ಬೆಂಗಳೂರು: “ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ವಿಧೇಯಕವನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡುವಂತೆ’ ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯ ಮಹಿಳಾ ಕಾಂಗ್ರೆಸ್ ಮನವಿ ಮಾಡಿದೆ. ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್ ನೇತೃತ್ವದ ನಿಯೋಗ ರಾಜ್ಯ ಪಾಲ ವಿ.ಆರ್.ವಾಲಾ ಅವರನ್ನು ಮಂಗಳ ವಾರ ಭೇಟಿ ಮಾಡಿ ಮನವಿ ಸಲ್ಲಿಸಿತು. ರಾಜೀವ್ ಗಾಂಧಿ ಪ್ರಧಾನಿಯಾಗಿ ದ್ದಾಗಲೇ ಸಂವಿಧಾನದ 73, 74 ನೇ ತಿದ್ದುಪಡಿ ಮಾಡಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿಸಿ ಕೊಟ್ಟರು. ಅನೇಕ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಶಾಸನ ಸಭೆಗಳಲ್ಲಿ ಕೇವಲ 11ರಷ್ಟು ಮಹಿಳೆಯರಿಗೆ ಅವಕಾಶ ದೊರೆತಿದ್ದು, ಇದರಿಂದ ದೇಶದ ಅರ್ಧದಷ್ಟು ಜನಸಂಖ್ಯೆ ಇರುವ ಮಹಿಳೆಯರಿಗೆ ಅನ್ಯಾಯವಾದಂತಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿಯಾದ ಹೆಬ್ಟಾಳ್ಕರ್!
ಬೆಂಗಳೂರು: ಲಕ್ಷ್ಮೀ ಹೆಬ್ಟಾಳ್ಕರ್ ಮುಖ್ಯಮಂತ್ರಿಯಾಗಿದ್ದಾರೆ! ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿರುವ ಲಕ್ಷ್ಮೀ ಹೆಬ್ಟಾಳ್ಕರ್ ಯಾವಾಗ ಮುಖ್ಯಮಂತ್ರಿಯಾದ್ರು ಅಂತ ಆಶ್ಚರ್ಯ ಪಡಬೇಡಿ, ಪತ್ರಕರ್ತ ಸಂತೋಷ್ ಶ್ರೀರಾಮುಡು ನಿರ್ದೇಶಿಸಿ, ನಟಿಸಿರುವ ಜಯಸೂರ್ಯ ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಸಿಎಂ ಪಾತ್ರ ಮಾಡಿದ್ದಾರೆ. ಸೈನಿಕನ ಜೀವನ ಆಧರಿಸಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ವಿಶೇಷ ಪಾತ್ರದಲ್ಲಿ ಲಕ್ಷ್ಮೀ ಹೆಬ್ಟಾಳ್ಕರ್ ಕಾಣಿಸಿಕೊಂಡಿದ್ದಾರೆ. ಜಯಸೂರ್ಯ ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದ್ದು, ನ.10ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.