Advertisement

ಪ್ರಚೋದನಕಾರಿ ಭಾಷಣಕಾರರನ್ನು ಮಟ್ಟ ಹಾಕಿ

04:04 PM Jun 23, 2017 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಸಾಮರಸ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡುವವರನ್ನು ಕಾನೂನು ರೀತಿಯಲ್ಲಿ ಮಟ್ಟ ಹಾಕುವಂತೆ ಪೊಲೀಸ್‌ ಇಲಾಖೆಗೆ ಮನವಿ ಮಾಡಿರುವುದಾಗಿ ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಯಾವುದೇ ಧರ್ಮ, ಸಂಘಟನೆಯವರು ಕೂಡ ಪ್ರಚೋದನಕಾರಿ ಭಾಷಣ ಮಾಡಬಾರದು. ಆಗಾಗ ನಡೆದ ಶಾಂತಿಸಭೆಗಳಲ್ಲಿ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದರೂ ಪ್ರಚೋದನಕಾರಿ ಭಾಷಣಗಳು ಮುಂದು ವರಿ ಯುತ್ತಲೇ ಇವೆ. ಧಾರ್ಮಿಕ ಮುಖಂಡರು ಧರ್ಮ ಕಾರ್ಯದಲ್ಲಿ ಇರಬೇಕೇ ಹೊರತು, ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಸಮಾಜದ ದೃಷ್ಟಿಯಿಂದ ಹಿತವಲ್ಲ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಬಗ್ಗೆ ಹಲವು ಪ್ರಕರಣಗಳು ದ.ಕ. ಜಿಲ್ಲೆಯಲ್ಲಿ ದಾಖಲಾಗಿದ್ದರೂ, ಕೆಲವೇ ದಿನಗಳಲ್ಲಿ ಅವುಗಳಿಗೆ ಪೊಲೀಸರು ಬಿ ರಿಪೋರ್ಟ್‌ ನೀಡುತ್ತಿರುವುದು ಪ್ರಶ್ನಾರ್ಹ ಎಂದರು.

ರೈ ನಡೆ ಸರಿಯಾಗಿದೆ
ದ.ಕ. ಜಿಲ್ಲೆಯ ಕಾನೂನು ಸುವ್ಯವಸ್ಥೆ ನೋಡಿಕೊಳ್ಳ ಬೇಕಾದ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕಾನೂನು ಸುವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನೇ ದೊಡ್ಡ ಅಪರಾಧ ಎಂದು ಬಿಂಬಿಸುವ ಪ್ರಯತ್ನ ಪ್ರಸ್ತುತ ನಡೆಯುತ್ತಿದೆ. ಉಸ್ತುವಾರಿ ಮಂತ್ರಿಗಳು ಅಧಿಕಾರಿಗಳಿಗೆ ಹೇಳಿದ್ದೇ ತಪ್ಪು ಎಂಬ ರೀತಿಯಲ್ಲಿ ಬಿಂಬಿಸುತ್ತಿರುವುದು ಖಂಡನೀಯ. ಮಂತ್ರಿಗಳಿಗೆ ಉನ್ನತ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಅವಕಾಶಗಳಿವೆ ಎಂದು ಐವನ್‌ ಸಮರ್ಥಿಸಿಕೊಂಡರು.

ಕೇಂದ್ರದಿಂದ ರೈತರ ಸಾಲ ಮನ್ನಾ ಮಾಡಿಸಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ರೈತರ ಕಂಗಳಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ. ಆದರೆ ಇದು ಬಿಜೆಪಿಯ ಹೋರಾಟದಿಂದಾಗಿ ಸಾಧ್ಯವಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳುತ್ತಿದ್ದಾರೆ. ಅವರಿಗೆ ನಿಜಕ್ಕೂ ರೈತರ ಬಗ್ಗೆ ಕಾಳಜಿ ಇದ್ದರೆ, ರೈತರ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡುವ ಬಗ್ಗೆ ಹೋರಾಟ ನಡೆಸಿ, ರೈತರಿಗೆ ಸಹಾಯ ಮಾಡುವ ತಾಕತ್ತು ಪ್ರದರ್ಶಿಸಲಿ ಎಂದು ಆಗ್ರಹಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮನಪಾ ಉಪಮೇಯರ್‌ ರಜನೀಶ್‌, ಸ್ಥಾಯೀ ಸಮಿತಿ ಅಧ್ಯಕ್ಷರಾದ ಪ್ರತಿಭಾ ಕುಳಾç, ನಾಗವೇಣಿ, ಮುಖಂಡರಾದ ಮನುರಾಜ್‌, ನಝೀರ್‌ ಬಜಾಲ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next