ಬೆಂಗಳೂರು: ಹಜ್ ಭವನದಲ್ಲಿಯೇ ಯಾತ್ರಾರ್ಥಿಗಳಿಗೆ ಎಮಿಗ್ರೇಷನ್ ಮತ್ತು ಕಸ್ಟಮ್ಸ್ ಕ್ಲಿಯರೆನ್ಸ್ ನಡೆಸುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಹಜ್‌ಭವನದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿ ಹಮ್ಮಿಕೊಂಡಿದ್ದ ಹಜ್ ಯಾತ್ರೆ-2017ರ ವಿಮಾನಯಾನ ಹಾಗೂ ಯಾತ್ರಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಎಮಿಗ್ರೇಷನ್ ಪ್ರಕ್ರಿಯೆಯೂ ಹಜ್ ಕ್ಯಾಂಪ್‌ನಲ್ಲಿ ನಡೆಯುತ್ತಿತ್ತು. ಆದರೆ, ಪ್ರಸ್ತುತ ಸಾಲಿನಲ್ಲಿ ಕೇಂದ್ರ ಸರ್ಕಾರವು ಎಮಿಗ್ರೇಷನ್ ವ್ಯವಸ್ಥೆಯನ್ನು ವಿಮಾನ ನಿಲ್ದಾಣದ ಹಜ್ ಟರ್ಮಿನಲ್ನಲ್ಲಿಯೇ ಮಾಡುವಂತೆ ನಿಯಮ ಮಾಡಿದೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ಹಿಂದಿನ ಸಂಪ್ರದಾಯವನ್ನು ಮುಂದುವರೆಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಸುಮಾರು 344 ಹಜ್ ಯಾತ್ರಿಗಳು ಇಂದು ಮೊದಲ ಹಂತದಲ್ಲಿ ಯಾತ್ರೆಗೆ ಹೋಗುತ್ತಿದ್ದಾರೆ. ಸುರಕ್ಷಿತವಾಗಿ ಯಾತ್ರೆ ಮುಗಿಸಿಕೊಂಡು ಬರಲಿ. ಯಾತ್ರೆ ವೇಳೆ ನಮ್ಮ ಸರ್ಕಾರಕ್ಕೆ ಒಳ್ಳೆಯದಾಗಲಿ. ರಾಜ್ಯದಲ್ಲಿ ಒಳ್ಳೆಯ ಮಳೆ-ಬೆಳೆ ಮತ್ತು ಶಾಂತಿಗಾಗಿ ದೇವರಲ್ಲಿ ಪ್ರಾರ್ಥಿಸಿ. ನಾವು ಕೂಡ ಹಜ್‌ಯಾತ್ರ ಕೈಗೊಳ್ಳುತ್ತಿರುವವರು ಯಾತ್ರ ಮುಗಿಸಿಕೊಂಡು ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ರಾಜ್ಯದಿಂದ ಈ ಬಾರಿ 5990 ಯಾತ್ರಿಗಳು ಪ್ರಯಾಣ ಬೆಳೆಸಲು ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಕಾರಣಗಳಿಂದಾಗಿ ಅಷ್ಟೂ ಮಂದಿ ಹೋಗಲು ಸಾಧ್ಯವಾಗಿಲ್ಲ. ಈ ನಡುವೆ ನಿರೀಕ್ಷಣಾ ಪಟ್ಟಿಯಲ್ಲಿದ್ದ 650 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಯಾತ್ರಿಗಳಿಗೆ ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಎಲ್ಲ ಧರ್ಮಗಳು ಮನುಷ್ಯರನ್ನು ಪ್ರೀತಿಸಿ ಎಂದು ಸಾರುತ್ತವೆ. ಕೆಲವರು ರಾಜಕೀಯಕ್ಕೋಸ್ಕರ ಧರ್ಮ ಬಳಸಿಕೊಳ್ಳುತ್ತಿದ್ದಾರೆ ಎಂದ ಅವರು, ಧರ್ಮ ಬಳಸಿಕೊಂಡು ರಾಜಕಾರಣ ಮಾಡುವವರು ಮತಾಂಧರು. ಸಂವಿಧಾನದ ಆಶಯ ಸಮಾನತೆ ಮತ್ತು ಸಹಬಾಳ್ವೆ, ಜಾತ್ಯತೀತತೆ ಎನ್ನುವುದು ಬದ್ಧತೆ. ಸಮಾಜದಲ್ಲಿ ಶಾಂತಿ ಕದಡುವ ಶಕ್ತಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್.ರೋಷನ್‌ಬೇಗ್, ಸಹಬಾಳ್ವೆಗೆ ಕರ್ನಾಟಕ ಮಾದರಿಯಾಗಿದೆ. ಇತ್ತೀಚಿಗೆ ಕರಾವಳಿಯಲ್ಲಿ ನಡೆದಂತ ಘಟನೆಗಳು ಮರುಕಳಿಸದಂತೆ ಆ ದೇವರಲ್ಲಿ ಪ್ರಾರ್ಥಿಸಿ ಎಂದು ಯಾತ್ರಾರ್ಥಿಗಳಿಗೆ ಶುಭಕೋರಿದರು. ಕಾರ್ಯಕ್ರಮದಲ್ಲಿ ಸಚಿವರಾದ ಯು.ಟಿ.ಖಾದರ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ ಸೇರಿ ಹಲವರು ಹಾಜರಿದ್ದರು.