Advertisement

ನೀರು ಹರಿಸ‌ಲು ಅನುಮತಿ ಕೋರಿ ಪತ್ರ

01:19 PM Aug 06, 2019 | Suhan S |

ಗಂಗಾವತಿ: ತುಂಗಭದ್ರಾ ಡ್ಯಾಂನಲ್ಲಿ ಪ್ರಸ್ತುತ 40 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಒಳಹರಿವು ಉತ್ತಮವಾಗಿದೆ. ಕಾಲುವೆಗಳಿಗೆ ನೀರು ಹರಿಸಲು ಅನುಮತಿ ನೀಡುವಂತೆ ರಾಜ್ಯ ಸರಕಾರಕ್ಕೆ ತುಂಗಭದ್ರಾ ಯೋಜನೆ ಮುಖ್ಯ ಅಭಿಯಂತರ ಪತ್ರ ಬರೆದು ಮನವಿ ಮಾಡಿದ್ದಾರೆ.

Advertisement

ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಡ್ಯಾಂನ ಒಳಹರಿವು ಉತ್ತಮವಾಗಿದೆ. ಸುಗ್ಗಿ ಬೆಳೆಗೆ ನೀರು ಕಲ್ಪಿಸಲು ಅಚ್ಚುಕಟ್ಟು ಪ್ರದೇಶದ ರೈತರು ಸಂಘ ಸಂಸ್ಥೆಯವರು ನಿರಂತರ ಒತ್ತಡ ಹೇರುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ ಕಾಲುವೆಗಳಿಗೆ ನೀರು ಹರಿಸುವುದು ಅವಶ್ಯವಾಗಿದೆ. ಸದ್ಯದ ಡ್ಯಾಂನ ನೀರಿನ ಸ್ಥಿತಿಗತಿ ಕುರಿತು ಪತ್ರದಲ್ಲಿ ವಿವರಣೆ ನೀಡಲಾಗಿದೆ.

ಈ ಭಾರಿ ಮುಂಗಾರು ಮಳೆ ತಡವಾಗಿ ಬಂದಿದ್ದರಿಂದ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಜುಲೈ ಕೊನೆ ಮತ್ತು ಆಗಸ್ಟ್‌ ಮೊದಲ ವಾರದಲ್ಲಿ ಒಳಹರಿವು ಹೆಚ್ಚಾಗಿದೆ. ಪ್ರಸ್ತುತ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಭತ್ತದ ಒಂದು ಬೆಳೆಗಾಗುವಷ್ಟು ನೀರು ಸಂಗ್ರಹವಿದೆ. ಕಳೆದ ವಾರ ಕುಡಿಯುವ ನೀರಿನ ನೆಪದಲ್ಲಿ ಡ್ಯಾಂನಿಂದ ಪ್ರತಿ ದಿನ 1700 ಕ್ಯೂಸೆಕ್ಸ್‌ ನೀರನ್ನು ಎಡದಂಡೆ ಪ್ರಸ್ತುತ 1200 ಕ್ಯೂಸೆಕ್ಸ್‌ ನೀರನ್ನು ಬಲದಂಡೆ ಕಾಲುವೆ ಮೂಲಕ ಬಳ್ಳಾರಿ ಮತ್ತು ಆಂಧ್ರಪ್ರದೇಶಕ್ಕೆ ಹರಿಸಲಾಗುತ್ತಿದೆ. ಸದ್ಯ ಒಳಹರಿವು 20 ಸಾವಿರ ಕ್ಯೂಸೆಕ್ಸ್‌ ದಾಟುವ ಸಂಭವವಿದ್ದು, ಕಾಲುವೆಗೆ ನೀರು ಹರಿಸಲು ಸರಕಾರದಿಂದ ಪರವಾನಗಿ ಕೋರಲಾಗಿದೆ. ಈಗಾಗಲೇ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಸಂಸದರು ಅಚ್ಚುಕಟ್ಟು ಪ್ರದೇಶದ ಶಾಸಕರು ಪ್ರತಿ ದಿನ ಡ್ಯಾಂನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಮತ್ತು ಕಾಲುವೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

ಡ್ಯಾಂನಲ್ಲಿ ಇನ್ನೂ ಎರಡು ದಿನಗಳಲ್ಲಿ 40 ಟಿಎಂಸಿ ಅಡಿ ನೀರು ಸಂಗ್ರಹವಾಗಲಿದ್ದು, ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯ ಕಾರಣ ಒಳಹರಿವು ಹೆಚ್ಚಾಗಲಿದೆ. 20 ಸಾವಿರ ಕ್ಯೂಸೆಕ್ಸ್‌ಗೂ ಅಧಿಕ ಪ್ರಮಾಣದ ನೀರು 20-25 ದಿನ ಒಳಹರಿವು ಇದ್ದರೆ ಭತ್ತದ ಬೆಳೆಗಾಗುವಷ್ಟು ನೀರು ಡ್ಯಾಂನಲ್ಲಿ ಸಂಗ್ರಹವಾಗಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಜನಪ್ರತಿನಿಧಿಗಳು ಸಂಘ ಸಂಸ್ಥೆಯವರು ಒತ್ತಡ ಹಾಕಿದ್ದಾರೆ. ಪ್ರಸ್ತುತ ನೀರಾವರಿ ಸಲಹಾ ಸಮಿತಿ ಅಸ್ತಿತ್ವದಲ್ಲಿಲ್ಲದ ಕಾರಣ ಕಾಲುವೆಗಳಿಗೆ ನೀರು ಹರಿಸಲು ಸರಕಾರದ ಪರವಾನಗಿ ಕೋರಿ ಪತ್ರ ಬರೆಯಲಾಗಿದೆ.•ಮಂಜಪ್ಪ, ಮುಖ್ಯ ಅಭಿಯಂತರರು
ತುಂಗಭದ್ರಾ ಯೋಜನೆ
ಸದ್ಯ ಸುಗ್ಗಿ ಬೆಳೆಗೆ ಐಸಿಸಿ ಸಭೆ ನಡೆಸುವುದು ಅವಶ್ಯವಿಲ್ಲ. ಕೂಡಲೇ ಕಾಲುವೆಗಳಿಗೆ ತುಂಗಭದ್ರಾ ಯೋಜನೆ ಅಧಿಕಾರಿಗಳು ನೀರು ಹರಿಸಬೇಕು. ಜತೆಗೆ ಉಪಕಾಲುವೆಗಳ ಮೂಲಕ ನೀರು ಪೋಲಾಗಿ ನದಿಗೆ ಸೇರದಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು. •ಟಿ. ವೆಂಕಟಸತ್ಯನಾರಾಯಣ, ಅಧ್ಯಕ್ಷರು 21ನೇ ಉಪಕಾಲುವೆ ನೀರು ಬಳಕೆದಾರರ ಸಂಘ
Advertisement

Udayavani is now on Telegram. Click here to join our channel and stay updated with the latest news.

Next