Advertisement
ಹೊಟ್ಟೆ ನೋವು ಕಾಡಿತ್ತುನಗರದ ಸೈಂಟ್ ಆ್ಯನ್ಸ್ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸ್ವೀಟಿ ಸದಾ ಚಟುವಟಿಕೆಯ ಹುಡುಗಿ, ಓದುವುದರಲ್ಲೂ ಮುಂದಿದ್ದಳು. ಎಸ್‌ಎಸ್ ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿ ಉನ್ನತ ಶಿಕ್ಷಣದ ಕನಸು ಕಾಣುತ್ತಿದ್ದ ಸ್ವೀಟಿಗೆ ಕಳೆದ ಒಂದು ತಿಂಗಳಿನಿಂದ ಜ್ವರ, ಹೊಟ್ಟೆನೋವು ಆಗಾಗ ಕಾಡುತ್ತಿತ್ತು. ಸ್ಥಳೀಯ ವೈದ್ಯರು ನೀಡಿದ ಔಷಧದಿಂದ ಉಪಶಮನ ಹೊಂದುತ್ತಿದ್ದಳು. ಪರೀಕ್ಷೆಯ ಒತ್ತಡದಿಂದ ಉಂಟಾದ ಅನಾರೋಗ್ಯ ಇದಾಗಿರಬಹುದು ಎಂದು ಮನೆಯವರು ಭಾವಿಸಿದ್ದರು.
ಪತ್ತೆಯಾದ ರಕ್ತ ಕ್ಯಾನ್ಸರ್
ಪರೀಕ್ಷೆ ಪ್ರಾರಂಭಗೊಂಡ ಬಳಿಕವೂ ಅನಾರೋಗ್ಯ ಕಾಡಿದ್ದು, ಬುಧವಾರ ಬೆಳಗ್ಗೆ ಹೊಟ್ಟೆ ನೋವು ಉಲ್ಬಣಿಸಿತ್ತು. ಬೆಳಗ್ಗೆ ಆರರ ವೇಳೆಗೆ ಸ್ವೀಟಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ರಕ್ತ ಪರೀಕ್ಷೆ ಸೇರಿದಂತೆ ವಿವಿಧ ತಪಾಸಣೆಗಳಿಗೆ ಒಳಪಡಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಗಳ ಫಲಿತಾಂಶ ಸಂಜೆಯ ವೇಳೆಗೆ ಸಿಗಲಿದ್ದುದರಿಂದ ಮಂಗಳೂರಿನ ರೊಸಾರಿಯೋ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಹಿಂದಿ ಪರೀಕ್ಷೆಗೆ ಹಾಜರಾಗಿ ಉತ್ತರಿಸಿ ಆಸ್ಪತ್ರೆಗೆ ವಾಪಸಾಗಿದ್ದಳು. ಸಂಜೆ ವೇಳೆಗೆ ಆಕೆಗೆ ಆರೋಗ್ಯ ಸ್ಥಿತಿ ವಿಷಮಿಸಿ ತುರ್ತು ನಿಗಾ ಘಟಕಕ್ಕೆ ವರ್ಗಾಯಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ತಡರಾತ್ರಿ ಮೃತಪಟ್ಟಿದ್ದಾಳೆ. ಸ್ವೀಟಿಯ ವೈದ್ಯಕೀಯ ಪರೀಕ್ಷೆಯ ವರದಿ ಹೆತ್ತವರಿಗೆ ಗುರುವಾರ ಸಂಜೆ ವೇಳೆಗೆ ಸಿಕ್ಕಾಗ ಆಕೆ ರಕ್ತ ಕ್ಯಾನ್ಸರ್ (ಲ್ಯುಕೇಮಿಯಾ)ನಿಂದ ಬಳಲುತ್ತಿದ್ದ ಮಾಹಿತಿ ಸಿಕ್ಕಿದೆ. ಶುಕ್ರವಾರ ಕೊನೆಯ ಸಮಾಜ ವಿಜ್ಞಾನ ಪರೀಕ್ಷೆ ಮುಗಿಸಿ ಸಂತೋಷದಿಂದ ಕುಣಿಯಬೇಕಾಗಿದ್ದ ಎಳೆ ಜೀವವನ್ನು ಲ್ಯುಕೇಮಿಯಾ ಬಲಿ ತೆಗೆದುಕೊಂಡಿದೆ. ಅಂಗಡಿ ವ್ಯಾಪಾರ ನಡೆಸುವ ತಂದೆ ಸ್ಟೀಫನ್ ಡಿ’ಸೋಜಾ, ಖಾಸಗಿ ಆಸ್ಪತ್ರೆ ಉದ್ಯೋಗಿಯಾಗಿರುವ ತಾಯಿ ಗ್ರೇಸಿ ಡಿ’ಸೋಜಾ ಮತ್ತು ಹತ್ತು ವರ್ಷ ವಯಸ್ಸಿನ ಸಹೋದರ ಶಾನ್‌ನನ್ನು ಸ್ವೀಟಿ ಆಗಲಿದ್ದಾಳೆ.