Advertisement
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ಸೋಮವಾರ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಸರ್ಕಾರವು ಬಿಜೆಪಿ ಪರ ಒಲವು ಹೊಂದಿರುವವರ ವಿರುದ್ಧ ಸುಳ್ಳು ಆರೋಪ ಹೊರಿಸಿ ತೊಂದರೆ ನೀಡಲಾರಂಭಿಸಿದೆ.
Related Articles
Advertisement
ಈ ಸಂಬಂಧ ಬಿಜೆಪಿ ನಾಯಕರು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿರಾಜು ಅವರನ್ನು ಭೇಟಿ ಮಾಡಿ ಬಿಜೆಪಿ ಕಾರ್ಯಕರ್ತರು, ಪಕ್ಷದ ಪರ ಒಲವುಳ್ಳವರನ್ನು ಗುರಿಯಾಗಿಸಿ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವ ಬಗ್ಗೆ ಉತ್ತರ ನೀಡುವಂತೆ ಕೋರಲಾಯಿತು.
ಆದರೆ ಪೊಲೀಸ್ ಮಹಾನಿರ್ದೇಶಕರು ಸೂಕ್ತ ಸಮಜಾಯಿಷಿ ನೀಡಲು ತಡವರಿಸಿದ್ದು, ಗೃಹ ಸಚಿವರ ಆಣತಿಯಂತೆ ಪೊಲೀಸರು ಕಾರ್ಯ ನಿರ್ವಹಿಸುತ್ತಿರುವುದನ್ನು ಸಾಬೀತುಪಡಿಸಿದಂತಿತ್ತು. ಈ ನಡುವೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವರ್ಗಾಯಿಸಿದ್ದು, ಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ತನಿಖೆ ಜವಾಬ್ದಾರಿ ವಹಿಸಿದೆ.
ಹೇಮಂತ್ ನಿಂಬಾಳ್ಕರ್ ಅವರು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಪತಿಯಾಗಿದ್ದು, ಆಡಳಿತ ಪಕ್ಷವನ್ನು ಓಲೈಸುವ ರೀತಿಯಲ್ಲಿ ತನಿಖೆ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಬಿಜೆಪಿ ಕಾರ್ಯಕರ್ತರು, ಬೆಂಬಲಿಗರನ್ನೇ ಗುರಿಯಾಗಿಸಿ ಪ್ರಕರಣ ದಾಖಲಿಸುತ್ತಿರುವ ಬಗ್ಗೆ ಸಿಐಡಿ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದರೂ ಸಮರ್ಥನೀಯ ಸಮಜಾಯಿಷಿ ನೀಡಿಲ್ಲ ಎಂದು ವಿವರಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಅವರು ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪ್ರಧಾನಿಯವರನ್ನು ಹತ್ಯೆ ಮಾಡುವಂತೆ ಕರೆ ನೀಡಿದ್ದರು. ಈ ಸಂಬಂಧ ವಿಡಿಯೋ ದಾಖಲೆ ನೀಡಿದರೂ ನಗರ ಪೊಲೀಸ್ ಆಯುಕ್ತರ ಈವರೆಗೆ ಕ್ರಮ ಕೈಗೊಂಡಿಲ್ಲ. ಬೀದರ್‌ನ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿಯವರ ಬಗ್ಗೆ ಅವಹೇಳನಕಾರಿ ಹೆಳಿಕೆ ನೀಡಿದ್ದರು.
ಈ ಬಗ್ಗೆಯೂ ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಆಡಳಿತ ಪಕ್ಷದವರ ವಿರುದ್ಧ ಕ್ರಮ ಕೈಗೊಳ್ಳದೆ ಪೊಲೀಸರು ಮೌನ ವಹಿಸಿರುವುದು ಅವರ ಮೇಲಿನ ಒತ್ತಡವನ್ನು ತೋರಿಸತ್ತದೆ. ಆದರೆ ಗೃಹ ಸಚಿವರು ದೂರು ನೀಡಿದರೆ ಪೊಲೀಸರು ತಕ್ಷಣವೇ ಸಾಮಾಜಿಕ ಜಾಲತಾಣ ಕಾರ್ಯಕರ್ತರು, ಪತ್ರಕರ್ತರು, ಧಾರ್ಮಿಕ ಕಾರ್ಯಕರ್ತರ ವಿರುದ್ಧ ಸುಳ್ಳು ದೂರು ದಾಖಲಿಸಿ ಬಂಧಿಸುವ ಮೂಲಕ ಮೆಚ್ಚಿಸುವ ಪ್ರಯತ್ನ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂ.ಬಿ.ಪಾಟೀಲ್ ಅವರ ಹೆಸರಲ್ಲಿ ನಕಲಿ ಪತ್ರ ಸೃಷ್ಟಿಸಿದ್ದಾರೆ ಎನ್ನುವುದಾದರೆ ನಿಜವಾದ ದುಷ್ಕರ್ಮಿಗಳನ್ನು ಪೊಲೀಸರು ಪತ್ತೆ ಹಚ್ಚಿ ಕ್ರಮ ಜರುಗಿಸುವ ಇಲ್ಲವೇ ಪತ್ರದ ಸಾಚಾತನವನ್ನು ಪತ್ತೆ ಮಾಡುವ ಬದಲಿಗೆ ಯಾವುದೇ ಸಂಚು, ಪಾತ್ರವಿಲ್ಲದ ಮುಗ್ಧ ಪತ್ರಕರ್ತ ಹೇಮಂತ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
ಗೃಹ ಸಚಿವರನ್ನು ಮೆಚ್ಚಿಸಲು ಸುಳ್ಳು ಆರೋಪ ಹೊರಿಸಿದ್ದಾರೆ. ಹಾಗಾಗಿ ಕೂಡಲೇ ಕೇಂದ್ರ ಗೃಹ ಸಚಿವರು ಮಧ್ಯಪ್ರವೇಶಿಸಬೇಕು. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಬಿಜೆಪಿ ಕಾರ್ಯಕರ್ತವಿರುದ್ಧ ಪ್ರತೀಕಾರ ತೆಗೆದುಕೊಳ್ಳುವ ಮನೋಭಾವವನ್ನು ನಿಲ್ಲಿಸುವಂತೆ ಸೂಚಿಸುವ ಜತೆಗೆ ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸುವಂತೆ ನಿರ್ದೇಶನ ನೀಡಬೇಕು ಎಂದು ಶೋಭಾ ಕರಂದ್ಲಾಜೆ ಪತ್ರದಲ್ಲಿ ಮನವಿ ಮಾಡಿದ್ದಾರೆ.