ಬೆಂಗಳೂರು: ಅದೊಂದು ಅಪರೂಪದ ವೇದಿಕೆ. ಅಲ್ಲಿ ತಮ್ಮವರ ಅಗಲಿಕೆಯ ನೋವಿನಲ್ಲೂ ಮತ್ತೂಬ್ಬರ ಜೀವಗಳಿಗೆ ಮಿಡಿದವರು ಸೇರಿದ್ದರು. ಹೀಗೆ ನೂರಾರು ಜೀವಗಳನ್ನು ರಕ್ಷಿಸಿದ ಸಾರ್ಥಕಭಾವ ಆ ಮುಖಗಳಲ್ಲಿ ಕಾಣುತ್ತಿತ್ತು. ಅವರಿಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನ ಹೇಳುವುದರ ಜತೆಗೆ ಅವರ ಕಾರ್ಯಕ್ಕೆ ಪ್ರಶಂಸಾ ಪತ್ರವನ್ನೂ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗೃಹ ಕಚೇರಿ “ಕೃಷ್ಣಾ’ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಪಘಾತದಲ್ಲಿ ಸಾವನ್ನಪ್ಪಿದ ಪತಿಯ ಅಂಗಾಂಗಳನ್ನು ದಾನ ಮಾಡಿದ್ದ ಪತ್ನಿ, ಕೊಲೆಗೀಡಾದ ವ್ಯಕ್ತಿಯ ಅಂಗಾಂಗಳನ್ನು ಬೇರೆಯವರಿಗೆ ನೀಡಿ ಮಾನವೀಯತೆ ಮೆರೆದ ಕುಟುಂಬದ ಸದಸ್ಯರು ಹೀಗೆ ಹತ್ತಾರು ಕುಟುಂಬಗಳು ಪ್ರಶಂಸಾ ಪತ್ರ ಸ್ವೀಕರಿಸುವಾಗ ಅಗಲಿದ ತಮ್ಮ ಕುಟುಂಬದ ಸದಸ್ಯರನ್ನು ನೆನೆದು ಕಣ್ಣೀರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀವು ಕೈಗೊಂಡ ನಿರ್ಧಾರ ಸುಲಭವಲ್ಲ. ಇತರರ ಜೀವ ಉಳಿಸುವ ಕೆಲಸ ನೀವು ಮಾಡಿದ್ದೀರಿ. ನೀವು ಮತ್ತೂಬ್ಬರ ಜೀವಗಳಿಗೆ ಮಿಡಿದಿದ್ದೀರಿ. ಮುಂದಿನ ದಿನಗಳಲ್ಲಿ ನಿಮಗೆ ಯಾವುದೇ ರೀತಿಯ ಸಂಕಷ್ಟ ಎದುರಾದರೂ ಸರಕಾರ ನಿಮ್ಮ ಕಷ್ಟಗಳಿಗೆ ಮಿಡಿಯಲಿದೆ. ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ ಎಂದು ಸ್ಥೈರ್ಯ ತುಂಬಿದರು.ತಮ್ಮ ಹಿಂದಿನ ಅವಧಿಯಲ್ಲಿ ಅಂಗಾಂಗ ದಾನಕ್ಕೆ ಸೊಸೈಟಿ ಸ್ಥಾಪಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿ, ಇನ್ನಷ್ಟು ಜನ ಅಂಗಾಂಗ ದಾನಕ್ಕೆ ಮುಂದಾಗಬೇಕು. ಅಲ್ಲದೆ, ಈ ಬಗ್ಗೆ ಜಾಗೃತಿ ಅಭಿಯಾನಗಳು ಮತ್ತಷ್ಟು ಪರಿಣಾಮಕಾರಿ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಅಂಗಾಂಗ ದಾನ ಕೋರಿ, ನೋಂದಾಯಿಸಿಕೊಂಡವರ ಸಂಖ್ಯೆ 8 ಸಾವಿರಕ್ಕೂ ಹೆಚ್ಚಿದ್ದು, ಕಳೆದ ಒಂದು ವರ್ಷದಲ್ಲಿ ಕೇವಲ 178 ಅಂಗಾಂಗ ದಾನ ನಡೆದಿದೆ. ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕಳೆದೆರಡು ತಿಂಗಳಲ್ಲೇ 21 ಜನ ಅಂಗಾಂಗ ದಾನ ನಡೆದಿದೆ. ಆದರೆ ಇದು ಇನ್ನಷ್ಟು ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು, ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಆಯುಕ್ತ ಡಿ.ರಂದೀಪ್ ಉಪಸ್ಥಿತರಿದ್ದರು.
ಅಂಗಾಂಗ ದಾನಕ್ಕಾಗಿ ಪ್ರತಿಜ್ಞೆಗಳ ನೋಂದಣಿ ಅತ್ಯಂತ ಸುಲಭ. ವೆಬ್‌ಸೈಟ್: //www.jeevasarthakate.karnataka.gov.in ಕ್ಲಿಕ್ ಮಾಡುತ್ತಿದ್ದಂತೆ ಪ್ರತಿಜ್ಞಾ ಕ್ಯುಆರ್ ಕೋಡ್ ಬರುತ್ತದೆ. ಸ್ಕ್ಯಾನ್ ಮಾಡಿ ಪ್ರತಿಜ್ಞೆ ಕೈಗೊಳ್ಳಬಹುದು. ಮಾಹಿತಿಗೆ ಮೊ: 98450 06768 ಸಂಪರ್ಕಿಸಬಹುದು.
178 – ಕಳೆದ ಒಂದು ವರ್ಷದಲ್ಲಾದ ಅಂಗಾಂಗಗಳ ದಾನ
21 – ಕಳೆದೆರಡು ತಿಂಗಳಲ್ಲಾದ ಅಂಗಾಂಗಗಳ ದಾನ
2- ಅಂಗಾಂಗ ದಾನದಲ್ಲಿ ದೇಶದಲ್ಲಿ ಕರ್ನಾಟಕಕ್ಕಿರುವ ಸ್ಥಾನ
717- ಕಳೆದ ಒಂದು ದಶಕದ ಅಂಗಾಂಗ ದಾನಿಗಳ ಸಂಖ್ಯೆ
8,374 – ಅಂಗಾಂಗಕ್ಕಾಗಿ ಕಾಯುತ್ತಿರುವವರ ಸಂಖ್ಯೆ
5,942 – ಮೂತ್ರಪಿಂಡಗಳಿಗಾಗಿಯೇ ಕಾಯುತ್ತಿರುವವರ ಸಂಖ್ಯೆ