ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಕುರಿತು ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಸೋನಿಯಾ ಗಾಂಧಿಗೆ ಬರೆದಿದ್ದರು ಎನ್ನಲಾದ ನಕಲಿ ಪತ್ರ ಪ್ರಕಟಿಸಿರುವ ಕುರಿತಂತೆ ಪೋಸ್ಟ್ ಕಾರ್ಡ್ ವೆಬ್ ಪೋರ್ಟಲ್ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆಯನ್ನು ಸಿಐಡಿ ಪೊಲೀಸರು ಬುಧವಾರ ವಿಚಾರಣೆ ನಡೆಸಿದ್ದಾರೆ.
ಅಪರಾಹ್ನ 12ಕ್ಕೆ ಸಿಐಡಿ ಕಚೇರಿಗೆ ಆಗಮಿಸಿದ ಮಹೇಶ್ ಹೆಗ್ಡೆಯನ್ನು ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿದರು. ತಮ್ಮ ವೆಬ್‌ಪೋರ್ಟ್‌ಲ್‌ನಲ್ಲಿ ಪ್ರಕಟಗೊಂಡಿರುವ ಎಂ.ಬಿ.ಪಾಟೀಲ್ ಅವರು ಸೋನಿಯಾ ಗಾಂಧಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಹೇಗೆ ಸಿಕ್ಕಿತು?. ಇದು ನಕಲಿಯೋ? ಅಸಲಿಯೋ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಎಂ.ಬಿ.ಪಾಟೀಲ್ ಅವರು ಸೋನಿಯಾ ಗಾಂಧಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿತ್ತು. ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಸ್ವತ: ಗೃಹ ಸಚಿವರೇ ಪ್ರತಿಕ್ರಿಯೆ ನೀಡಿದ್ದು, ಆ ರೀತಿಯ ಯಾವುದೇ ಪತ್ರವನ್ನು ತಾವು ಬರೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ, ವಿಜಯಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾಹಿಸಲಾಗಿತ್ತು.
ಸರ್ಕಾರದ ವಿರುದ್ಧ ಕಿಡಿ: ಈ ಮಧ್ಯೆ, ಮಹೇಶ್ ವಿಕ್ರಂ ಹೆಗ್ಡೆ ವಿಚಾರಣೆ ವಿರೋಧಿಸಿ ಸಂಸದೆ ಶೋಭಾ ಕರಂದ್ಲಾಜೆ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯ ಸರ್ಕಾರ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದೆ. ಗಾಂಧಿ ಕುಟುಂಬದ ಸುಳ್ಳನ್ನು ಬಹಿರಂಗ ಪಡಿಸಿದ್ದಕ್ಕೆ ಮಹೇಶ್ ಹೆಗ್ಡೆಯನ್ನು ಬಂಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೆ, ಕೆಲ ಬಿಜೆಪಿ ಮುಖಂಡರೂ ಖಂಡನೆ ವ್ಯಕ್ತಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ವಿಕ್ರಂ ಹೆಗ್ಡೆಯ ವಿಚಾರಣೆ ನಡೆಸಲಾಗಿದೆ. ಅವರನ್ನು ಬಂಧಿಸಿಲ್ಲ. ವಿಚಾರಣೆ ಬಳಿಕ ಪತ್ರದ ಬಗ್ಗೆ ಸ್ಪಷ್ಟತೆ ತಿಳಿಯಲಿದೆ.
-ಹೇಮಂತ್ ನಿಂಬಾಳ್ಕರ್, ಐಜಿಪಿ, ಸಿಐಡಿ ಆರ್ಥಿಕ ಅಪರಾಧಗಳ ವಿಭಾಗ.