Advertisement
ಬಿ.ಆರ್. ಶೆಟ್ಟಿ ಅವರ ಬಿಆರ್‌ಎಸ್ ಸಂಸ್ಥೆ ನಡೆಸುತ್ತಿರುವ ಉಡುಪಿಯ ತಾಯಿ-ಮಕ್ಕಳ ಆಸ್ಪತ್ರೆಯನ್ನು ನಡೆ ಸಲು ಕಷ್ಟವಾಗಿ ಸರಕಾರಕ್ಕೆ ಬಿಟ್ಟುಕೊಡಲು ಸಿದ್ಧವೆಂದು ಪತ್ರ ಬರೆದು ತಿಳಿಸಿದೆ ಎಂಬ ಕೆಲವು ಗಣ್ಯರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆಯು, ನಾವು ಎರಡು ವರ್ಷಗಳಿಂದ ನಿರ್ಧಾರಕ ಒಪ್ಪಂದಕ್ಕೆ ಸಹಿ ಹಾಕುವಂತೆ ಪದೇ ಪದೇ ಸರಕಾರಕ್ಕೆ ನೆನಪಿಸಿದರೂ ಈವರೆಗೆ ಸಹಿ ಹಾಕಿಲ್ಲ ಎಂದಿದೆ.
70 ಬೆಡ್‌ಗಳು, ಕಳಪೆ ಸೌಲಭ್ಯ ಗಳಿದ್ದ ಈ ಆಸ್ಪತ್ರೆಯನ್ನು 200 ಬೆಡ್‌ಗಳ ಅತ್ಯಾಧುನಿಕ ಆಸ್ಪತ್ರೆಯಾಗಿ ನಿರ್ಮಿಸಲಾಯಿತು. ಎರಡು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಸುಮಾರು 1.44 ಲ. ಹೊರ ರೋಗಿ ಗಳಿಗೆ ಚಿಕಿತ್ಸೆ ನೀಡಿದ್ದು, 6,595 ಹೆರಿಗೆ ಮಾಡಿಸಲಾಗಿದೆ. ರಾಜ್ಯದ 28 ಜಿಲ್ಲೆಗಳ ಮತ್ತು ಹೊರ ರಾಜ್ಯಗಳ ವಲಸೆ ಕಾರ್ಮಿಕರ ಈ ಆಸ್ಪತ್ರೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಸಂಸ್ಥೆಯು ನಿರ್ವಹಣೆಗೆ 3 ಕೋ.ರೂ. ವ್ಯಯಿಸುತ್ತಿದೆ. ವಿವಿಧ ವಿಭಾಗದಲ್ಲಿ 350ಕ್ಕೂ ಅಧಿಕ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೆಲ್ಲ ಸೇವೆ ಉಚಿತವಾಗಿ ಈ ಖರ್ಚುಗಳನ್ನು ಡಾ| ಬಿ.ಆರ್. ಶೆಟ್ಟಿ ಭರಿಸುತ್ತಿದ್ದಾರೆ ಎಂದು ಸಂಸ್ಥೆ ಹೇಳಿದೆ. ಆಸ್ಪತ್ರೆಗೆ ಬರುವ ಎಲ್ಲರಿಗೂ ನೀಡುತ್ತಿರುವ ಉಚಿತ ಚಿಕಿತ್ಸೆಗೆ ಅನುಕೂಲ ವಾಗುವಂತೆ ಪಕ್ಕದಲ್ಲೇ ನಾವು ನಿರ್ಮಿಸಬೇಕಾಗಿರುವ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆ ಪರವಾನಿಗೆಯನ್ನೂ ನೀಡುತ್ತಿಲ್ಲ. ಈ ಎರಡೂ ವಿಷಯ ಗಳನ್ನು ನೆನಪಿಸಿ, ಅವುಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಸ್ಥೆ ಈಗಾಗಲೇ ಹಲವು ಪತ್ರಗಳನ್ನು ಬರೆದಿದೆ. ಆದರೆ ದುರದೃಷ್ಟವಶಾತ್, ಇದನ್ನು ತಪ್ಪಾಗಿ ಅರ್ಥೈಸಿದ ಕೆಲವು ಗಣ್ಯರು ಸಂಸ್ಥೆ ಆಸ್ಪತ್ರೆಯನ್ನು ಸರಕಾರಕ್ಕೆ ಒಪ್ಪಿಸಲು ನಿರ್ಧರಿಸಿದ್ದಾಗಿ ಮಾಧ್ಯಮಗಳಿಗೆ ತಿಳಿಸಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಂಸ್ಥೆ ಸ್ಪಷ್ಟೀಕರಣದಲ್ಲಿ ತಿಳಿಸಿದೆ.