ಸಿಂಧನೂರು: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಸಜ್ಜಿತ ಉಪಕರಣ, ಸೇವೆಗೆ ನುರಿತ ವೈದ್ಯರು ಲಭ್ಯವಿದ್ದರೂ ಬಡವರಿಗೆ ಅನುಕೂಲವಾಗುತ್ತಿಲ್ಲ. ಖಾಸಗಿ ವ್ಯಾಮೋಹ ಹೆಚ್ಚಾಗಿ ಉಚಿತ ಸೇವೆ ನೀಡದಾಗಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಎನ್‌ಟಿ ಮತ್ತು ಚರ್ಮರೋಗ ತಜ್ಞರಿದ್ದರೆ, ಅವರಿಗೆ ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಲಭ್ಯ ಇರುವ ಯಂತ್ರಗಳನ್ನು ಖಾಸಗಿ ಆಸ್ಪತ್ರೆಗೆ ಒಯ್ದು, ಅಲ್ಲಿ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರಕಾರಿ ವೈದ್ಯರು ಖಾಸಗಿ ಆಸ್ಪತ್ರೆ ಮಾಡಿಕೊಂಡು ಬಡ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ವ್ಯವಸ್ಥೆಗೆ ಸ್ಥಳೀಯ ಶಾಸಕರು, ಡಿಎಚ್‌ಒ ಸುಧಾರಣೆ ತರಬೇಕಿತ್ತು. ಆದರೆ, ಆ ಕೆಲಸ ನಡೆಯದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರಿಗೆ ನಾವು ಪತ್ರ ಬರೆಯುತ್ತಿದ್ದೇವೆ ಎಂದರು.
ಖಾಸಗಿ ಆಸ್ಪತ್ರೆಗೆ ಶಿಫಾರಸು: ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೋರೇಬಾಳ ಮಾತನಾಡಿ, ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದಾಗ ಬೇರೆಡೆ ಹೋಗಲು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗೆ ಹೋದಾಗ ಅದೇ ಸರಕಾರಿ ವೈದ್ಯರು ಬಂದು ಚಿಕಿತ್ಸೆ ನೀಡಿ, 20 ಸಾವಿರ ರೂ. ಶುಲ್ಕ ಪಡೆದಿದ್ದಾರೆ. ನಮ್ಮ ಹೇಳಿಕೆ ಬೇಡ. ಬೇಕಿದ್ದರೆ ತೊಂದರೆಗೆ ಒಳಗಾದವರನ್ನೇ ತಾವು ಮಾತನಾಡಿಸಿ, ಸುದ್ದಿ ಮಾಡಬಹುದು ಎಂದರು.
ಕಣ್ಣಿಗೆ ಬೀಳದ ವೈದ್ಯರು: ಸಾರ್ವಜನಿಕ ಆಸ್ಪತ್ರೆಗೆ ಬಿಜೆಪಿ ನಿಯೋಗ ಭೇಟಿ ನೀಡಿದಾಗ ಕೆಲವೇ ವೈದ್ಯರು ಕಣ್ಣಿಗೆ ಬಿದ್ದರು. 24/7 ಸೇವೆ ನಿಯೋಜಿಸಿದ ಇಬ್ಬರನ್ನು ಹೊರತುಪಡಿಸಿ, 9 ವೈದ್ಯರು ಆಸ್ಪತ್ರೆಯಲ್ಲಿ ಇರಬೇಕಿತ್ತು. ಒಂದೇ ಕೊಠಡಿಯಲ್ಲಿ ಮೂವರು ವೈದ್ಯರಿರುವುದು ಕಂಡುಬಂತು. ಇದನ್ನು ನೋಡಿ ಬಿಜೆಪಿ ನಿಯೋಗವೇ ತಬ್ಬಿಬ್ಟಾಯಿತು. ಯಾಕೆ ಮೂರು ಜನ ಒಂದೇ ಕಡೆ ಕುಳಿತಿದ್ದೀರಿ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಕೇಳಿದಾಗ, ರಿಲ್ಯಾಕ್ಸ್ ಪಡೆಯಲು ಎಂಬ ಉತ್ತರವೂ ವೈದ್ಯರಿಂದ ಬಂತು. ಕೊನೆಗೆ ಪ್ರಭಾರಿ ಮುಖ್ಯ ವೈದ್ಯಾಧಿಕಾರಿ ಡಾ| ಹನುಮಂತರೆಡ್ಡಿ ಆಸ್ಪತ್ರೆಗೆ ಆಗಮಿಸಿ, ಆಸ್ಪತ್ರೆಯ ಸೌಲಭ್ಯಗಳ ಕುರಿತು ಸಮರ್ಥನೆ ನೀಡಿದರು. ಜೊತೆಗೆ, ವೈದ್ಯರಿಗೆ ವಸತಿ ಗೃಹ ಬೇಕು, ಒಂದು ಇಸಿಜಿ ಯಂತ್ರ ಕಾಣೆಯಾಗಿದೆ ಎಂಬ ಹಲವು ಮಾಹಿತಿ ಒದಗಿಸಿದರು. ಬಿಜೆಪಿ ಯುವ ಘಟಕದ ಅಧ್ಯಕ್ಷ ಸಿದ್ದು ಹೂಗಾರ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.