Advertisement
ಜೀವನವೆಂದರೆ ಇಷ್ಟೇ ಅಲ್ಲವೇ ಕಂದಾ? ಎಲ್ಲಿರುತ್ತೇವೆಯೋ ಅದುವೇ ಸ್ವರ್ಗ ಎಂಬುದಾಗಿ ಭಾವಿಸಿ ಇದ್ದಷ್ಟು ದಿನ ಬದುಕುವುದು, ಅದು ರಸ್ತೆಯ ಇಕ್ಕೆಲಗಳಾದರೂ ಸರಿ ಸುಸಜ್ಜಿತ ಅನಾಥಾಶ್ರಮಗಳಾದರೂ ಸರಿ. ಯಾರಿಗೂ ಬೇಡವಾದವರಿಗೆ ಈ ಸ್ಥಳಗಳೇ ನಿಜವಾದ ಆಸರೆಯಲ್ಲವೇ ಮಗು?
Related Articles
Advertisement
ಆದರೆ ಈಗೀಗ ಅನ್ನಿಸುತ್ತಿದೆ ನಾನು ಹೇಳಬಾರದು ಆದರೂ ಹೇಳುತ್ತಿರುವೆ ಮಗು ನೀನು ಹುಟ್ಟುವುದಕ್ಕಿಂತ ನಿನ್ನ ತಾಯಿ ಬಂಜೆಯಾಗಿಯೇ ಉಳಿದಿದ್ದರೆ ನಾನು ಮತ್ತು ಅವಳು ಆ ಪುಟ್ಟ ಮನೆಯಲ್ಲಿ ನೆಮ್ಮದಿಯಾಗಿ ಇರುತ್ತಿದ್ದೆವೋ ಏನೋ?
ಬಾಲ್ಯದಲ್ಲಿ ನನ್ನನ್ನು ಬಿಟ್ಟು ನೀನಿದ್ದ ನೆನಪೇ ನನಗಾಗುತ್ತಿಲ್ಲ. ಬೆಳಗ್ಗೆ ಎದ್ದ ಕೂಡಲೇ ಮನೆಯಿಂದ ಸ್ವಲ್ಪವೇ ದೂರದಲ್ಲಿರುವ ಚಹಾದ ಅಂಗಡಿಗೆ ಹೋಗಿ ಒಂದು ಚಹಾದೊಂದಿಗೆ ಪೇಪರ್ ಓದದಿದ್ದರೆ ಆ ದಿನವೇ ವ್ಯರ್ಥ ಎಂದೆನಿಸುತ್ತಿತ್ತು;
ಇದು ನಿನಗೂ ತಿಳಿಯದ ವಿಚಾರವೇನಲ್ಲ, ಯಾಕೆಂದರೆ ನಿತ್ಯವೂ ನನ್ನ ಕೈ ಹಿಡಿದುಕೊಂಡು ನನ್ನ ಜತೆಯಲ್ಲಿಯೇ ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ ಬರುತ್ತಿದ್ದೆ. ಈ ಅಪ್ಪ ಎಲ್ಲಿಗೇ ಹೋದರೂ ನನ್ನನ್ನು ನೀನು ಹಿಂಬಾಲಿಸುತ್ತಿದ್ದಿ. ಒಂದು ದಿನವೂ ನಿನ್ನನ್ನು ಹೊಡೆದವಳು ನಾನಲ್ಲ, ಹೊಡೆಯುವುದೆಲ್ಲಿ ಬಂತು ಸ್ವರವೆತ್ತಿ ಮಾತನಾಡಿದವಳೂ ಅಲ್ಲ. ಆದರೆ ಅವಳು ನಿನ್ನನ್ನು ಆಗಾಗ ಗದರಿಸುತ್ತಿದ್ದಳು; ಅದನ್ನು ಕಂಡ ನಾನು ಅವಳನ್ನೇ ಗದರಿಸಿ ಸುಮ್ಮನಾಗಿಸುತ್ತಿದ್ದೆ.
ಎಷ್ಟು ಪ್ರೀತಿ ನನ್ನಿಂದ ಸಾಧ್ಯವೋ ಅಷ್ಟೆಲ್ಲಾ ಪ್ರೀತಿಯ ಸುಧೆಯನ್ನು ನಿನ್ನ ಮೇಲೆ ನಾನು ಹರಿಸಿದ್ದೆ. ನೀನೂ ಕೂಡ ಅಷ್ಟೇ! ನಿನ್ನ ತಾಯಿ ಹೊಡೆಯಲು ಮುಂದೆ ಬಂದಾಗ ನನ್ನ ಬೆನ್ನಿನ ಹಿಂದೆ ಅಡಗಿಕೊಂಡು ಬಿಡುತ್ತಿದ್ದೆ. ಎಷ್ಟು ಚೆಂದದ ಕ್ಷಣಗಳವು! ಯಾವಾಗಲೂ ನಮ್ಮ ಮನೆಯಲ್ಲಿ ನಗುವೇ ತುಂಬಿರುತ್ತಿತ್ತು. ನಾನು, ಅವಳು ಮತ್ತು ನೀನು ಇದ್ದವರು ನಾವು ಮೂವರೇ ಆದರೂ ಊರಿಡೀ ನಮ್ಮ ಮನೆಯ ನಗುವಿನ ಸದ್ದೇ ಜೋರಾಗಿ ಕೇಳಿಸುತ್ತಿತ್ತು.
ಕಳೆದ ದಿನಗಳನ್ನು ಮೆಲುಕು ಹಾಕುವುದರಲ್ಲಿ ಖುಷಿಯೂ ಇದೆ, ಹತ್ತಿಕ್ಕಲು ಅಸಾಧ್ಯವಾದ ನೋವೂ ಇದೆ ಎಂಬುದು ನನಗೀಗ ಅರ್ಥವಾಗುತ್ತಿದೆ. ಆ ದಿನ ವಿಪರೀತ ಜ್ವರದಿಂದ ನಿನ್ನ ಮೈ ಕೆಂಡದಂತೆ ಸುಡುತ್ತಿತ್ತು. ಅಂದು ನನ್ನ ಉಸಿರೇ ನಿಂತು ಹೋದಂತ ಅನುಭವ ನನಗಾಯಿತು. ನಿನ್ನ ತಾಯಿಗೋಸ್ಕರವಾಗಿಯೂ ಒಂದು ದಿನ ನನ್ನ ಕಣ್ಣಿನಲ್ಲಿ ನೀರು ಹರಿದಿರಲಿಲ್ಲ. ಆದರೆ ಆ ದಿನ ನಿನಗಾಗಿ ನನ್ನ ಕಣ್ಣಂಚಿನಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ಅಂತೂ ಆ ದೇವರ ಅನುಗ್ರಹ ! ಮತ್ತೆ ನೀನು ಮೊದಲಿನಂತಾದೆ.
ಒಂದು ದಿನವೂ ವಿಶ್ರಮಿಸದೆ ರವಿವಾರವೂ ಕೆಲಸಕ್ಕೆ ಹೋಗಿ ನಿನಗೇನೇನು ಬೇಕೋ ಅದನ್ನೆಲ್ಲವನ್ನೂ ಕೊಡಿಸಿದೆ. ಯಾವತ್ತೂ ನಾವು ಬಡವರು ಎಂಬುದನ್ನು ನಿನಗೆ ತೋರ್ಪಡಿಸಲೇ ಇಲ್ಲ, ನಿನ್ನನ್ನು ಶ್ರೀಮಂತನ ಮಗನಂತೆಯೇ ಬೆಳೆಸಿದೆ. ಮಗು ! ನಿನಗಾಗಿ ನಾನು ಎಲ್ಲವನ್ನೂ ನೀಡಿದೆ, ಆದರೆ ನನಗಾಗಿ ನೀನು ನೀಡಿದ್ದೇನು? ಒಂದು ಬಾರಿ ಕುಳಿತು ಯೋಚಿಸು ನಿನ್ನನ್ನು ಮಿತಿ ಮೀರಿ ನಾನು ಪ್ರೀತಿಸಿದೆನಲ್ಲ ? ಇದು ನನ್ನ ತಪ್ಪೇ? ಆ ತಪ್ಪಿಗೋಸ್ಕರವೇ ಈ ಶಿಕ್ಷೆಯೇ?
ಇಲ್ಲ ನನಗಿದು ಆಗಬೇಕಿತ್ತು, ಅದರಂತೆ ಇಂದು ಆಗಿದೆ ಅಷ್ಟೇ! ತಪ್ಪು ನಿನ್ನದಲ್ಲ ಕಂದಾ ತಪ್ಪು ನನ್ನದೇ! ನಾನು ನಿನ್ನನ್ನು ತಿದ್ದಲಿಲ್ಲ. ನೀನು ತಪ್ಪೆಸಗಿದರೂ ನಿನಗೆಲ್ಲಿ ನೋವಾಗುವುದೋ ಎಂದು ತಪ್ಪಲ್ಲ ಮಗೂ ನೀನು ಮಾಡಿದ್ದೇ ಸರಿ ಎಂದು ಹೆಚ್ಚಿನ ಅಕ್ಕರೆ ತೋರಿಸಿದೆ. ಆದರೆ ಮುಂದೊಂದು ದಿನ ಇದುವೇ ನನಗೆ ಮುಳುವಾಗುತ್ತದೆ ಎಂದು ನಾನೆಂದೂ ಭಾವಿಸಿರಲಿಲ್ಲ.
ನನಗಿನ್ನೂ ನೆನಪಿದೆ, ನೀನು ಅಗ ಪದವಿ ಓದುತ್ತಿದ್ದೆ. ಸಿನೆಮಾ ನೋಡಲು ಹೋಗುವುದಕ್ಕಿದೆ ಎರಡು ನೂರು ರೂಪಾಯಿ ಕೊಡು ಎಂದು ನೀನು ಕೇಳಿದಾಗ, ನಿನಗ್ಯಾವ ರೀತಿಯಲ್ಲಿ ಉತ್ತರ ಕೊಡಲಿ ಎಂಬುದೇ ನನಗೆ ತಿಳಿಯದಾಗಿ ಹೋಗಿತ್ತು. ಆ ಕಾಲಕ್ಕೆ ಒಂದು ಬಿಡಿ ಕಾಸೂ ಕೂಡ ನನ್ನ ಬಳಿ ಇರಲಿಲ್ಲ. ದುಡಿದದ್ದೆಲ್ಲವೂ ನಿನ್ನ ತಾಯಿಯ ಚಿಕಿತ್ಸೆಗೆ ಖರ್ಚಾಗಿ ಹೋಗಿತ್ತು. ಇಂತಹ ಸಂದರ್ಭದಲ್ಲಿಯೂ ಹಣ ಕೇಳುತ್ತಿರುವೆಯಲ್ಲಞಸ ನನ್ನ ಪರಿಸ್ಥಿತಿಯನ್ನೊಮ್ಮೆ ನೋಡು ಎಂದು ನಿನ್ನ ತಾಯಿ ಹೇಳಿದಾಗಲೂ. ಅವನಿಗೇನು ಗೊತ್ತು ಪಾಪ, ಇನ್ನೂ ಹುಡುಗ ಎಂಬುದಾಗಿ ಅವಳ ಬಾಯಿ ಮುಚ್ಚಿಸಿದ್ದೆ.
ಆದರೆ ಅಂದಿನ ನನ್ನ ಕಷ್ಟ ನಿನಗೆ ತಿಳಿಯಲೇ ಇಲ್ಲ, ತಾಯಿಯ ಮೇಲೆಯೂ ನಿನಗೆ ಕರುಣೆ ಬರಲಿಲ್ಲ. ನಿನಗೆ ಕೋಪವಿದ್ದುದು ಸಿನೆಮಾ ನೋಡಲು ಹಣ ಸಿಗಲಿಲ್ಲವಲ್ಲ ಎಂಬ ಕಾರಣಕ್ಕೆ ಎಂಬುದು ನಾನು ಆ ದಿನ ಮನಗಂಡೆ. ಮರುದಿನ ಹೇಗೋ ಪಕ್ಕದ ಮನೆಯವನಲ್ಲಿ ಸಾಲ ಕೇಳಿ ನಿನಗೆ ಸಿನೆಮಾ ನೋಡಲು ಹಣವನ್ನು ಒದಗಿಸಿಕೊಟ್ಟೆ. ಅಂದಿನಿಂದ ಮೊದಲ್ಗೊಂಡು ಪ್ರತಿದಿನವೂ ನನ್ನ ಮೇಲೆ ನೀನು ವಿನಾಕಾರಣ ರೇಗುತ್ತಿದ್ದೆ.
ಹಾಸಿಗೆ ಹಿಡಿದ ತಾಯಿಯನ್ನೂ ಬಿಡದೆ ಅವಳ ಮನಸ್ಸನ್ನೂ ನೋಯಿಸುತ್ತಿದ್ದೆ. ದಿನ ಹೋದಂತೆ ನೀನು ಅದೇ ನನ್ನ ಕಂದನೇ? ಎಂಬ ಭಾವನೆ ನನ್ನಲ್ಲಿ ಮೂಡುತ್ತಿತ್ತು. ಅಷ್ಟಾದರೂ ನಿನ್ನ ಮೇಲಿನ ಮಮತೆ ಕಡಿಮೆಯಾಗಲೇ ಇಲ್ಲ. ಕೊನೆಗೊಂದು ದಿನ ಅವಳು ನನ್ನನ್ನು ಬಿಟ್ಟು ದೇವರ ಪಾದವನ್ನು ಸೇರಿಕೊಂಡು ಬಿಟ್ಟಳು. ಮನೆಯಲ್ಲಿ ನಾನೊಬ್ಬನೇ ಇರುತ್ತಿದ್ದೆ, ನೀನು ಬೆಂಗಳೂರಿನಲ್ಲಿ ಯಾವುದೋ ಕಂಪೆನಿಯ ಕೆಲಸ ಎಂದು ಮನೆಯ ಕಡೆ ಬರುವುದನ್ನೇ ನಿಲ್ಲಿಸಿಬಿಟ್ಟೆ.
ನೀನು ನಿನ್ನ ಉದ್ಯಮದಲ್ಲಿ ಕೈಸೋತು ನಮ್ಮ ಜಮೀನನ್ನೂ, ನಮ್ಮ ಮನೆಯನ್ನೂ ಮಾರಿದೆ ಎಂಬ ವಿಚಾರ ನೀನು ನನಗೆ ಹೇಳದೇ ಹೋದರೂ ಎಲ್ಲಿಂದಲೋ ನನಗೆ ತಿಳಿಯಿತು.
ಅಪ್ಪಾ ಸ್ವಲ್ಪ ಸಮಯದ ಮಟ್ಟಿಗೆ ಆಶ್ರಮದಲ್ಲಿದ್ದುಕೋ ! ಆಶ್ರಮವೊಂದನ್ನು ನೋಡಿಬಂದಿದ್ದೇನೆ. ಒಳ್ಳೆಯ ವ್ಯವಸ್ಥೆಗಳಿಗೆ, ಹಣ ಕಳುಹಿಸುತ್ತೇನೆ, ಕೆಲವೇ ದಿನ ಅನಂತರ ನಾನೇ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ನೀನಾಡಿದಾಗಲೂ ನಿನ್ನ ಮೇಲೆ ಸಂಪೂರ್ಣವಲ್ಲದಿದ್ದರೂ ಅಲ್ಪಪ್ರಮಾಣದ ನಂಬಿಕೆ ಇತ್ತು. ಆದರೆ ಇಂದಿಗೆ ಅದು ಕೂಡ ಸಂಪೂರ್ಣವಾಗಿ ಇಲ್ಲವಾಗಿ ಹೋಗಿದೆ. ಇಷ್ಟರವರೆಗೆ ಬರದ ನೀನು ಇನ್ನು ಬರುವೆ ಎಂಬ ಯಾವ ನಂಬಿಕೆಯೂ ನನ್ನಲ್ಲಿ ಉಳಿದಿಲ್ಲ.
ಮಗೂ ನಾನಿಲ್ಲಿ ಸುಖವಾಗಿಯೇ ಇದ್ದೇನೆ ನನಗಿಲ್ಲಿ ಯಾವ ತೊಂದರೆಯೂ ಇಲ್ಲ. ಇಲ್ಲಿ ಅನೇಕರು ನನ್ನ ಮೇಲೆ ಕಾಳಜಿ ವಹಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಒಳ್ಳೆಯ ಊಟ ಸಿಗುತ್ತಿದೆ. ಪ್ರತಿದಿನ ಬರುವ ಪೇಪರ್‌ಗಳಲ್ಲಿ ಒಂದನ್ನೂ ಬಿಡದೆ ಓದುತ್ತೇನೆ. ಕೆಲವೊಮ್ಮೆ ನಿನ್ನ ನೆನಪುಗಳು ಗಾಢವಾಗಿ ಕಾಡುತ್ತದೆ. ಆದರೆ ನಾವೇ ಅವರಿಗೆ ಬೇಡವಾದ ಮೇಲೆ ನಾವು ಅವರ ಬಗ್ಗೆ ಚಿಂತಿಸಿ ಮಾಡುವುದೇನನ್ನು ಎಂಬುದಾಗಿ ಭಾವಿಸಿ ಮತ್ತೆ ವಾಸ್ತವಕ್ಕೆ ಮರುಳುತ್ತೇನೆ.
ಆದರೆ ಪರಲೋಕದಲ್ಲಿರುವ ನಿನ್ನ ತಾಯಿ ನನ್ನ ಈ ಪರಿಸ್ಥಿತಿಯನ್ನು ನೋಡಿ ಖಂಡಿತಾ ಬೇಸರಗೊಂಡಿರುತ್ತಾಳೆ. ನನ್ನ ಆರೋಗ್ಯವೂ ಆಗೊಮ್ಮೆ ಈಗೊಮ್ಮೆ ಏರುಪೇರಾಗುತ್ತಲೇ ಇದೆ. ಇಂದೋ ನಾಳೆಯೋ ಯಾರಿಗೆ ತಾನೆ ಗೊತ್ತು? ನೀನು ಇಲ್ಲಿಗೆ ಬಾ ಎಂದು ನಾನು ಯಾವತ್ತಿಗೂ ಕೇಳಲಾರೆ. ನಾನಿಲ್ಲದೇ ನಿನ್ನ ಜೀವನ ಇಂದಿಗೆ ನೆಮ್ಮದಿಯಿಂದಿದೆ; ಹಾಗೆಯೇ ಇರಲಿ. ಆದರೆ ಒಂದು ವಿನಂತಿ. ನಿನಗೆ ಸಮಯವಿದ್ದರೆ ಈ ಪತ್ರಕ್ಕೊಂದು ಪ್ರತಿಕ್ರಿಯೆ ಕಳುಹಿಸು.
-ಇತೀ ನಿನ್ನ ದುರದೃಷ್ಟವಂತ ತಂದೆ.
ಮಗನ ವಿಳಾಸವನ್ನು ಆತನ ಸ್ನೇಹಿತನಿಂದ ತಿಳಿದಿದ್ದ ತಂದೆ ಆ ಪತ್ರವನ್ನು ಯಾವುದೇ ನಿರೀಕ್ಷೆಗಳಿಲ್ಲದೇ ಪೋಸ್ಟ್ ಮಾಡಿದ್ದ. ದುರಾದೃಷ್ಟ ಆ ಪತ್ರದಲ್ಲಿದ್ದ ವಿಳಾಸದಿಂದ ಅವನು ತನ್ನ ಮನೆಯನ್ನು ಬೇರೊಂದೆಡೆಗೆ ಸ್ಥಳಾಂತರಿಸಿದ್ದ. ಪತ್ರ ಎಲ್ಲಿಂದ ಹೊರಟಿತೋ ಮತ್ತೆ ಅಲ್ಲಿಗೇ ಬಂದು ಸೇರಿತು!.
-ವಿಕಾಸ್ ರಾಜ್ ಪೆರುವಾಯಿ
ವಿಶ್ವವಿದ್ಯಾನಿಲಯ ಕಾಲೇಜು,
ಮಂಗಳೂರು.