Advertisement
ರೈತರ ಆತ್ಮಹತ್ಯೆ ತಡೆಗಟ್ಟಲು ಕೇಂದ್ರ, ರಾಜ್ಯ ಸರ್ಕಾರಗಳು ಸಾಲಮನ್ನಾ, ಬೆಳೆವಿಮೆ, ಪ್ರೋತ್ಸಾಹಧನ ಯೋಜನೆಗಳನ್ನು ಜಾರಿಗೆ ತಂದರೂ, ರೈತರ ಸಮಸ್ಯೆಗಳು ಬಗೆಹರಿಸುತ್ತಿಲ್ಲ. ಅಕಾಲಿಕ ಮಳೆ, ಕೀಟಗಳು, ವಿವಿಧ ರೋಗಗಳ ಬಾಧೆ, ಸಮರ್ಪಕ ನೀರು, ಬೆಂಬಲ ಬೆಲೆಯ ಕೊರತೆ ಹೀಗೆ ಬೆಳೆ ಕೈಗೆಟುವುದರೊಳಗೆ ಹಲವು ಸಮಸ್ಯೆಗಳು ರೈತರನ್ನು ಕಾಡುತ್ತಿವೆ. ಕಳೆದ ವರ್ಷ ಉತ್ತಮ ಬೆಲೆ ನಿರೀಕ್ಷೆಯಿಂದ ಮೆಣಸಿನಕಾಯಿ, ಭತ್ತ ನಾಟಿ ಮಾಡಿದ್ದ ಬಳ್ಳಾರಿ, ವಿಜಯನಗರ ಅವಳಿ ಜಿಲ್ಲೆಗಳ ರೈತರು ಅಕಾಲಿಕ ಮಳೆಯಿಂದಾಗಿ ನಷ್ಟಕ್ಕೀಡಾಗಿದ್ದಾರೆ. ಇದರಿಂದ ಎದುರಾಗುವ ಸಾಲಬಾಧೆಯಿಂದ ಕಳೆದ ಒಂದು ವರ್ಷದಲ್ಲಿ ಬಳ್ಳಾರಿ ಜಿಲ್ಲೆ 19, ವಿಜಯನಗರ ಜಿಲ್ಲೆ 10 ಸೇರಿ ಒಟ್ಟು 29 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
Related Articles
Advertisement
ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಮೆಣಸಿನಕಾಯಿ, ಭತ್ತ ನಾಟಿ ಮಾಡಿದ್ದ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣರಾಗಿದ್ದಾರೆ. ಅದರಲ್ಲೂ ವರ್ಷವಿಡೀ ನೀರಾವರಿ ಸೌಲಭ್ಯವುಳ್ಳ ಕುರುಗೋಡು, ಸಿರುಗುಪ್ಪಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ ಸಂಗತಿ. ಹಾಗೆ ನೋಡಿದರೆ ಕಳೆದ ವರ್ಷ ಕಂಪ್ಲಿ, ಮಳೆಯನ್ನೇ ಆಶ್ರಯಿಸಿರುವ ಕೂಡ್ಲಿಗಿ ತಾಲೂಕಗಳಲ್ಲಿ ಒಬ್ಬೇ ಒಬ್ಬ ರೈತರು ಆತ್ಮಹತ್ಯೆಗೆ ಶರಣಾಗಿಲ್ಲ ಎಂದು ಕೃಷಿ ಇಲಾಖೆಯ ಹೆಸರೇಳಲಿಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ. ಅವಳಿ ಜಿಲ್ಲೆಗಳಲ್ಲಿ ಆತ್ಮಹತ್ಯೆಗೆ ಶರಣರಾದ ರೈತರ ಪೈಕಿ 14 ರೈತರು ಮೆಣಸಿನಕಾಯಿ, ಭತ್ತ, 5 ಜನ ಮೆಕ್ಕೆಜೋಳ, 2 ಜನ ಮೆಣಸಿನಕಾಯಿ, ಒಬ್ಬರು ಟಮೋಟಾ ಸೇರಿದಂತೆ ಇನ್ನುಳಿದವರು ವಿವಿಧ ಬೆಳೆಗಳನ್ನು ನಾಟಿ ಮಾಡಿದ್ದು, ನಷ್ಟಕ್ಕೀಡಾಗಿ ಸಂಕಷ್ಟದ ಸುಳಿಗೆ ಸಿಲುಕಿದ್ದರು.
ಸಿಎಂ ಪರಿಹಾರ ನಿಧಿಗೆ ಶಿಫಾರಸ್ಸು
ಜಿಲ್ಲೆಯ ಕುರುಗೋಡು ತಾಲೂಕು ಬಾದನಹಟ್ಟಿಯಲ್ಲಿ ರೈತರೊಬ್ಬರು ಐದು ಎಕರೆ ಗುತ್ತಿಗೆ ಮಾಡಿ ಮೆಣಸಿನಕಾಯಿ ಬೆಳೆ ನಾಟಿ ಮಾಡಿ ನಷ್ಟಕ್ಕೀಡಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ, ಅವರು ಬೆಳೆ ನಾಟಿ ಮಾಡಿದ್ದ ಹೊಲಗಳು ಅವರ ಅಥವಾ ಸಂಬಂಧಿಕರ ಹೆಸರಲ್ಲಿ ಇಲ್ಲದ ಕಾರಣ, ಮಾನವೀಯ ದೃಷ್ಟಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮೃತರಿಗೆ ಇಬ್ಬರು ಮಕ್ಕಳು ಇರುವುದರಿಂದ ಪತ್ನಿಗೆ ಅಂಗನವಾಡಿಗಳಲ್ಲಿ ಉದ್ಯೋಗ ಕಲ್ಪಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಪರಿಹಾರ ಇನ್ನು ಬಂದಿಲ್ಲ. ಬಂದಾಕ್ಷಣ ವಿತರಿಸಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೆ ಆಗಿರುವ ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಎಲ್ಲ ಕುಟುಂಬಗಳಿಗೂ ಪರಿಹಾರ ವಿತರಿಸಲಾಗಿದೆ. ಒಂದೆರಡು ಕುಟುಂಬಗಳಿಗೆ ನೀಡಬೇಕಾಗಿದೆ. ಗುತ್ತಿಗೆ ಮಾಡಿದ ಹೊಲಗಳು ಕನಿಷ್ಟ ರೈತರ ಸಂಬಂಧಿಕರ ಹೆಸರಲ್ಲಾದರೂ ಇರಬೇಕು. ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗುತ್ತಿದೆ. ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪತ್ರ ಬರೆದಿದ್ದಾರೆ. – ಮಲ್ಲಿಕಾರ್ಜುನ, ಜಂಟಿ ಕೃಷಿ ನಿರ್ದೇಶಕರು, ಬಳ್ಳಾರಿ.
-ವೆಂಕೋಬಿ ಸಂಗನಕಲ್ಲು