ಈ ಊರಿನ ಹೆಸರು ಕೇಳಿದಾಕ್ಷಣ ನೀವು ಗಾಬರಿಯಾಗುತ್ತೀರಿ! ಏಕೆಂದರೆ ಈ ಊರಿನ ಹೆಸರಿನಲ್ಲಿ 58 ಅಕ್ಷರಗಳಿವೆ. ಬಹುಶಃ ಒಂದೇ ಉಸಿರಿನಲ್ಲಿ ಉಸುರಿ ಮುಗಿಯದಷ್ಟು! ಬ್ರಿಟನ್ ದೇಶದ ವೇಲ್ಸ್ ನ ಆಂಗ್ಲೇಸಿ ದ್ವೀಪದಲ್ಲಿರುವ ಒಂದು ಹಳ್ಳಿ-
Llanfairpwllgwyngyngogerychwyrndrowllllantysiliogogogoch...ಇಷ್ಟುದ್ದದ ಹೆಸರಿನಿಂದ ಕರೆಯುವುದು ಕಷ್ಟವೆಂದು ಸ್ಥಳೀಯರು ಲಾನ್ಫೇರ್ ಪಿಜಿ (Llanfair PG) ಎಂದು ಸರಳೀಕರಿಸಿಕೊಂಡಿದ್ದಾರೆ. 2011 ರ ಜನಗಣತಿಯ ಪ್ರಕಾರ ಇಲ್ಲಿ ವಾಸಿಸುವ ಜನಸಂಖ್ಯೆ 3,107. ಅದರಲ್ಲಿ ಶೇ.71 ರಷ್ಟು ಮಂದಿ ವಲ್ಶ್ ಭಾಷೆಯಲ್ಲಿ ಮಾತನಾಡುತ್ತಾರೆ. 1860 ರಲ್ಲಿ ಈ ಊರಿಗೆ ದೊಡ್ಡ ಹೆಸರು ಬಂದಿದ್ದು, 58 ಅಕ್ಷರಗಳಿಂದ. ಇದು ಯುರೋಪ್ ನ ಅತಿ ದೊಡ್ಡ ಹೆಸರಿನ ಊರು ಹಾಗೂ ವಿಶ್ವದ ಅತಿ ದೊಡ್ಡ ಹೆಸರಿನ ಎರಡನೆಯ ಊರು ಎಂದು ಖ್ಯಾತಿ ಪಡೆದಿದೆ. (ವಿಶ್ವದಲ್ಲೇ ಅತಿ ಹೆಚ್ಚಿನ ಎಂದರೆ 84 ಅಕ್ಷರಗಳ ಊರು ಇರುವುದು ನ್ಯೂಜಿಲೆಂಡಿನ ನಾರ್ತ್ ಐಸ್ ಲ್ಯಾಂಡೀನಲ್ಲಿ. ಕ್ಲಿಷ್ಟಕರವಾದ ಹೆಸರನ್ನು ಉಚ್ಚರಿಸಲು ಸಾಧ್ಯವಾಗದೆ ಅವರು ಟೌಮಾಟ ಎಂಬ 7 ಅಕ್ಷರಗಳಿಂದ ಕರೆಯುತ್ತಾರೆ).
ಈ ಊರು ಕ್ರಿ.ಪೂ 4000ದಲ್ಲೇ ಅಸ್ತಿತ್ವದಲ್ಲಿತ್ತು ಎನ್ನಲಾಗಿದ್ದು, ಕೃಷಿ ಮತ್ತು ಮೀನುಗಾರಿಕೆಯನ್ನೇ ನಂಬಿಕೊಂಡಿತ್ತು. ಬೋಟ್ ಮೂಲಕ ಮಾತ್ರ ಈ ದ್ವೀಪವನ್ನು ತಲುಪಲು ಸಾಧ್ಯವಿತ್ತು. ರೋಮನ್ ಆಡಳಿತ ಕೊನೆಗೊಂಡ ಬಳಿಕ ಗ್ವಿನೇಡ್ ಸಾಮ್ರಾಜ್ಯ ಈ ನಗರವನ್ನಾಳಿತು. ರಾಜನ ಆಡಳಿತವಿದ್ದು 1563 ಸುಮಾರಿಗೆ ಇಲ್ಲಿ ಕೇವಲ 80 ಜನ ವಾಸಿಸತ್ತಿದ್ದರು.
16 ನೇ ಶತಮಾನ ಆರಂಭವಾಗುತ್ತಲೇ ಎಸ್ಟೇಟ್ ಪದ್ಧತಿ ಆರಂಭವಾಗುತ್ತಲೇ, ಶ್ರೀಮಂತರು ಜಾಗವನ್ನು ಆಕ್ರಮಿಸಿಕೊಂಡರು. ಊಳಿಗಮಾನ್ಯ ಪದ್ಧತಿ ಜಾರಿಗೆ ಬಂದಿತು. ರೈತರು ತಾವು ಬೆಳೆದ ಪದ್ಧತಿಯಲ್ಲಿ ಬಹುಪಾಲು ಒಡೆಯರಿಗೇ ನೀಡಬೇಕಿತ್ತು. ಅದರ ಪರಿಣಾಮ ಜಾಗದ ಒತ್ತುವರಿ ನೆಡೆಯಿತು. ಅದರ ತೀವ್ರತೆ ಎಷ್ಟಿತ್ತೆಂದರೆ, 1844 ರ ಹೊತ್ತಿಗೆ ಇಡೀ ಹಳ್ಳಿಯ ಶೇ.92 ಭಾಗ ಮೂವರು ಸಿರಿವಂತರ ಕೈಯಲ್ಲಿತ್ತು!
ಕಾರಣವಿಷ್ಟೇ
ಕ್ರಮೇಣ ಜನಸಂಖ್ಯೆ ಹೆಚ್ಚಿತು. ಪೂರಕವಾಗಿ ಹೆಚ್ಚು ಮನೆಗಳೂ ನಿರ್ಮಾಣಗೊಂಡವು. 1826ರ ಬಳಿಕ ಲಂಡನ್ ಸೇರದಂತೆ ಹಲವು ನಗರಗಳಿಗೆ ಸೇರುವ ಸೇತುವೆ ನಿರ್ಮಾಣಗೊಂಡು, ಆಧುನಿಕತೆಯೊಂದಿಗೆ ಸಂಪರ್ಕ ಪಡೆದುಕೊಂಡಿತು. ಹಳ್ಳಿಯಲ್ಲಿ ರೈಲುಮಾರ್ಗವೂ ಹರಿದು ಹೋದದ್ದರಿಂದ ನಿಲ್ದಾಣದ ಆಸುಪಾಸಿನ ಪ್ರದೇಶ ವಾಣಿಜ್ಯಕೇಂದ್ರವಾಗಿ ಬದಲಾಯಿತು. ಬೇರೆ ಪ್ರದೇಶದ ಉದ್ಯಮಿಗಳನ್ನೂ ಇತ್ತ ಆಕರ್ಷಿಸಿತು.
19 ನೇ ಶತಮಾನದ ಆರಂಭದಲ್ಲಿ ಹಳ್ಳಿಗೆ ಈ ಉದ್ದನೆಯ ಹೆಸರಿನ ನಾಮಕರಣ ಮಾಡಲಾಯಿತು. ಇದರ ಮೂಲ ಉದ್ದೇಶ ಹೆಚ್ಚಿನ ವ್ಯಾಪಾರಿಗಳನ್ನು ಮತ್ತು ಪ್ರವಾಸಿಗರನ್ನು ತನ್ನತ್ತ ಸೆಳೆಯುವುದಾಗಿತ್ತು. ರೈಲು ನಿಲ್ದಾಣಕ್ಕೂ ಅದೇ ಹೆಸರು ನೀಡಿ ಪ್ರಯಾಣಿಕರನ್ನು ಆಕರ್ಷಿಸಿತು. ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿಯೂ ಹೆಸರು ಬರೆಸಿಕೊಂಡಿತು.
ತನ್ನ ಇಷ್ಟುದ್ದದ ಹೆಸರಿಗೆ .com ಸೇರಿಸಿ ಹಳ್ಳಿಯ ಸಮಗ್ರ ಮಾಹಿತಿ ನೀಡುವ ವೆಬ್ ಸೈಟ್ ಕೂಡ ತೆರೆದಿದೆ. ಊರಿನ ಪ್ರವಾಸಿ ತಾಣಗಳ ಬಗ್ಗೆ, ವಿಶೇಷತೆಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ದೊರೆಯುತ್ತದ. ಉದ್ದ ಹೆಸರಿನ ಮುಂದೆ ನಿಂತು ಸೆಲ್ಫಿ ತೆಗೆಸಿಕೊಳ್ಳುವವರ ಸಂಖ್ಯೆ ಕಡಿಮೆಯಿಲ್ಲವಂತೆ!
ವಲ್ಡ್ ಭಾಷೆಯಲ್ಲಿ ಈ ಹೆಸರಿನ ಅರ್ಥ “ಕೆಂಪು ಗುಹೆಯ ಬಳಿ ಸುಂಟರಗಾಳಿಯಿಂದ ಉಂಟಾದ ಬಿಳಿ ಹುಲ್ಲುಗಾವಲಿನಲ್ಲಿರುವ ಸೈಂಟ್ ಮೇರಿ ಚರ್ಚ್”. ಸ್ಥಳೀಯ ನಿವಾಸಿಯಾಗಿದ್ದ ದರ್ಜಿಯೊಬ್ಬ ಈ ಹೆಸರು ಇಟ್ಟಿದ್ದ. ಕೊನೆಗೆ ಆತ ಸಾಯುವವರೆಗೂ ಹೆಸರಿನ ಅರ್ಥವನ್ನು ನಿಗೂಢವಾಗಿಯೇ ಇಟ್ಟಿದ್ದ ಎನ್ನಲಾಗಿದೆ. ಇಂದು ಈ ಊರಿನ ಹೆಸರನ್ನು ಸ್ವಲ್ಪವೂ ತಪ್ಪಿಲ್ಲದ ತಡವರಿಸದೆ ಸ್ಪಷ್ಟವಾಗಿ ಉಚ್ಚರಿಸುವವರು ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಕೇಂದ್ರದವರು ಮಾತ್ರ!
ಸವಿತಾ (ತರಂಗ-ಸೆಪ್ಟೆಂಬರ್ 6)