Advertisement

ಕನ್ನಡ ಶಾಲೆ ಉಳಿಸಲು ಆಂಧ್ರ ಸಿಎಂಗೆ ಪತ್ರ

10:52 PM Jan 29, 2020 | Lakshmi GovindaRaj |

ಬೆಂಗಳೂರು: ಆಂಧ್ರ ಪ್ರದೇಶ ಸರ್ಕಾರವು ತನ್ನ ಎಲ್ಲ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಪರಿವರ್ತಿಸಿ, ಪ್ರತಿ ವಿದ್ಯಾರ್ಥಿಯು ತೆಲುಗು ಅಥವಾ ಉರ್ದು ಭಾಷೆ ಕಲಿಯಬೇಕೆಂಬ ನಿರ್ಧಾರಕ್ಕೆ ಕರ್ನಾಟಕ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಈ ನಿರ್ಧಾರವನ್ನು ಆಂಧ್ರ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಈ ಕುರಿತು ಸೀಮಾಂಧ್ರದ ಮುಖ್ಯಮಂತ್ರಿ ವೈ.ಎಸ್‌.ಜಗನ್ಮೋಹನರೆಡ್ಡಿಯವರಿಗೆ ಪತ್ರ ಬರೆದಿರುವ ಸಚಿವ ಸುರೇಶ್‌ ಕುಮಾರ್‌, ಆಂಧ್ರ ಪ್ರದೇಶ ಸರ್ಕಾರ ಸೀಮಾಂಧ್ರದಲ್ಲಿನ ಎಲ್ಲ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸುವ ಹಾಗೆಯೇ ಪ್ರತಿ ವಿದ್ಯಾರ್ಥಿಯನ್ನು ತೆಲುಗು ಇಲ್ಲವೇ ಉರ್ದು ಭಾಷೆ ಕಲಿಯಬೇಕೆಂಬ ನಿರ್ಧಾರ ಕೈಗೊಂಡಿರುವುದು ನಮ್ಮೆರಡು ರಾಜ್ಯಗಳ ನಡುವಿನ ಸೌಹಾರ್ದಕ್ಕೆ ಧಕ್ಕೆಯಾದಂತಾಗಿದೆ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

ಈ ನಿರ್ಧಾರ ಆಂಧ್ರಪ್ರದೇಶದ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರ ಮನಸ್ಥೈರ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕರ್ನಾಟಕದಲ್ಲಿ ಹತ್ತಾರು ತೆಲುಗು ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಆಂಧ್ರಪ್ರದೇಶ ಕೈಗೊಂಡ ನಿರ್ಧಾರ ಕನ್ನಡ ಭಾಷಾ ಶಿಕ್ಷಕರ ಜೀವನವನ್ನು ಅಪಾಯಕ್ಕೆ ಸಿಲುಕಿಸುವ ಜತೆಗೆ ಕರ್ನಾಟಕ ಹೊರಗೆ ವಾಸಿಸುತ್ತಾರೆಂಬ ಒಂದೇ ಕಾರಣಕ್ಕಾಗಿ ಕನ್ನಡಿಗರ ಮಕ್ಕಳು ತಮ್ಮ ಮಾತೃಭಾಷೆಯಿಂದ ವಂಚಿತವಾಗಬೇಕಾಗುತ್ತದೆ.

ಆದ್ದರಿಂದ ಕನ್ನಡವನ್ನು ವಿಷಯವಾಗಿ ಅಥವಾ ಮಾಧ್ಯಮವಾಗಿ ಕಲಿಸುವ ಅಲ್ಪಸಂಖ್ಯಾತ ಭಾಷಾ ಶಾಲೆಗಳನ್ನು ಮುಂದುವರಿಸುವ ಮೂಲಕ ತಮ್ಮ ರಾಜ್ಯದಲ್ಲಿ ವಾಸಿಸುವ ಕನ್ನಡಿಗರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next