂಲ ಉದ್ದೇಶ ಬುಡಮೇಲಾಗಿದೆ.

ವಿವಿಧ ಪರೀಕ್ಷೆಗಳಿಗೆ ಸಂಬಂಧ ಪಟ್ಟಂತೆ ಸ್ಪರ್ಧಾತ್ಮಕ ಪುಸ್ತಕಗಳು ಗ್ರಂಥಾಲಯದಲ್ಲಿಲ್ಲ. ಇದ್ದ ಕಡೆ ಸರಿಯಾದ ನಿರ್ವಹಣೆ ಇಲ್ಲ. ಓದಿಕೊಳ್ಳಬೇಕಾದ ಪುಸ್ತಕಗಳು ಸಿಗುತ್ತಿಲ್ಲ. ಇದರಿಂದ ಗ್ರಾಮದಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಂತೋಷ ಬಿ. ಕೊಂಕನಳ್ಳಿ , ಕರವೇ ಅಧ್ಯಕ್ಷ, ತೆಂಗಳಿ

ಅಳ್ಳೋಳ್ಳಿ ಗ್ರಾಪಂನಿಂದ ಗ್ರಂಥಾಲಯಕ್ಕಾಗಿ ಎರಡು ಕೋಣೆಗಳನ್ನು ನೀಡಲಾಗಿದೆ. ಆದರೆ ಗ್ರಂಥಾಲಯ ಸಂಪೂರ್ಣ ಶಿಥಿಲಾವ್ಯವಸ್ಥೆಯಲ್ಲಿ ಇದೆ. ಮಳೆ ಬಂದರೆ ಸಾಕು ಸೋರುತ್ತದೆ. ಅದರಲ್ಲಿ ಒಂದು ಕೋಣೆ ಸಂಪೂರ್ಣ ಬಿದ್ದಿದೆ. ಇರುವ ಸಣ್ಣ ಕೋಣೆಗಳಲ್ಲಿ ಐದಾರು ಜನ ಬಂದು ಪತ್ರಿಕೆಗಳನ್ನು ಓದಿ ಹೋದ ಮೇಲೆ ಇನ್ನುಳಿದವರಿಗೆ ಅವಕಾಶ ಸಿಗುತ್ತದೆ.  ಶಿವಕುಮಾರ ಅನವಾರ್‌, ಅಳ್ಳೋಳ್ಳಿ ಗ್ರಂಥಾಲಯ ಮೇಲ್ವಿಚಾರಕ

 

-ಎಂ.ಡಿ. ಮಶಾಖ

Advertisement

Udayavani is now on Telegram. Click here to join our channel and stay updated with the latest news.

Next