Advertisement

ಪತ್ರ ಮುಖೇನ ಪಶ್ಚಾತ್ತಾಪ ಸ್ಫೋಟ

06:26 AM Dec 29, 2018 | Team Udayavani |

ಬೆಂಗಳೂರು: “ನಾನು ಮಾಡಿದ ಕೃತ್ಯದ ಬಗ್ಗೆ ನನಗೆ ತೀವ್ರ ನೋವಿದೆ. ಅದಕ್ಕಾಗಿ ಎಲ್ಲಾ ಭಾರತೀಯರ ಕ್ಷಮೆ ಕೇಳುತ್ತೇನೆ. ಯಾವುದೇ ಭಾರತೀಯನಿಗೂ ನೋವುಂಟುಮಾಡಬೇಕೆಂಬ ಉದ್ದೇಶ ನನಗೆ ಇರಲಿಲ್ಲ. ವಿಶೇಷವಾಗಿ, ಚರ್ಚ್‌ಸ್ಟ್ರೀಟ್‌ ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟಿರುವ ಮಹಿಳೆಯ ಕುಟುಂಬದವರ ಕ್ಷಮೆ ಯಾಚಿಸುತ್ತೇನೆ.’

Advertisement

ಇದು, 2014ರಲ್ಲಿ ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ರಫೀಕ್‌ ಅಲಿಯಾಸ್‌ ಜಾವೇದ್‌ ಅಲಾಂಜೇಬ್‌ ಅಫ್ರಿದಿಯ ಪಶ್ಚಾತ್ತಾಪದ ಮಾತು. 2014ರ ಡಿ.28ರ ರಾತ್ರಿ 8.30ರ ಸುಮಾರಿಗೆ ಚರ್ಚ್‌ಸ್ಟ್ರೀಟ್‌ ಬಳಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ತಮಿಳುನಾಡಿನ ಒಬ್ಬ ಮಹಿಳೆ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಘಟನೆ ನಡೆದು ಎರಡು ವರ್ಷಗಳ ಬಳಿಕ ಸಿಮಿ ಸಂಘಟನೆ ಸದಸ್ಯ ರಫೀಕ್‌ ಅಲಿಯಾಸ್‌ ಜಾವೇದ್‌ ಅಲಾಂಜೇಬ್‌ ಅಫ್ರಿದಿ ಹಾಗೂ ಇತರರನ್ನು ಬಂಧಿಸಿತ್ತು. ಬಳಿಕ ಸ್ಫೋಟದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ರಫೀಕ್‌ಗೆ ತನ್ನ ಕೃತ್ಯದ ಬಗ್ಗೆ ಬೇಸರವಾಗಿದೆ. ಒಬ್ಬ ಭಾರತೀಯನಾಗಿ ಭಾರತಕ್ಕೇ ಕೇಡು ಬಗೆದ ಬಗ್ಗೆ ಪಶ್ಚಾತ್ತಾಪವಾಗಿದೆ. ಈ ಕುರಿತಂತೆ ಆತ ಜೈಲಿನಲ್ಲಿದ್ದುಕೊಂಡೆ ಗುಜರಾತಿ ಭಾಷೆಯಲ್ಲಿ ಪತ್ರ ಬರೆದಿಟ್ಟಿದ್ದ. ಈ ಪತ್ರ ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿದ್ದು, ಅವರು ಅದನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿಸಿದ್ದಾರೆ. ಈ ಪತ್ರ “ಉದಯವಾಣಿ’ಗೆ ಲಭ್ಯವಾಗಿದೆ.

ಪತ್ರದ ಸಾರಾಂಶ: “ನನ್ನ ಹೆಸರು ರಫೀಕ್‌ ಅಲಿಯಾಸ್‌ ಜಾವೇದ್‌ ಅಲಾಂಜೇಬ್‌ ಅಫ್ರಿದಿ. ನನ್ನ ತಂದೆ ಮಶ್ರೂರ್‌ ಅಹ್ಮದ್‌. ಗುಜರಾತ್‌ನ ಅಹಮದಾಬಾದ್‌ನ ಜುನಾಪುರ ಪ್ರದೇಶದ ನ್ಯೂ ಆಶಿಯಾನಾ ಸೊಸೈಟಿಯ ನಿವಾಸಿಯಾಗಿದ್ದೆ. 2013ರ ಮೇ ತಿಂಗಳಿಂದ ಪರಪ್ಪನ ಅಗ್ರಹಾರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆ. ಜಮಾತೆ ಇಸ್ಲಾಮಿ ಸಂಘಟನೆಗೆ ಸೇರಿಕೊಂಡು, ಸಿಮಿ ಸದಸ್ಯನಾಗಿ, ಅದರ ಕೆಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದೆ’.

Advertisement

ಅಬ್ದುಲ್‌ ಖಾನ್‌ ಪರಿಚಯ: “ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿದ್ದ ನಾನು, ಫೇಸ್‌ಬುಕ್‌ನಲ್ಲಿ ಚಾಟ್‌ ಮಾಡುವಾಗ, ಅಬ್ದುಲ್‌ ಖಾನ್‌ ಆಫ್ ಅಯಾಜ್‌ ಖಾನ್‌ ಸಲ್ಫಿ (ಫೇಸ್‌ಬುಕ್‌ಖಾತೆ ಹೆಸರು) ಎಂಬಾತನ ಸಂಪರ್ಕವಾಯಿತು. ಆತನ ಜತೆ ಇಸ್ರೇಲ್‌ ವಿರುದ್ಧದ ಯೋಚನೆಗಳನ್ನು ಹೇಳಿಕೊಳ್ಳುತ್ತಿದ್ದೆ. ಆದರೆ, ಭಾರತೀಯರಿಗೆ ತೊಂದರೆ ಉಂಟುಮಾಡುವ ಯಾವುದೇ ಕೃತ್ಯದಲ್ಲಿ ಎಂದಿಗೂ ತೊಡಗುವುದಿಲ್ಲ ಎಂದು ಆತನಿಗೆ ಸ್ಪಷ್ಟವಾಗಿ ಹೇಳಿದ್ದೆ. ನಂತರ ತನ್ನೊಂದಿಗೆ ಚಾಟ್‌ ಮುಂದುವರಿಸಿದ್ದ ಆತ, ಇಸ್ರೇಲ್‌ ವಿರುದ್ಧ ಏನಾದರೂ ಮಾಡಬೇಕೆಂದಿದ್ದರೆ ನಿನಗೆ ತಿಳಿಸುತ್ತೇನೆ ಎಂದು ಹೇಳಿದ್ದ.’

“2014ರ ನವೆಂಬರ್‌ನಲ್ಲಿ ಮತ್ತೆ ಚಾಟ್‌ ಮಾಡಿದ್ದ ಆತ, ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಕೊಕನಟ್‌ ಗ್ರೋವ್‌ ಎಂಬ ರೆಸ್ಟೋರೆಂಟ್‌ ಇದೆ. ಡಿಸೆಂಬರ್‌ 28ರಂದು ನಮ್ಮ ತಂಡವೊಂದು ಅಲ್ಲಿಗೆ ಊಟಕ್ಕೆ ಬರುತ್ತದೆ ಎಂದು ಹೇಳಿದ್ದ. ನಂತರ ಫೇಸ್‌ಬುಕ್‌ ಮತ್ತು ಮೆಸೆಂಜರ್‌ ಮೂಲಕ ಆತ ನನಗೆ ಬಾಂಬ್‌ ತಯಾರಿಸುವುದರ ಬಗ್ಗೆ ಹೇಳಿಕೊಟ್ಟಿದ್ದ. ಅಲ್ಲದೆ, ಬಾಂಬ್‌ ತಯಾರಿಸುವ ವಿಧಾನದ ಕುರಿತ ಲಿಂಕ್‌ ಒಂದನ್ನೂ ಕಳುಹಿಸಿದ್ದ. ಅದರಲ್ಲಿ ಹೇಳಿರುವಂತೆ, ಬಾಂಬ್‌ ತಯಾರಿಕೆಗೆ ಬೇಕಾದ ಎಲ್ಬೋ ಪೈಪ್‌, 2 ಪ್ಲಗ್‌ಗಳು,

ಚೈನೀಸ್‌ ಡೆಕೊರೇಷನ್‌ ಲೈಟ್‌ಗಳು, ಸುಮಾರು 300 ಬೆಂಕಿ ಕಡ್ಡಿಗಳು, ಅಲಾರಾಂ ಗಡಿಯಾರ, ವೈರ್‌, ಬ್ಯಾಟರಿ ಇತರೆ ವಸ್ತುಗಳನ್ನು ಸಂಗ್ರಹಿಸಿಕೊಂಡೆ. ಬಳಿಕ ನನ್ನ ಬಳಿಯಿದ್ದ ಡ್ರಿಲ್ಲಿಂಗ್‌ ಯಂತ್ರವನ್ನು ಬಳಸಿಕೊಂಡೆ. ಈ ಮಾಹಿತಿಯನ್ನು ತಿಳಿಸಿದ ಕೂಡಲೇ ಆತ, ನನಗೆ ಆ ಸ್ಥಳಕ್ಕೆ ಹೋಗಿ ಒಮ್ಮೆ ಪರಿಶೀಲಿಸುವಂತೆ ಸೂಚಿಸಿದ್ದ. ಹೀಗಾಗಿ ಡಿ.23ರಂದು ನಾನು ಚರ್ಚ್‌ಸ್ಟ್ರೀಟ್‌ಗೆ ಹೋಗಿದ್ದೆ. ನಂತರ ನಾನೇ ಸಿದ್ಧಪಡಿಸಿದ್ದ ಬಾಂಬ್‌ನ್ನು ಆತನಿಗೆ ತೋರಿಸಿದ್ದೆ,’ ಎಂದು ಬರೆದಿದ್ದಾನೆ.

ಬಾಂಬ್‌ ಇಟಿದ್ದು ನಾನೇ!: ಡಿ.28ರಂದು ತಯಾರಿಸಿದ್ದ ಬಾಂಬ್‌ ಅನ್ನು ಟವೆಲ್‌ ಹಾಗೂ ತೆಲುಗು ಪತ್ರಿಕೆಯಲ್ಲಿ ಸುತ್ತಿಕೊಂಡು ಅದರಲ್ಲಿ ಸ್ವಲ್ಪ ಮೊಳೆಗಳನ್ನು ಹಾಕಿದೆ. ಆದರೆ, ಅಂದು ಮೊಬೈಲ್‌ ಅನ್ನು ಕೊಂಡೊಯ್ದಿರಲಿಲ್ಲ. ಅಲ್ಲದೆ, ಗುರುತು ಪತ್ತೆಯಾಗದಂತೆ ಎಚ್ಚರಿಕೆ ವಹಿಸಿ, ಕ್ಯಾಪ್‌ ಮತ್ತು ಜರ್ಕಿನ್‌ ಜತೆಗೆ ಕರವಸ್ತ್ರವನ್ನೂ ಬಳಸಿ ಮುಖ ಕಾಣದಂತೆ ಮುಚ್ಚಿಕೊಂಡಿದ್ದೆ.

ಕೊಕನಟ್‌ ಗ್ರೋವ್‌ ರೆಸ್ಟೋರೆಂಟ್‌ ಬಳಿ ಹೋದಾಗ, ಅಲ್ಲಿ ಬಹಳಷ್ಟು ಸಂಖ್ಯೆಯ ಪೊಲೀಸರಿದ್ದರು. ನಾಲ್ಕೈದು ಬಾರಿ ಅತ್ತಿತ್ತ ಓಡಾಡಿದೆ. ರಾತ್ರಿ 7.15ರ ಸುಮಾರಿಗೆ ಅಲ್ಲಿ ಬಾಂಬ್‌ ಇಟ್ಟೆ. ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ವಾಪಸ್‌ ಬಂದು, ನೇರವಾಗಿ ಬೈಕ್‌ನಲ್ಲಿ ತಿರುಮಲಪುರದಲ್ಲಿರುವ ತಬ್ರೇಜ್‌ ಬಳಿ ತೆರಳಿ, 15 ಸಾವಿರ ರೂ.ಗೆ ಬೈಕ್‌ ಅನ್ನು ಆತನಿಗೆ ಮಾರಾಟ ಮಾಡಿದೆ. ಬಳಿಕ ಅಂದು ರಾತ್ರಿ ಅಲ್ಲಿಯೇ ಉಳಿದುಕೊಂಡೆ. ಮರುದಿನ ಮತ್ತೆ ಬೆಂಗಳೂರಿಗೆ ವಾಪಸ್‌ ಬಂದು, ಜ.6ರಂದು ಮುಂಬೈಗೆ ಹೊರಟೆ,’ ಎಂದು ರಫೀಕ್‌ ಪತ್ರದಲ್ಲಿ ಹೇಳಿದ್ದಾನೆ.

ಸುದ್ದಿ ಓದಿ ನೋವಾಯಿತು!: “ಸ್ಫೋಟದ ಸುದ್ದಿ ಓದಿದಾಗ ಭಾರತೀಯ ಮಹಿಳೆಯೊಬ್ಬರು ಮೃತಪಟ್ಟು, ನಾಲ್ಕೈದು ಮಂದಿ ಭಾರತೀಯರು ಗಾಯಗೊಂಡಿದ್ದಾರೆ ಎಂಬ ವಿಷಯ ತಿಳಿಯಿತು. ಆಗ ನನಗೆ ಬಹಳ ನೋವಾಯಿತು. ಕೂಡಲೇ ಅಬ್ದುಲ್‌ ಖಾನ್‌ನನ್ನು ಸಂಪರ್ಕಿಸಲು ಯತ್ನಿಸಿದೆ. ಆದರೆ, ಅಷ್ಟರಲ್ಲಿ ಆತ ಫೇಸ್‌ಬುಕ್‌ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದ. ನಾನು ಆತನೊಂದಿಗೆ “ಫ‌ರ್ಹಾನ್‌ ಖುರೇಷಿ’ ಎಂಬ ನನ್ನ ಫೇಸ್‌ಬುಕ್‌ ಖಾತೆ ಮೂಲಕ ಚಾಟ್‌ ಮಾಡುತ್ತಿದ್ದೆ. ಬಾಂಬ್‌ ಸ್ಫೋಟದ ನಂತರ ಅದನ್ನು ಡಿಲೀಟ್‌ ಮಾಡಿದೆ,’ ಎಂದು ಆರೋಪಿ ಬರೆದಿದ್ದಾನೆ.

ಚರ್ಚ್‌ ಸ್ಟ್ರೀಟ್‌ ಸ್ಫೋಟಕ್ಕೆ ಐದು ವರ್ಷ: ಚರ್ಚ್‌ಸ್ಟ್ರೀಟ್‌ ಬಾಂಬ್‌ ಸ್ಫೋಟ ಪ್ರಕರಣ ನಡೆದು ಐದು ವರ್ಷಗಳು ಕಳೆದಿವೆ. 2014ರ ಡಿ.28ರಂದು ರಾತ್ರಿ 8.30ಕ್ಕೆ ಎಂ.ಜಿ.ರಸ್ತೆ ಸಮೀಪದ ಚರ್ಚ್‌ಸ್ಟ್ರೀಟ್‌ನಲ್ಲಿರುವ ಕೊಕನಟ್‌ ಗ್ರೋವ್‌ ರೆಸ್ಟೋರೆಂಟ್‌ ಬಳಿ ಐಇಡಿ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಹೊಸ ವರ್ಷಾಚರಣೆಗೆ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ಭವಾನಿ (38) ಎಂಬುವರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

ಬಳಿಕ ಬೆಂಗಳೂರು ಪೊಲೀಸರು, ಸುತ್ತಮುತ್ತಲ ಹೊಟೇಲ್‌, ಕ್ಲಬ್‌ಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ, ನಗರದ ಸುತ್ತ ನಾಕಾಬಂದಿ ಹಾಕಿ ಎಲ್ಲೆಡೆ ಹುಡುಕಾಡಿದರೂ ದುಷ್ಕರ್ಮಿಗಳ ಸುಳಿವು ಪತ್ತೆಯಾಗಲಿಲ್ಲ. ಬಳಿಕ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬೆನ್ನು ಬಿದ್ದಿತ್ತು.

ಈ ವೇಳೆ ಘಟನಾ ಸ್ಥಳದಲ್ಲಿ ಶಂಕಿತನೊಬ್ಬ ಅನುಮಾನಸ್ಪದವಾಗಿ ಓಡಾಡುವ ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿತ್ತು. ಆದರೆ, ಅಸ್ಪಷ್ಟವಾಗಿದ್ದ ದೃಶ್ಯಾವಳಿಗಳಿಂದ ಆರೋಪಿ ಸುಳಿವು ಸಿಗಲಿಲ್ಲ. ಕೊನೆಗೆ ಎರಡು ವರ್ಷದ ಬಳಿಕ ಸಿಮಿ ಸಂಘಟನೆ ಸದಸ್ಯ ರಫೀಕ್‌ ಅಲಿಯಾಸ್‌ ಜಾವೇದ್‌ ಅಲಾಂಜೇಬ್‌ ಅಫ್ರಿದಿ ಹಾಗೂ ಇತರರನ್ನು ಬಂಧಿಸಿತ್ತು. ಬಳಿಕ ತನಿಖೆ ಮುಕ್ತಾಯಗೊಳಿಸಿದ ಎನ್‌ಐಎ, ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ವಿಚಾರಣೆ ಮುಂದುವರಿದಿದೆ.

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next