Advertisement

ವಾಚನಾಲಯವಲ್ಲ ಜ್ಞಾನ ಮಂದಿರ

04:20 PM Nov 03, 2019 | Team Udayavani |

ಹೊನ್ನಾವರ: ನಗರ ಕೇಂದ್ರ ಸ್ಥಳದಲ್ಲಿರುವ ವಾಚನಾಲಯ ಜ್ಞಾನಮಂದಿರದಂತೆ ಶೋಭಿಸುತ್ತಿದೆ. ಬಾಗಿಲಲ್ಲಿಯೇ ಚಪ್ಪಲಿಗಳನ್ನು ಬಿಟ್ಟು ಒಳಬಂದು ಮೊಬೈಲ್‌ ಗಳನ್ನು ಸ್ವಿಚ್‌ ಆಫ್‌ ಮಾಡಿ, ಸಹಿ ಮಾಡಿ, ಸ್ವಂತ ವಸ್ತುಗಳನ್ನು ಗುರುತಿಸಿದ ಸ್ಥಳದಲ್ಲಿಟ್ಟು ಮುಂದೆ ಬರಬೇಕು. ಇಲ್ಲವಾದರೆ ವಿನಯದ ಸೂಚನೆಯ ಧ್ವನಿ ಕೇಳಿಬರುತ್ತದೆ.

Advertisement

ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ, ಸಂಜೆ 4ರಿಂದ 7:30ರವರೆಗೆ ತೆರೆದಿರುವ ಈ ಜ್ಞಾನಮಂದಿರದಲ್ಲಿ 26,603 ಪುಸ್ತಕಗಳಿವೆ. 22 ದಿನಪತ್ರಿಕೆಗಳು ಬರುತ್ತವೆ. ಎಲ್ಲ ವಾರಪತ್ರಿಕೆಗಳು ಜೊತೆಯಲ್ಲಿ ಇಂಗ್ಲಿಷ್‌ ದಿನಪತ್ರಿಕೆಗಳು, ಡೈಜೆಸ್ಟ್‌ ಮೊದಲಾದವುಗಳಿವೆ. ಪತ್ರಿಕೆ ಓದಲು ಸದಸ್ಯರಾಗಬೇಕಿಲ್ಲ, 5ಸಾವಿರ ರೂ. ಗಳನ್ನು ಪತ್ರಿಕೆಗಳ ಖರೀದಿಗಾಗಿ ವೆಚ್ಚ ಮಾಡಲಾಗುತ್ತಿದೆ. ಪುಸ್ತಕ ಓದಲು ಒಯ್ಯುವ 1,490 ಸದಸ್ಯರಿದ್ದಾರೆ. ಒಂದು ಬಾರಿ ಕೇವಲ 112 ರೂ. ನೀಡಿ, ಖಾಯಂ ಸದಸ್ಯತ್ವ ಪಡೆದವರು ಎಲ್ಲ ದಿನಗಳಲ್ಲೂ ಪತ್ರಿಕೆ ಓದಬಹುದು. ಮೂರು ಪುಸ್ತಕಗಳನ್ನು ಪಡೆದು ಓದಿ, ಎರಡು ವಾರಗಳಲ್ಲಿ ಹಿಂದಿರುಗಿಸಬೇಕಾದದ್ದು ಕಡ್ಡಾಯ. ರಾಶಿ ಹೊಸ ಪುಸ್ತಕಗಳು ಬಂದಿವೆ. ಇವುಗಳನ್ನು ಹೊಂದಿಸಲು ಸ್ಟ್ಯಾಂಡ್ ಬರಬೇಕಾಗಿದೆ.

ಇ-ಓದುಗರಿಗಾಗಿ 5 ಕಂಪ್ಯೂಟರ್‌ಗಳು ಸದ್ಯ ಸೇರ್ಪಡೆಯಾಗಲಿದೆ. ಮಕ್ಕಳನ್ನು ಕರೆತಂದರೆ ಅವರಿಗಾಗಿ ಪುಟ್ಟ ಟೇಬಲ್‌, 4ಕುರ್ಚಿ ಮತ್ತು ಮಕ್ಕಳ ಪುಸ್ತಕಗಳಿವೆ. ನಿತ್ಯ ಬೆಳಗ್ಗೆ, ಸಂಜೆ ಪತ್ರಿಕೆ ಓದಲು, ಪುಸ್ತಕ ಪಡೆಯಲು ನೂರು ಜನ ಬರುತ್ತಾರೆ. ನಿಶ್ಯಬ್ಧವಾಗಿ ಪತ್ರಿಕೆ ಓದುತ್ತಾರೆ. ಪ್ರಮುಖ ಸಾಹಿತಿ, ಕವಿಗಳ ಕೃತಿಗಳು ವರ್ಗೀಕರಣವಾಗಿದೆ. ಜಿಲ್ಲೆಯ ಮತ್ತು ಹೊನ್ನಾವರದ ಕವಿ, ಸಾಹಿತಿಗಳ ಕೃತಿಗಳನ್ನು ಒಂದೆಡೆ ಇಡಲಾಗಿದೆ. ಗ್ರಂಥಪಾಲ ಜಿ.ಎಂ. ಹೆಗಡೆ ಮತ್ತು ಸಹಪಾಲಕಿ ಮಂಗಲಾ ಮೇಸ್ತ ಇಬ್ಬರೇ ಇದ್ದರೂ ಸ್ವತ್ಛತೆಯಿಂದ ಆರಂಭಿಸಿ ವ್ಯವಸ್ಥಿತವಾಗಿಡುವ ಎಲ್ಲ ಕೆಲಸವನ್ನು ಇವರೇ ನಿರ್ವಹಿಸುತ್ತಾರೆ. ವಾಚನಾಲಯ ತಮ್ಮದೆಂಬ ಅಭಿಮಾನದಿಂದ ಕೆಲಸ ಮಾಡುತ್ತಾರೆ.

ತಾಲೂಕಿನಲ್ಲಿ 27 ಗ್ರಾಪಂಗಳಲ್ಲೂ ವಾಚನಾಲಯಗಳಿವೆ. ಅಲ್ಲಿ ಓದುಗರ ಸಂಖ್ಯೆ ಕಡಿಮೆ, ಹೊಸ ಪುಸ್ತಕಗಳ ಕೊರತೆ ಇದ್ದರೂ ತಾಲೂಕು ಕೇಂದ್ರದ ವಾಚನಾಲಯ ಇದ್ದರೆ ಹೀಗಿರಬೇಕು ಅನ್ನುವಂತಿದೆ. ಯುವ ಜನತೆ ಇದರ ಪ್ರಯೋಜನ ಪಡೆಯಬೇಕಾಗಿದೆ ಹೆಚ್ಚು ಜನ. ಕವಿ ರವೀಂದ್ರನಾಥ ಠಾಗೋರ ಹೆಸರಿಟ್ಟುಕೊಂಡು ಶತಮಾನದ ಹಿಂದೆ ಆರಂಭವಾಗಿದ್ದ ವಾಚನಾಲಯ ಪೇಟೆ ಮಧ್ಯೆ ಗೋಪಾಲಕೃಷ್ಣ ದೇವಸ್ಥಾನದ ಅಟ್ಟದ ಮೇಲೆ ಬಹುಕಾಲ ನಡೆದಿತ್ತು.

ನಂತರ ಓದುಗರ ಸಂಖ್ಯೆ ಹೆಚ್ಚಿದ ಮೇಲೆ ಟಪ್ಪರ್‌ ಹಾಲ್‌ ಕಟ್ಟಡಕ್ಕೆ ಸ್ಥಳಾಂತರವಾಯಿತು. ಹೊನ್ನಾವರ ಜಿಲ್ಲಾ ಕೇಂದ್ರವಾಗಿದ್ದ ಕಾಲದಲ್ಲಿ ಟಪ್ಪರ್‌ ಎಂಬ ಬ್ರಿಟೀಷ್‌ ಅಧಿಕಾರಿ ಕಲೆಕ್ಟರ್‌ ಆಗಿದ್ದರು. ಆಗ ಎರಡನೇ ಮಹಾಯುದ್ಧದ ಕಾಲ. ಅಕ್ಕಿಗೆ ಕೊರತೆಯಾಗಿ ಜನ ಹಸಿವಿನಿಂದ ಸಾಯತೊಡಗಿದರು. ಇದನ್ನು ತಪ್ಪಿಸಲು ಮಾನವೀಯ ದೃಷ್ಟಿಯಿಂದ ಟಪ್ಪರ್‌ ಸಾಹೇಬರು ಹೊನ್ನಾವರ ವ್ಯಾಪಾರಿಗಳಿಗೆ ರಂಗೂನ್‌ನಿಂದ (ಮಯಾನ್ಮಾರ್‌) ಅಕ್ಕಿ ತರಿಸಿಕೊಟ್ಟರು. ಇದರಿಂದ ಸಿಟ್ಟುಗೊಂಡ ಬ್ರಿಟೀಷ್‌ ಸರ್ಕಾರ ಅವರನ್ನು ವರ್ಗಾಯಿಸಿತು. ಬಂದರದಲ್ಲಿ ಸಾವಿರಾರು ಜನ ಸೇರಿ ಕಣ್ಣೀರು ಹರಿಸುತ್ತ ಟಪ್ಪರ್‌ರನ್ನು ಬೀಳ್ಕೊಟ್ಟರು. ಆಗ ಪ್ರಮುಖರಾಗಿದ್ದ ಡಾ| ಕಿರಣ್‌ ಬಳಕೂರರ ಅಜ್ಜ ಕೃಷ್ಣಪ್ಪ ಬಳಕೂರರು ಮತ್ತು ವಡಗೆರೆ ರಾಘವೇಂದ್ರ ರಾಯರು ಟಪ್ಪರ್‌ ಸಾಹೇಬನ ನೆನಪಿಗೆ ಕಟ್ಟಡವನ್ನು ಕಟ್ಟಿಸಿ, ಸಾರ್ವಜನಿಕ ಬಳಕೆಗಾಗಿ ಮುಕ್ತವಾಗಿಟ್ಟಿತ್ತು. ಅಲ್ಲಿ ಪಪಂ ಆಕ್ರಮಿಸಿತ್ತು. ಜನ ಆಕ್ಷೇಪಿಸಿ ಕೋರ್ಟಿಗೆ ಹೋದರು. ಬೇರೆ ಕಟ್ಟಡ ಕಟ್ಟಿಸಿ ಕೊಡುವ ಭರವಸೆ ಮೇಲೆ ಪ.ಪಂ ಅಲ್ಲಿ ಉಳಿಯಿತು. ಹೊಸ ಕಟ್ಟಡದಲ್ಲಿ ವಾಚನಾಲಯ ಆರಂಭವಾಗಿ ಸರ್ಕಾರಿ ಸ್ವತ್ತಾಗಿ ಮುಂದುವರಿದಿದ್ದರೂ ಹಿಂದಿನ ಇತಿಹಾಸದ ಮೌಲ್ಯಗಳಿಗೆ ತಕ್ಕಂತೆ ಜ್ಞಾನಮಂದಿರವಾಗಿದೆ ಎಂಬುದು  ಹೊನ್ನಾವರಕ್ಕೆ ಹೆಮ್ಮೆ.

Advertisement

 

-ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next