ಮಂಗಳೂರು: ಕೊಲೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಬಂಟ್ವಾಳದ ಆರೋಪಿಯ ಮನೆಯಲ್ಲಿ ಶೋಧ ಕಾರ್ಯದ ಸಂದರ್ಭದಲ್ಲಿ ಪೊಲೀಸರು ಮನೆಯಲ್ಲಿದ್ದ ಧಾರ್ಮಿಕ ಗ್ರಂಥ ಕುರಾನ್‌ಗೆ ಅವಮಾನಿಸಿದ್ದಾರೆ ಎಂಬ ಆರೋಪಗಳು ಕೇಳಿ
ಬಂದಿದ್ದು, ಇದರ ಸತ್ಯಾಸತ್ಯತೆಯನ್ನು ತಿಳಿಯಲು ಆಂತರಿಕ ತನಿಖೆಗೆ ಐಜಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲ ಧಾರ್ಮಿಕ ಗ್ರಂಥಗಳು ಕೂಡ ಅದರದ್ದೇ ಆದ ಪಾವಿತ್ರತೆಯನ್ನು ಹೊಂದಿದೆ. ಹೀಗಾಗಿ ಯಾವುದೇ ಗ್ರಂಥವನ್ನು ಅವಮಾನಿಸುವುದು ಸರಿಯಲ್ಲ.
ಪೊಲೀಸರಾಗಲಿ, ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಧಾರ್ಮಿಕ ಗ್ರಂಥಕ್ಕೆ ಅವಮಾನ ಮಾಡುವುದು ಖಂಡನೀಯ. ಹೀಗಾಗಿ ಪೊಲೀಸರು ಅವಮಾನ ಮಾಡಿದ್ದರೆ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದೆ. ಹೀಗಾಗಿ ಅದು ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಅತೀ ಅಗತ್ಯ. ಈ ರೀತಿಯ ಘಟನೆಗಳಿಂದ ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ. ಸಾಮರಸ್ಯ ಇದ್ದಾಗ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದರು.
ಈ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೆ. 12ರಂದು ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಜನರ ಸಹಕಾರ ಇದ್ದಾಗ ಮಾತ್ರ ಸಾಮರಸ್ಯ ವೃದ್ಧಿಸಲು ಸಾಧ್ಯ ಎಂದು ಲೋಬೊ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಪೊರೇಟರ್ ಲ್ಯಾನ್ಸಿ ಲಾಟ್ ಪಿಂಟೋ, ಪ್ರಮುಖರಾದ ಡಿ.ಎಂ. ಅಸ್ಲಂ, ಮೋಹನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.